ಹೊಸದಿಲ್ಲಿ: ಕೆನಡಾದ ವ್ಯಾಂಕೋವರ್‌ನಲ್ಲಿರುವ ಪಂಜಾಬ್‌ನ ಖ್ಯಾತ ಗಾಯಕ ಅಮೃತಪಾಲ್ ಸಿಂಗ್ ಧಿಲ್ಲೋನ್ ಅವರ ಮನೆಯ ಹೊರಗೆ ರವಿವಾರ (ಸೆಪ್ಟೆಂಬರ್ 1) ರಾತ್ರಿ ಗುಂಡಿನ ದಾಳಿ ನಡೆದಿದ್ದು ಇದೀಗ ಗಾಯಕ ತನ್ನ ಹಾಗೂ ಕುಟುಂಬದ ಕುರಿತು ಹೇಳಿಕೆ ನೀಡಿರುವ ಮೊದಲ ಪೋಸ್ಟ್ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಗುಂಡಿನ ದಾಳಿ ಕುರಿತು ಎಪಿ ಧಿಲ್ಲೋನ್ ತಮ್ಮ ಸಾಮಾಜಿಕ ಮಾಧ್ಯಮ (ಇನ್‌ಸ್ಟಾಗ್ರಾಮ್) ಖಾತೆಯಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದು ಅದರಲ್ಲಿ “ನಾನು ಸುರಕ್ಷಿತವಾಗಿದ್ದೇನೆ. ನನ್ನ ಕುಟುಂಬವೂ ಸುರಕ್ಷಿತವಾಗಿದೆ. ನಮ್ಮನ್ನು ಸಂಪರ್ಕಿಸಿದ ನಿಮ್ಮೆಲ್ಲರಿಗೂ ಧನ್ಯವಾದಗಳು. ನಿಮ್ಮ ಬೆಂಬಲವೇ ಎಲ್ಲವೂ. ಎಂದು ಪೋಸ್ಟ್ ಹಾಕಿದ್ದಾರೆ.
ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಸಹಚರ ರೋಹಿತ್ ಗೋಡಾರಾ ಈ ದಾಳಿಯ ಹೊಣೆ ಯನ್ನು ಹೊತ್ತಿದ್ದಾನೆ. ವಿಕ್ಟೋರಿಯಾ ದ್ವೀಪದಲ್ಲಿರುವ ಧಿಲ್ಲೋನ್ ಮನೆ ಬಳಿ ಹಾಗೂ ಟೊರಾಂಟೋದ ವುಡ್‌ಬ್ರಿಡ್ಜ್ ಬಳಿ ದಾಳಿ ನಡೆದಿರುವ ವೀಡಿಯೋ ವೈರಲ್ ಆಗಿದ್ದು, ರೋಹಿತ್ ಗೋಡಾರಾ ಹೊಣೆ ಹೊತ್ತ ಪೋಸ್ಟ್ ಎಲ್ಲೆಡೆ ಹರಿದಾಡುತ್ತಿದೆ.
ಸಲ್ಮಾನ್ ಜತೆ ಕಾಣಿಸಿಕೊಂಡಿದ್ದಕ್ಕೆ ಧಿಲ್ಲೋನ್‌ರನ್ನು ಗುರಿಯಾಗಿಸಲಾಗಿದೆ ಎಂದು ಗೋಡಾರಾ ಪೋಸ್ಟ್ ತಿಳಿಸಿದೆ. ಸಲ್ಮಾನ್ ಖಾನ್ ಹತ್ಯೆಗೆ ಹಿಂದಿನಿಂದಲೂ ಬಿಷ್ಣೋಯ್ ಗ್ಯಾಂಗ್ ಸಂಚು ನಡೆಸುತ್ತಿದೆ. ಇತ್ತೀಚೆಗೆ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಹಲವು ಸುಲಿಗೆ, ಬೆದರಿಕೆ ಮತ್ತು ಹಿಂಸಾತ್ಮಕ ಅಪರಾಧಗಳಲ್ಲಿ ಭಾಗಿಯಾಗಿದ್ದ 11 ಗ್ಯಾಂಗ್‌ಗಳನ್ನು ದಿಲ್ಲಿ ಪೊಲೀಸರು ಪತ್ತೆಹಚ್ಚಿದ್ದರು.