ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಈಗಾಗಲೇ ಸ್ಥಾಪನೆಯಾಗಿರುವ ಕೈಗಾರಿಕೆಗಳಿಗೆ ಸುಗಮ ಸಂಪರ್ಕ ವ್ಯವಸ್ಥೆ ಕಲ್ಪಿಸುವ ಜತೆಗೆ ಇಡೀ ನಗರದಲ್ಲಿ ಸಂಚಾರ ಸುಗಮಗೊಳಿಸಲು ಪೂರಕವಾದ ಮೂಲ ಸೌಕರ್ಯ ಕಲ್ಪಿಸಲು ಸರ್ಕಾರ ಮುಂದಾಗಿದೆ ಎಂದು ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದರು.
ಸಂಚಾರ ದಟ್ಟಣೆ, ಮಾಲಿನ್ಯ ಇತರೆ ಕಾರಣಗಳಿಂದ ಬೆಂಗಳೂರಿನಲ್ಲಿ ಕೈಗಾರಿಕೆಗಳ ಸ್ಥಾಪನೆಗಿಂತ ಇತರೆ ಪ್ರದೇಶಗಳಲ್ಲಿ ಸ್ಥಾಪನೆಗೆ ಆದ್ಯತೆ ನೀಡಲಾಗಿದೆ. ನಗರದಲ್ಲಿನ ಕೈಗಾರಿಕಾ ಪ್ರದೇಶಗಳಿಗೆ ಸುಗಮ ಸಂಪರ್ಕ ಕಲ್ಪಿಸಲು ಸರ್ಕಾರ ಗಮನ ಹರಿಸಿದೆ ಎಂದು ಅವರು “ಉದಯವಾಣಿ’ಗೆ ಹೇಳಿದ್ದಾರೆ.
ಮೆಟ್ರೋ ಮೊದಲ ಹಂತದ ಯೋಜನೆ ಬಹುತೇಕ ಪೂರ್ಣಗೊಂಡಿದ್ದು, ಎರಡನೇ ಹಂತದ ಕಾಮಗಾರಿ ಪ್ರಗತಿಯಲ್ಲಿದೆ. ಇನೋವೇಟಿವ್ ಅನುದಾನದಡಿ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಕೆ.ಆರ್.ಪುರ ನಡುವೆ 17 ಕಿ.ಮೀ. ಉದ್ದದ ಕಾರಿಡಾರ್ ನಿರ್ಮಾಣಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೂ ಮೆಟ್ರೋ ಸಂಪರ್ಕ ಕಲಿಸುವ ಪ್ರಸ್ತಾವ ಪರಿಶೀಲನೆಯಲ್ಲಿದೆ ಎಂದು ಹೇಳಿದರು.
ನಗರದ ಕೇಂದ್ರ ಭಾಗವನ್ನು ಹೊರಭಾಗದ ಹೆದ್ದಾರಿಗಳಿಗೆ ಸಂಪರ್ಕಿಸುವ ಎಲಿವೇಟೆಡ್ ಕಾರಿಡಾರ್ ನಿರ್ಮಾಣದ ಪ್ರಸ್ತಾವವೂ ಇದೆ. ಬೆಂಗಳೂರಿನ ಅಭಿವೃದ್ಧಿಗೆ ಸರ್ಕಾರ ಭಾರಿ ಮೊತ್ತದ ಅನುದಾನ ನೀಡಿದ್ದು, ಮೂಲ ಸೌಕರ್ಯ ಕಲ್ಪಿಸುವ ಕಾರ್ಯ ದೊಡ್ಡ ಪ್ರಮಾಣದಲ್ಲಿ ನಡೆದಿದೆ ಎಂದು ಮಾಹಿತಿ ನೀಡಿದರು.
ದೇಶದ ಮೂರನೇ ಅತಿ ದೊಡ್ಡ ವಿಮಾನನಿಲ್ದಾಣವೆಂಬ ಹೆಗ್ಗಳಿಕೆಗೆ ಪಾತ್ರವಾದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಎರಡನೇ ರನ್ ವೇ ಹಾಗೂ ಎರಡು ಟರ್ಮಿನಲ್‌ಗಳ ನಿರ್ಮಾಣ ಕಾರ್ಯ ನಡೆದಿದೆ. ಆ ಭಾಗದಲ್ಲಿ ರಾಜ್ಯ ಸರ್ಕಾರದ ವತಿಯಿಂದ ಸಮ್ಮೇಳನ ಕೇಂದ್ರ, ಬಿಜಿನೆಸ್ ಪಾರ್ಕ್ ಸ್ಥಾಪಿಸಲು ಪ್ರಯತ್ನ ನಡೆದಿದೆ ಎಂದರು.
ಡೈನಾಮಿಕ್ ಸಿಟಿ ಎಂಬ ಖ್ಯಾತಿ ನಗರಕ್ಕೆ
ಕೇಂದ್ರ ಸರ್ಕಾರದ ಸಹಯೋಗದಲ್ಲಿ ವಸಂತ ನರಸಾಪುರದಲ್ಲಿ ಮಿಷನ್ ಟೂಲ್ ಪಾರ್ಕ್ ನಿರ್ಮಾಣವಾಗಲಿದೆ. ಹಾಗೆಯೇ ಏರೋಸ್ಪೇಸ್ ಪಾರ್ಕ್‌ನಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ನೆರವಾಗಲು “ಕಾಮನ್ ಫೆಸಿಲಿಟಿ ಸೆಂಟರ್’ ನಿರ್ಮಾಣವಾಗಲಿದೆ.
ಹ್ಯಾವೆಲ್ಸ್, ಪೆಪ್ಸಿ, ಏಷಿಯನ್ ಪೇಂಟ್ಸ್, ಬಯೋಕಾನ್ (ಮಂಗಳೂರು, ಬೆಂಗಳೂರು), ಒರಾಕಲ್ ಸೇರಿದಂತೆ ಹಲವು ಪ್ರತಿಷ್ಠಿತ ಕಂಪನಿಗಳು ರಾಜ್ಯದಲ್ಲಿ ಉದ್ಯಮ ನಡೆಸುತ್ತಿವೆ. 400ಕ್ಕೂ ಹೆಚ್ಚು ಬಹುರಾಷ್ಟ್ರೀಯ ಕಂಪನಿಗಳು ತಮ್ಮ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರವನ್ನು ಬೆಂಗಳೂರಿನಲ್ಲಿ ಹೊಂದಿವೆ. ಆ ಮೂಲಕ ಬೆಂಗಳೂರು ವಿಶ್ವದ ಡೈನಾಮಿಕ್ ಸಿಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಹೇಳಿದರು.