Advertisement

ಸ್ವಾಭಿಮಾನಿ ಸಮಾಜ ನಿರ್ಮಾಣಕ್ಕೆ ಆದ್ಯತೆ:ಎಚ್‌ಡಿಕೆ

08:40 AM Jul 31, 2017 | Harsha Rao |

ಕಾಪು: ಕಾಂಗ್ರೆಸ್‌ ಪಕ್ಷ ಅಲ್ಪಸಂಖ್ಯಾಕರನ್ನು ಬಳಸಿಕೊಂಡರೆ, ಬಿಜೆಪಿ ಹಿಂದೂಗಳನ್ನು ಬಳಸಿಕೊಂಡು ವೋಟ್‌ ಬ್ಯಾಂಕ್‌ ರಾಜಕೀಯ ಮಾಡುತ್ತಿದೆ. ಧರ್ಮ ಮತ್ತು ಜಾತಿಗಳ ನಡುವೆ ವಿಷ ಬೀಜ ಬಿತ್ತಿ, ಅಧಿಕಾರಕ್ಕೆ ಬಂದಿರುವ ಎರಡೂ ಪಕ್ಷಗಳು ಬಳಿಕ ಜನವಿರೋಧಿ ಆಡಳಿತವನ್ನು ನೀಡುತ್ತಿವೆ. ಎರಡೂ ಪಕ್ಷಗಳಿಗೆ ಪರ್ಯಾಯವಾಗಿ ಜೆಡಿಎಸ್‌ ಬೆಳೆಯುತ್ತಿದ್ದು, ಸ್ವಾಭಿಮಾನಿ ಸಮಾಜದ ನಿರ್ಮಾಣಕ್ಕೆ ಜೆಡಿಎಸ್‌ ಪ್ರಮುಖ ಆದ್ಯತೆ ನೀಡಲಿದೆ ಎಂದು ಮಾಜಿ ಮುಖ್ಯಮಂತ್ರಿ ಜೆಡಿಎಸ್‌ ಪಕ್ಷದ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

Advertisement

ಕಟಪಾಡಿ ವೇಣುಗಿರಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನದಲ್ಲಿ ರವಿವಾರ ಜರಗಿದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ವಿಶ್ವಕರ್ಮ ಸಮಾಜ ಬಾಂಧವರ ಸಮಾಲೋಚನ ಸಭೆ – ಬಲವರ್ಧನಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾಮರ್ಥ್ಯದ ಪ್ರದರ್ಶನವಾಗಲಿ
ವಿಶ್ವಕರ್ಮ ಸಮಾಜದ ಕುಲಕಸುಬುದಾರರ ಬೇಡಿಕೆಗನುಗುಣವಾಗಿ ಸಹಕಾರ ಮತ್ತು ಪ್ರೋತ್ಸಾಹ ನೀಡುವಲ್ಲಿ ಇದುವರೆಗಿನ ಸರಕಾರಗಳು ವಿಫಲವಾಗಿವೆ. ಆದರೆ ನೀವು ನನಗೆ ಶಕ್ತಿ ನೀಡಿದಲ್ಲಿ ನಿಮ್ಮ ಪರ ಗಟ್ಟಿ ಧ್ವನಿಯಾಗಿ ಹೋರಾಡುವ ಸಾಮರ್ಥ್ಯ ನನ್ನಲ್ಲಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿಗೆ ಪರ್ಯಾಯವಾಗಿ ಜೆಡಿಎಸ್ಸನ್ನು ಬೆಂಬಲಿಸುವ ಮೂಲಕ ವಿಶ್ವಕರ್ಮ ಸಮಾಜದ ತಾಕತ್ತೇನು ಎನ್ನುವುದನ್ನು ತೋರಿಸಿಕೊಡಲು ಒಳ್ಳೆಯ ಅವಕಾಶಗಳಿವೆ ಎಂದರು.

ಸಮಸ್ಯೆಗಳಿಗೆ ಶೀಘ್ರ ಸ್ಪಂದನೆ
ಪ್ರಪಂಚದಲ್ಲೇ ಅತ್ಯಂತ ವಿಶಿಷ್ಟ ಶೈಲಿಯಲ್ಲಿ ಗುರುತಿಸಲ್ಪಡುತ್ತಿರುವ ವಿಶ್ವಕರ್ಮ ಸಮಾಜವು ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯ ವಾಗಿ ಮತ್ತು ಸಾಮಾಜಿಕವಾಗಿ ಅತ್ಯಂತ ಶೋಷಣೆ ಗೊಳಗಾಗಿದೆ. ವಿಶ್ವಕರ್ಮ ಸಮಾಜವನ್ನು ಮುಂಚೂಣಿಗೆ ತರಬೇಕಾದರೆ ಸಮಾಜದ ಜನರ ಎಲ್ಲ ಸಮಸ್ಯೆಗಳಿಗೂ ಪರಿಹಾರ ದೊರಕಿಸಿಕೊಡುವುದು ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಇಂದಿನಿಂದಲೇ ಪ್ರಯತ್ನಿಸುವೆ ಎಂದು ಭರವಸೆ ನೀಡಿದರು.

ನಿಮ್ಮ ಧ್ವನಿಯಾಗಿ ಹೋರಾಡುವ ಭರವಸೆ ನೀಡಿ ನಿಮ್ಮಿಂದ ದುಡಿಸಿಕೊಂಡು ಉನ್ನತ ಮಟ್ಟಕ್ಕೆ ಹೋದ ನಿಮ್ಮದೇ ಸಮಾಜದ ವ್ಯಕ್ತಿಯೋರ್ವರು ತಮ್ಮ ರಾಜಕೀಯ ಬೆಳವಣಿಗೆಯ ಹಿತದೃಷ್ಟಿಯನ್ನು ಇಟ್ಟು ಕೊಂಡು ಪಕ್ಷಾಂತರ ಮಾಡುತ್ತಿದ್ದಾರೆ. 

Advertisement

ಅಂತಹ ವ್ಯಕ್ತಿಗಳ ನಾಯಕತ್ವಕ್ಕೆ ತಿಲಾಂಜಲಿಯಿಡಬೇಕಿದೆ. ಸಮಾಜದ ಜನರ ಅಭಿಪ್ರಾಯ ಪಡೆದು ಮುನ್ನಡೆಯುವ ವ್ಯಕ್ತಿಗಳೊಂದಿಗೆ ನೀವು ಕೈ ಜೋಡಿಸಿ ಎಂದು ಸಲಹೆ ನೀಡಿದರು.

ಭರವಸೆಯ ಆಶಾಕಿರಣ
ಅಧ್ಯಕ್ಷತೆ ವಹಿಸಿದ್ದ ಉಡುಪಿ ಮತ್ತು ದ.ಕ. ಜಿಲ್ಲೆ ವಿಶ್ವಕರ್ಮ ಒಕ್ಕೂಟದ ಗೌರವಾಧ್ಯಕ್ಷ ಅಲೆವೂರು ಯೋಗೀಶ್‌ ಆಚಾರ್ಯ ಮಾತನಾಡಿ, ಸಾಧನೆಯಲ್ಲಿ ವಿಶ್ವಕರ್ಮರು ವಿಶ್ವಶ್ರೇಷ್ಟರು. ಆದರೆ ನಮ್ಮವರ ಸ್ಥಿತಿಗತಿ ಮಾತ್ರ ಬಹಳಷ್ಟು ಶೋಚನೀಯ ಎಂಬಂತಿದೆ. ಸಮಾಜದ ಜನರ ಸಮಸ್ಯೆಗಳ ಬಗ್ಗೆ ಹಿಂದೆ ಕುಮಾರಸ್ವಾಮಿಯವರ ಜತೆ ಚರ್ಚಿಸಿದ್ದು, ಅವರು ಅದಕ್ಕೆ ಪೂರಕವಾಗಿ ಸ್ಪಂದಿಸಿದ್ದಾರೆ. ಇಂದಿನ ಸಮಾವೇಶ ರಾಜ್ಯದ ವಿಶ್ವಕರ್ಮ ಸಮಾಜದ ಸಮಗ್ರ ಅಭಿವೃದ್ಧಿಯ ಕುರಿತಾದ ಚಿಂತನೆಗೆ ಮೂಲ ಪ್ರೇರಣೆಯಾಗಲಿದೆ ಎಂದರು.

ಕಟಪಾಡಿ ಶ್ರೀ ಕಾಳಿಕಾಂಬಾ ವಿಶ್ವಕರ್ಮ ದೇವಸ್ಥಾನದ ಆಡಳಿತ ಮೊಕ್ತೇಸರ ಸದಾಶಿವ ಆಚಾರ್ಯ, ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ / ವಕ್ತಾರ ಭೋಜೇ ಗೌಡ, ಜೆಡಿಎಸ್‌ನ ಉಡುಪಿ ಜಿಲ್ಲಾಧ್ಯಕ್ಷ ಯೋಗೀಶ್‌ ವಿ. ಶೆಟ್ಟಿ, ಅಖೀಲ ಕರ್ನಾಟಕ ವಿಶ್ವಕರ್ಮ ಸಮಾಜದ ರಾಜ್ಯಾಧ್ಯಕ್ಷ / ಜೆಡಿಎಸ್‌ನ ಹಿಂದುಳಿದ ವಿಭಾಗದ ಕಾರ್ಯಾಧ್ಯಕ್ಷ ಉಮೇಶ್‌ ಆಚಾರ್ಯ, ಉಡುಪಿ ಜಿಲ್ಲಾ ಚಿನ್ನ – ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ಬಾಲಕೃಷ್ಣ ಕಪ್ಪೆಟ್ಟು, ಜೆಡಿಎಸ್‌ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯರಾಮ ಆಚಾರ್ಯ ಮುಖ್ಯ ಅತಿಥಿಗಳಾಗಿದ್ದರು.

ನಿವೃತ್ತ ಪ್ರಾಧ್ಯಾಪಕ ಬಾಳ್ಕಟ್ಟ ಅನಂತಯ್ಯ ಆಚಾರ್ಯ ಅವರು ಸ್ವಾಗತಿಸಿದರು. ಉಡುಪಿ ಜಿಲ್ಲಾ ಚಿನ್ನ – ಬೆಳ್ಳಿ ಕೆಲಸಗಾರರ ಸಂಘದ ಕಾರ್ಯದರ್ಶಿ ರತ್ನಾಕರ ಆಚಾರ್ಯ ಅವರು ವಂದಿಸಿದರು. ದಾಮೋದರ ಶರ್ಮಾ ಬಾಕೂìರು ಅವರು ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next