Advertisement

ನದಿ ನೀರು ಶುದ್ಧೀಕರಣಕ್ಕೆ ಆದ್ಯತೆ

10:52 PM Dec 16, 2019 | Lakshmi GovindaRaj |

ಬೆಂಗಳೂರು: ದೇಶದ ಪವಿತ್ರ ನದಿ ಗಂಗೆಯ ಶುದ್ಧೀಕರಣಕ್ಕಾಗಿ ರೂಪಿಸಿರುವ “ನಮಾಮಿ ಗಂಗೆ’ ಯೋಜನೆ ಉತ್ತಮ ಫ‌ಲಿತಾಂಶ ನೀಡಿದೆ. ಇಂದು ಗಂಗಾ ನದಿ ತನ್ನ ಪಾವಿತ್ರ್ಯತೆ ಮತ್ತೆ ಪಡೆದುಕೊಂಡಿದೆ ಎಂದು ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೆಖಾವತ್‌ ತಿಳಿಸಿದರು.

Advertisement

ಅವರು ಸೋಮವಾರ ಕನಕಪುರ ರಸ್ತೆಯ ಆರ್ಟ್‌ ಆಫ್ ಲಿವಿಂಗ್‌ ಧ್ಯಾನ ಮಂದಿರದಲ್ಲಿ ಕೆಂಟ್‌ ಆರ್‌ಒ ವಾಟರ್‌ ಪ್ಯೂರಿಫೈಯರ್‌ ಮತ್ತು ಐಟಿವಿ ಸಹಭಾಗಿತ್ವದಲ್ಲಿ ಆಯೋಜಿಸಿದ್ದ “ಆಕ್ರಿ ಬೂಂದ್‌’ ಐಪ್ಲೆಡ್ಜ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದೇಶದ ನದಿಗಳ ಸಂರಕ್ಷಣೆ, ಮಾಲಿನ್ಯ ನಿಯಂತ್ರಣ ಮತ್ತು ಪುನರುಜ್ಜೀವನ ಕಾರ್ಯದ ಮೂಲಕ ನದಿಗಳ ನೀರು ಶುದ್ಧೀಕರಣ ದತ್ತ ನಮ್ಮ ಮಂತ್ರಾಲಯ ಹೆಚ್ಚಿನ ಗಮನಹರಿಸಿ ಕಾರ್ಯ ನಿರ್ವಹಿಸುತ್ತಿದೆ. ಅದರಲ್ಲಿ ಈಗಾಗಲೇ ಸಾಕಷ್ಟು ಯಶಸ್ಸನ್ನು ಕಂಡಿದೆ.

ಪ್ರಧಾನಿ ಮೋದಿ ಅವರ ಕನಸಿನ ಯೋಜನೆ ನಮಾಮಿ ಗಂಗೆ ಮೂಲಕ ನೆರವೇರಿರುವ ಗಂಗಾ ನದಿ ಸ್ವತ್ಛತಾ ಕಾರ್ಯ ಹಾಗೂ ಸಂರಕ್ಷಣೆ ವಿಶ್ವ ಮಾನ್ಯತೆ ಪಡೆದಿದೆ. ಇದೇ ರೀತಿ ಯಮುನಾ ನದಿ ಸೇರಿ ದೇಶದ ಇತರ ನದಿಗಳ ಶುದ್ಧೀಕರಣದತ್ತ ಮಹತ್ವದ ಹೆಜ್ಜೆ ಇರಿಸಲಾಗಿದೆ.

ಇಷ್ಟೇ ಅಲ್ಲದೆ, ಬಳಕೆ ಮಾಡಿದ ನಂತರ ವ್ಯರ್ಥವಾಗುವ ನೀರನ್ನು ಶುದ್ಧೀಕರಿಸಿ ಮರುಬಳಕೆ ಮಾಡುವತ್ತಲೂ ಹಾಗೂ ಜಲಮೂಲಗಳ ರಕ್ಷಣೆಯತ್ತಲೂ ಹೆಚ್ಚಿನ ಗಮನ ಹರಿಸಿದ್ದೇವೆ. ಇಸ್ರೇಲ್‌ನಂತಹ ಪುಟ್ಟ ದೇಶದಲ್ಲಿ ಬಳಕೆ ಮಾಡಿ ವ್ಯರ್ಥವಾಗುವ ಶೇ.90ರಷ್ಟು ನೀರನ್ನು ಶುದ್ಧೀಕರಿಸಿ ಪುನರ್‌ ಬಳಕೆ ಮಾಡ ಲಾಗುತ್ತಿದ್ದರೆ, ನಮ್ಮ ದೇಶದಲ್ಲಿ ಇದರ ಪ್ರಮಾಣ ಕೇವಲ ಶೇ.30 ರಿಂದ 35ರಷ್ಟು ಮಾತ್ರ ಇದೆ ಎಂದು ನುಡಿದರು.

ಕೆಂಟ್‌ ಆರ್‌ಒ ಬಿಡುಗಡೆ: ಈ ಸಂದರ್ಭದಲ್ಲಿ ಕೆಂಟ್‌ ಆರ್‌ಒದ ನೀರು ವ್ಯರ್ಥವಾಗದ ಆರ್‌ಒ ವಾಟರ್‌ ಪ್ಯೂರಿಫೈಯರ್‌ ಅನ್ನು ಸಚಿವ ಗಜೇಂದ್ರ ಸಿಂಗ್‌ ಶೆಖಾವತ್‌, ಶ್ರೀ ಶ್ರೀ ರವಿಶಂಕರ ಗುರೂಜಿ ಹಾಗೂ ಕೆಂಟ್‌ ಆರ್‌ಒ ಸಿಸ್ಟಂ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮಹೇಶ್‌ ಗುಪ್ತಾ ಅವರು ಬಿಡುಗಡೆ ಮಾಡಿದರು.

Advertisement

ನಂತರ ಮಾತನಾಡಿದ ಮಹೇಶ್‌ ಗುಪ್ತಾ, ಸಾಂಪ್ರದಾಯಿಕ ಪ್ಯೂರಿಫೈಯರ್‌ನಲ್ಲಿ 40 ಲೀ. ನೀರನ್ನು ಸಂಸ್ಕರಣೆ ಮತ್ತು ಶುದ್ಧೀಕರಣ ಮಾಡಿದರೆ ಕೇವಲ 10 ಲೀ. ಶುದ್ಧ ಕುಡಿಯುವ ನೀರು ಸಿಗುತ್ತದೆ. ಇದನ್ನು ಗಮನಿಸಿದರೆ ಪ್ರತಿನಿತ್ಯ ಎಷ್ಟು ಪ್ರಮಾಣದಲ್ಲಿ ನೀರು ವ್ಯರ್ಥವಾಗುತ್ತಿದೆ ಎಂಬುದು ತಿಳಿಯುತ್ತದೆ. ಈ ವ್ಯರ್ಥವಾಗುವ ನೀರಿನ ಪ್ರಮಾಣ ವನ್ನು ಗಣನೆಗೆ ತೆಗೆದುಕೊಂಡು ನಮ್ಮ ಸಂಸ್ಥೆ “ಜ್ಹೀರೋ ವಾಟರ್‌ ವೇಸ್ಟೇಜ್‌ ತಂತ್ರಜ್ಞಾನ’ದ ಆರ್‌ಒವನ್ನು ಆವಿಷ್ಕರಿಸಿದೆ.
ಇದನ್ನು ಅಳವಡಿಸಿ ವ್ಯರ್ಥ ವಾಗುವ ನೀರನ್ನು ಉಳಿಸಬಹುದಾಗಿದೆ ಎಂದರು.

ಈ ವಿನೂತನ ತಂತ್ರಜ್ಞಾನ ಕಂಪ್ಯೂಟರ್‌ ಕಂಟ್ರೋಲ್ಡ್‌ ಪ್ರೊಸೆಸ್‌ ಆಗಿ ಬಳಕೆ ಮಾಡಲಾಗುತ್ತಿದ್ದು, ಶೇ.50ರಷ್ಟು ನೀರನ್ನು ಶುದ್ಧೀಕರಿಸುತ್ತದೆ. ಇದರ ಮತ್ತೂಂದು ಪ್ರಮುಖ ಅಂಶವೆಂದರೆ, ಅತ್ಯಂತ ಕಳಪೆ ನೀರನ್ನೂ ಶುದ್ಧೀಕರಿಸಿ, ಅಗತ್ಯ ಖನಿಜಾಂಶಗಳನ್ನು ಸೇರಿಸಿ ಶುದ್ಧೀಕರಿಸುತ್ತದೆ. ಈ ತಂತ್ರಜ್ಞಾನದಲ್ಲಿ ಒಂದು ಹನಿ ನೀರೂ ಸಹ ವ್ಯರ್ಥವಾಗುವುದಿಲ್ಲ.  ಆರ್ಟ್‌ ಆಫ್ ಲಿವಿಂಗ್‌ನ ಶ್ರೀ ರವಿಶಂಕರ್‌ ಗುರೂಜಿ ಅವರು ನದಿ ಎಂದರೆ ಮಾತೃ ಸ್ವರೂಪ.

ಆದ್ದರಿಂದ ಅವುಗಳು ಭರ್ತಿಯಾದಾಗ ಅಥವಾ ವಿಶೇಷ ದಿನಗಳಲ್ಲಿ ಬಾಗಿನ ನೀಡುವ ಸಂಪ್ರದಾಯ ವಿದೆ. ಬಾಗಿನದಲ್ಲಿ ಕುಂಕುಮ, ಅರಿಶಿನ, ಅಕ್ಷತೆ, ಹೂವು, ಸೀರೆ, ಬಳೆಗಳು ಸೇರಿರುತ್ತವೆ. ಅರಿಶಿನ- ಕುಂಕುಮ ನೀರಿನಲ್ಲಿ ಕರಗಿದರೆ, ಹೂವು-ಅಕ್ಷತೆಯನ್ನು ಮೀನು ಹಾಗೂ ಜಲಚರಗಳು ತಿನ್ನುತ್ತವೆ. ಉಳಿದದ್ದು ಸೀರೆ ಹಾಗೂ ಬಳೆಗಳು. ಇವುಗಳು ಕೊಳೆತು ನೀರನ್ನು ಮಲೀನಗೊಳಿಸಲು ಸಾಧ್ಯವಿರುತ್ತದೆ.

ಆದ್ದರಿಂದ ಸೀರೆ ಮತ್ತು ಬಳೆಗಳನ್ನು ನದಿಗೆ ಹಾಕುವ ಬದಲು ಯಾರಾದರೂ ಬಡವರಿಗೆ ನೀಡುವುದು ಒಳಿತಲ್ಲವೇ. ಆ ಮೂಲಕ ನದಿ ನೀರನ್ನು ಸಂರಕ್ಷಿಸಬಹುದಲ್ಲವೇ. ನೀರನ್ನು ಶುದ್ಧವಾಗಿಸುವುದು ಪ್ರತಿ ಯೊಬ್ಬ ನಾಗರಿಕನ ಕರ್ತವ್ಯ. ನಮ್ಮ ನೆಲ, ಜಲ, ಗಾಳಿ ಮತ್ತು ಮನಸ್ಸು ಶುದ್ಧವಾದರೆ ನಮ್ಮ ದೇಶ ವಿಶ್ವ ಗುರುವಾಗಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next