ಹೊಳಲ್ಕೆರೆ: ಸರಕಾರ ವಸತಿ ರಹಿತರಿಗೆ ಸೂರುಕಲ್ಪಿಸುವ ನಿಟ್ಟಿನಲ್ಲಿ ಮನೆ ನಿರ್ಮಾಣಕ್ಕೆ ಸಾಕಷ್ಟು ಪ್ರೋತ್ಸಾಹ ನೀಡುತ್ತಿದೆ. ಈ ನಿಟ್ಟಿನಲ್ಲಿ ಕೊಳಚೆ ಅಭಿವೃದ್ಧಿ ಮಂಡಳಿ ಪಟ್ಟಣದ ಒಂದನೇ ವಾರ್ಡ್ ಸೇರಿದಂತೆ ವಿವಿಧ ಕಡೆಗಳಲ್ಲಿ ಗುಣಮಟ್ಟದ ಮನೆಗಳನ್ನು ನಿರ್ಮಿಸುತ್ತಿದೆ ಎಂದು ಕೊಳಚೆ ಅಭಿವೃದ್ಧಿ ಮಂಡಳಿಯ ದಾವಣಗೆರೆ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಎಸ್.ಜಿ. ಪದ್ಮನಾಭ ಹೇಳಿದರು.
ಪಟ್ಟಣದ ಒಂದನೇ ವಾರ್ಡ್‌ನ ಕೊಳಚೆ ಪ್ರದೇಶದಲ್ಲಿ ವಸತಿ ರಹಿತರಿಗೆ ನಿರ್ಮಾಣ ಮಾಡುತ್ತಿರುವ ಮನೆಗಳ ಕಾಮಗಾರಿ ಪರಿಶೀಲಿಸಿದ ಬಳಿಕ ಪಟ್ಟಣದವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಸರಕಾರ ಪ್ರತಿಯೊಬ್ಬರಿಗೂ ಸೂರು ಎನ್ನುವ ಕಲ್ಪನೆಯೊಂದಿಗೆ ಮನೆಗಳನ್ನು ನಿರ್ಮಾಣ ಮಾಡಲು ಮುಂದಾಗಿದೆ. ಸಾರ್ವಜನಿಕರು ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬೇಕು. ಮನೆಗಳ ಕಾಮಗಾರಿಗಳು ಸಾಕಷ್ಟು ಗುಣಮಟ್ಟದಿಂದ ಕೂಡಿವೆ ಎಂದರು.
ಪಟ್ಟಣ ಪಂಚಾಯಿಯಿ ಸದಸ್ಯೆ ಎಚ್.ಆರ್.ನಾಗರತ್ನ ವೇದಮೂರ್ತಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರಕಾರಗಳು ದೇಶದಲ್ಲಿರುವ ಪ್ರತಿಯೊಬ್ಬ ಸೂರು ರಹಿತರಿಗೆ ಮನೆ ಕಟ್ಟಿಕೊಡುವ ಮಹತ್ವಾಕಾಂಕ್ಷೆ ಹೊಂದಿವೆ. ಈ ನಿಟ್ಟಿನಲ್ಲಿ ಪಟ್ಟಣದಲ್ಲಿರುವ ಕೊಳಚೆ ಪ್ರದೇಶದಲ್ಲಿ ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಸರಕಾರದ ಯೋಜನೆಗಳನ್ನು ಅರಿತುಕೊಂಡಿರುವ ಶಾಸಕ ಎಂ. ಚಂದ್ರಪ್ಪ ಮೊದಲ ಹಂತದಲ್ಲಿ 315 ಮನೆಗಳನ್ನು ಹಾಗೂ ಎರಡನೇ ಹಂತದಲ್ಲಿ 210 ಮನೆಗಳನ್ನು ಮಂಜೂರು ಮಾಡಿಸಿಕೊಟ್ಟಿದ್ದಾರೆ. ಹಾಗಾಗಿ ಒಂದನೇ ವಾರ್ಡ್‌ನ ಕುಂಬಾರಹಟ್ಟಿ, ಮುಸ್ಟಿಗರ ಹಟ್ಟಿ, ಬೆಳೆಗಾರ ಹಟ್ಟಿ ಸೇರಿದಂತೆ ಪಟ್ಟಣದ ವ್ಯಾಪ್ತಿಯಲ್ಲಿರುವ ಕೊಳಚೆ ಪ್ರದೇಶದ ಬಡವರಿಗೆ ಮನೆ ಕಟ್ಟಿಸಿ ಕೊಡಲು ಶ್ರಮಿಸಲಾಗುತ್ತಿದೆ. ಒಂದನೇ ವಾರ್ಡ್‌ನಲ್ಲಿ 60 ಮನೆಗಳನ್ನು ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಇಂಜಿನಿಯರ್ ವೀರೇಶ್‌ಬಾಬು, ಪಪಂ ಮಾಜಿ ಸದಸ್ಯ ಎಸ್.ಬಿ. ಶಿವರುದ್ರಪ್ಪ, ವಕೀಲ ಎಸ್.ವೇದಮೂರ್ತಿ, ಗುತ್ತಿಗೆದಾರ ಪ್ರಕಾಶ್, ರವಿಕುಮಾರ್ ಮತ್ತಿತರು ಇದ್ದರು.