ಶಿಡ್ಲಘಟ್ಟ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಬರ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಲು ಸರ್ಕಾರ ಆದೇಶ ಹೊರಡಿಸಿದ್ದು, ಜಲಸಂರಕ್ಷಣಾ ಕಾಮಗಾರಿಗಳನ್ನು ನಡೆಸಲಾಗುತ್ತಿದೆ ಎಂದು ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ಶ್ರೀನಾಥ್‌ಗೌಡ ಹೇಳಿದರು.
ತಾಲೂಕಿನ ಮಳ್ಳೂರು ಹಾಗೂ ಹಂಡಿಗನಾಳ ಗ್ರಾಮ ಪಂಚಾಯಿತಿಯಲ್ಲಿ ನರೇಗಾ ಯೋಜನೆಯಡಿ ಎನ್.ಎಂ.ಆರ್ (ಕಾಮಗಾರಿ ಅನುಮತಿ ಪತ್ರ) ವಿತರಿಸಿ ಮಾತನಾಡಿದ ಅವರು, ಬರಗಾಲದಲ್ಲಿ ಉದ್ಯೋಗಕ್ಕಾಗಿ ಕೂಲಿ ಕಾರ್ಮಿಕರು ವಲಸೆ ಹೋಗುವುದನ್ನು ತಪ್ಪಿಸುವ ಸಲುವಾಗಿ ನರೇಗಾ ಯೋಜನೆಯಡಿ ಜಲಸಂರಕ್ಷಣೆ ಮಾಡಲು ಬರ ಪರಿಹಾರ ಕಾಮಗಾರಿಗಳನ್ನು ನಡೆಸಲಾಗುತ್ತಿದೆ ಎಂದರು.
ನರೇಗಾ ಯೋಜನೆಯಡಿ ಈಗಾಗಲೇ ಜಲಮೂಲಗಳಾದ ಕೆರೆ-ಕುಂಟೆಗಳಲ್ಲಿ ಹೂಳು ತೆಗೆಯುವ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗಿದೆ. ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಗ್ರಾಮೀಣ ಪ್ರದೇಶದಲ್ಲಿ ಅಂಗನವಾಡಿ ಕೇಂದ್ರದ ಕಟ್ಟಡಗಳು ಹಾಗೂ ಶಾಲಾ ಕಾಂಪೌಂಡ್‌ಗಳನ್ನು ನಿರ್ಮಿಸಲಾಗಿದೆ ಎಂದರು.
ಕೆಲಸದ ಪ್ರಮಾಣ ಕಡಿಮೆ: 2018-19 ನೇ ಸಾಲಿನಲ್ಲಿ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಲಾಗಿದೆ. ನರೇಗಾ ಯೋಜನೆಯಡಿ ಉದ್ಯೋಗ ಚೀಟಿಗೆ ಆರ್ಥಿಕ ವರ್ಷದಲ್ಲಿ ಮಾನವ ದಿನಗಳನ್ನು ಪರಿಷ್ಕರಿಸಲಾಗಿದೆ.
ಬರಪೀಡಿತ ಪ್ರದೇಶದಲ್ಲಿ ಬಿಸಿಲಿನ ತಾಪ ಮತ್ತು ಉಷ್ಣಾಂಶ ಹೆಚ್ಚಾಗಿರುವುದರಿಂದ ಕೆಲಸದ ಪ್ರಮಾಣವನ್ನು ಕಡಿಮೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ ಎಂದರು. ಮಳ್ಳೂರು ಗ್ರಾಪಂ ಪಿಡಿಒ ರಾಮಕೃಷ್ಣ ಹಾಗೂ ಹಂಡಿಗನಾಳ ಗ್ರಾಪಂ ಪಿಡಿಒ ಅಂಜನ್‌ಕುಮಾರ್ ಉಪಸ್ಥಿತರಿದ್ದರು.