ಮಂಗಳೂರು: ವೈದ್ಯಕೀಯ ಕ್ಷೇತ್ರ ಅಭಿವೃದ್ಧಿಯ ನಾಗಾಲೋಟದಲ್ಲಿದ್ದರೂ ಕೆಲವು ನ್ಯೂನತೆಗಳು ಎದುರಾಗುತ್ತಿವೆೆ. ಹೀಗಾಗಿ ವೈದ್ಯಕೀಯ ಮೌಲ್ಯಗಳಿಗೆ ವಿಶೇಷ ಆದ್ಯತೆ ನೀಡಿ ಮುಂದಡಿ ಇಡಬೇಕಾದ ಜವಾಬ್ದಾರಿ ವೈದ್ಯಕೀಯ ವಿದ್ಯಾರ್ಥಿಗಳ ಮೇಲಿದೆ ಎಂದು ಭಾರತೀಯ ತತ್ವಶಾಸ್ತ್ರ ಸಂಶೋಧನ ಸಂಸ್ಥೆ ಮುಖ್ಯಸ್ಥ ಪ್ರೊ| ಎಸ್.ಆರ್. ಭಟ್ ಕರೆ ನೀಡಿದರು.
ಮಂಗಳೂರಿನ ಕಸ್ತೂರ್ಬಾ ಮೆಡಿಕಲ್ ಕಾಲೇಜು ಆಶ್ರಯದಲ್ಲಿ ನಗರದ ಡಾ| ಟಿಎಂಎ ಪೈ ಕನ್ವೆನನ್ ಸೆಂಟರ್‌ನಲ್ಲಿ “ಭಾರತದ ನ್ಯಾಯನೀತಿ ಅವಲೋಕನ ಸಮಿತಿಗಳ ಒಕ್ಕೂಟ’ದ (ಫೆರ್ಸಿ) 6ನೇ ರಾಷ್ಟ್ರೀಯ ಸಮ್ಮೇಳನ “ಫೆರ್ಸಿಕಾನ್ 2018′ ಅನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ವೈದ್ಯಕೀಯ ಕ್ಷೇತ್ರದಲ್ಲಿಯೂ ವ್ಯತ್ಯಯಗಳು ನಡೆಯುವ ಕಾರಣ ಮೌಲ್ಯಗಳ ರಕ್ಷಣೆಗೆ ವಿಶೇಷ ಆದ್ಯತೆ ನೀಡಬೇಕಿದೆ. ಸಂಶೋಧನೆ ಸಂದರ್ಭದಲ್ಲೂ ಎಚ್ಚರಿಕೆ ಹಾಗೂ ಮಾನವ ಪ್ರಿಯ ವಿಚಾರಗಳ ಬಗ್ಗೆ ಬೆಳಕು ಚೆಲ್ಲುವ ಯತ್ನ ಬೇಕಿದೆ. ಜಾಗತಿಕ ಮಟ್ಟದ ಸಂಶೋಧನೆಯಾದರೂ ಸ್ಥಳೀಯ ಮಟ್ಟದಲ್ಲಿ ಅದಕ್ಕೆ ಎದುರಾಗುವ ಪರಿಣಾಮದ ಬಗ್ಗೆ ವಿಶೇಷ ಅಧ್ಯಯನ ಬೇಕು ಎಂದರು. ವೈದ್ಯಕೀಯ ಕ್ಷೇತ್ರದಲ್ಲಿಯೂ ಸದ್ಯ ನ್ಯಾಯ ನೀತಿಗಳ ಮಂಗಳೂರಿನಲ್ಲಿ ನಡೆಯುವ ಸಮ್ಮೇಳನ ಭವಿಷ್ಯದ ದಿನಗಳಿಗೆ ಬದಲಾವಣೆಯ ಅಡಿಪಾಯ ದೊರಕಿಸು ವಂತಾಗಲಿ. ಮೂಲ ಧಾತುಕೋಶಗಳ ಸಂಶೋಧನೆ, ಆಯುರ್ವೇದ, ಸಂಯುಕ್ತ ವೈದ್ಯಕೀಯ ಸಂಶೋಧನೆಗಳನ್ನು ಕಾರ್ಯರೂಪಕ್ಕೆ ತರುವಾಗ ಉಂಟಾಗುವ ಸಮಸ್ಯೆಗಳು ಮತ್ತು ಮಕ್ಕಳಲ್ಲಿನ ಸಂಶೋಧನೆಗೆ ಒದಗುವ ಸವಾಲಿನ ಬಗ್ಗೆ ಸಮ್ಮೇಳನ ವಿಮರ್ಶೆ ನಡೆಸಲಿ ಎಂದರು. ಫೆರ್ಸಿ ಅಧ್ಯಕ್ಷ ಡಾ| ವಸಂತ್ ಮುತ್ತುಸ್ವಾಮಿ, ಮಾಹೆ ಪ್ರೊ ವೈಸ್ ಛಾನ್ಸಲರ್‌ಗಳಾದ ಡಾ| ವಿ. ಸುರೇಂದ್ರ ಶೆಟ್ಟಿ, ಡಾ| ಪೂರ್ಣಿಮಾ ಬಾಳಿಗಾ, ಮಂಗಳೂರು ಕೆಎಂಸಿ ಡೀನ್ ಡಾ| ಎಂ. ವೆಂಕಟ್ರಾಯ ಪ್ರಭು, ಸಮ್ಮೇಳನ ಸಂಘಟನ ಕಾರ್ಯದರ್ಶಿ ಡಾ| ಬಿ. ಉನ್ನಿಕೃಷ್ಣನ್ ಉಪಸ್ಥಿತರಿದ್ದರು.
ಫೌಂಡೇಶನ್ ಕೋರ್ಸ್
ಮಾಹೆ ಸಹಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್ ಅಧ್ಯಕ್ಷತೆ ವಹಿಸಿ ಮಾತನಾಡಿ, ವೈದ್ಯಕೀಯ ವಿದ್ಯಾರ್ಥಿಗಳಲ್ಲಿ ವೈದ್ಯಕೀಯ ಮೌಲ್ಯ, ವರ್ತನೆ ಹಾಗೂ ಸಂವಹನ ಶೈಲಿ ಸೇರಿದಂತೆ ಮಹತ್ವದ ಅಂಶಗಳನ್ನು ತಿಳಿಹೇಳುವ ನಿಟ್ಟಿನಲ್ಲಿ ಮಣಿಪಾಲ ವಿ.ವಿ.ಯಲ್ಲಿ ಮುಂದಿನ ವರ್ಷದಿಂದ ಫೌಂಡೇಶನ್ ಕೋರ್ಸ್ ಆರಂಭಿಸಲಾಗುವುದು. ಎಂಬಿಬಿಎಸ್ ವಿದ್ಯಾರ್ಥಿಗಳ ಸೇರ್ಪಡೆಯ ಮುನ್ನ ಎರಡು ತಿಂಗಳು ಈ ಕೋರ್ಸ್ ಮೂಲಕ ವೈದ್ಯಕೀಯ ಮೌಲ್ಯಗಳನ್ನು ತಿಳಿಸಿಕೊಡುವ ವಿಶೇಷ ಪ್ರಯತ್ನ ನಡೆಸಲಾಗುವುದು ಎಂದರು. ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಮಣಿಪಾಲ ವಿವಿ ಜಗತ್ತಿನಲ್ಲಿಯೇ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿರುವುದು ಹೆಮ್ಮೆ ಎಂದರು.