Advertisement

ರೋಗಿಗಳ ಸೇವೆಗೆ ಆದ್ಯತೆ ನೀಡಿ

11:45 AM Oct 01, 2018 | Team Udayavani |

ಮೈಸೂರು: ದೇಶದಲ್ಲಿ ವೈದ್ಯರು ಹಣ ಮಾಡುವ ದುರಾಸೆ ಬದಿಗೊತ್ತಿ, ರೋಗಿಗಳಿಗೆ ಚಿಕಿತ್ಸೆ ನೀಡುವ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. 

Advertisement

ನಗರದ ಮಾನಸಗಂಗೋತ್ರಿ ಸೆನೆಟ್‌ ಭವನದಲ್ಲಿ ಎಚ್‌.ಎನ್‌.ಆರ್‌ ಫೌಂಡೇಷನ್‌ ವತಿಯಿಂದ ಆಯೋಜಿಸಿದ್ದ ಸ್ತನಕ್ಯಾನ್ಸರ್‌ ಮತ್ತು ಗರ್ಭಕೋಶ ಕ್ಯಾನ್ಸರ್‌ಗಳ ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ವಿದೇಶಗಳಲ್ಲಿ ವೈದ್ಯರಿಗೆ ಹಣ ಮಾಡುವ ದುರಾಸೆ, ವ್ಯಾಮೋಹ ಇಲ್ಲ. ಬದಲಾಗಿ ರೋಗಿಗಳಿಗೆ ಮೊದಲು ಚಿಕಿತ್ಸೆ ನೀಡಬೇಕು. ಆ ನಂತರ ಹಣ ಎನ್ನುತ್ತಾರೆ. ಹೀಗಾಗಿ ಅಲ್ಲಿನ ಜನರು, ವೈದ್ಯರೂ ಮೌಲ್ಯಯುತ ಜೀವನ ನಡೆಸುತ್ತಿದ್ದಾರೆ ಎಂದರು. 

ದುರಾಸೆಯ ದುಡಿಮೆ: ನಮ್ಮ ದೇಶದಲ್ಲಿ ಹಣದ ಹುಚ್ಚು, ದುರಾಸೆ ಜಾಸ್ತಿ ಇದೆ. ರೋಗಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದರೆ, ಮೊದಲು ಇಂತಿಷ್ಟು ಲಕ್ಷ, ಸಾವಿರ ರೂ. ಹಣ ಕಟ್ಟಿದ, ಬಳಿಕವೇ ಚಿಕಿತ್ಸೆ ಕೊಡುತ್ತೇವೆ ಎನ್ನುತ್ತಾರೆ. ಆ ಮೂಲಕ ಮೂರು ತಲೆಮಾರಿನವರು ತಿಂದರೂ ಕರಗದಷ್ಟು ಆಸ್ತಿ ಹಣ ಸಂಪಾದಿಸಿ,

ತಮ್ಮ ಕುಟುಂಬವನ್ನೇ ಸೋಮಾರಿಗಳನ್ನಾಗಿ ಮಾಡುತ್ತಾರೆ. ವೈದ್ಯರ ಈ ಹಣದ ದುರಾಸೆಯ ದುಡಿಮೆಯಿಂದಾಗಿ ಅವರ ಆಯಸ್ಸು 55ಕ್ಕೆ ಇಳಿದಿದ್ದರೆ, ಜನರ ವಯಸ್ಸು 60ಕ್ಕೆ ನಿಂತಿದೆ. ಸಮಾಜದಲ್ಲಿ ಇಂತಹ ಬೆಳವಣಿಗೆಯಿಂದ ಆರೋಗ್ಯಕರ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. 

ಆರೋಗ್ಯ ಸಮಸ್ಯೆ: ಇಂದಿನ ಆಹಾರ ಪದ್ಧತಿಯಿಂದ ಜನರಿಗೆ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ಆರೋಗ್ಯ ಹದಗೆಟ್ಟು ಚಿಕಿತ್ಸೆ ಪಡೆಯುವ ಬದಲು ಆರೋಗ್ಯ ಸರಿಯಾಗಿ ಇರುವಂತೆ ನೋಡಿಕೊಳ್ಳಬೇಕಿದೆ. ಈ ಹಿಂದೆ ಗ್ರಾಮೀಣ ಪ್ರದೇಶದ ಜನರು ಕಾಫೀ, ಟೀ ಕುಡಿಯುತ್ತಿರಲಿಲ್ಲ.

Advertisement

ಆದರೆ ಇಂದು ಬೆಡ್‌ ಕಾಫಿಯಂತೆ ಸಾರಾಯಿ, ವಿಸ್ಕಿ ಮದ್ಯ ಸೇವನೆ ಮಾಡುತ್ತಾರೆ. ಹೀಗೆ ನಮ್ಮ ಬೇಜವಾಬ್ದಾರಿ ಹಾಗೂ ತಪ್ಪುಗಳಿಂದ ಕಾಯಿಲೆಗಳು ಹೆಚ್ಚಾಗುತ್ತಿವೆ. ಯಾವುದೇ ಕಾಯಿಲೆ ಎದುರಾದಾಗ ನಿರ್ಲಕ್ಷಿಸುವುದು ಸರಿಯಲ್ಲ. ಕಾಯಿಲೆ ಬಂದ ನಂತರ ಎಚ್ಚೆತ್ತುಕೊಳ್ಳುವ ಬದಲು  ಕಾಯಿಲೆ ಬಾರದಂತೆ ಕಾಳಜಿ ವಹಿಸಬೇಕಿದೆ ಎಂದು ಎಚ್ಚರಿಸಿದರು. 

ಕ್ಯಾನ್ಸರ್‌ ಮಾರಕ ಕಾಯಿಲೆ, ಇದರ ಬಗ್ಗೆ ಆರಂಭದಲ್ಲೇ ತಪಾಸಣೆಯ ಮೂಲಕ ಪತ್ತೆ ಹಚ್ಚಿದರೆ ಚಿಕಿತ್ಸೆ ನೀಡಿ ಸಂಪೂರ್ಣವಾಗಿ ಗುಣಪಡಿಸಬಹುದು, ಆದರೆ ಕಾಯಿಲೆ ಕೊನೆಯ ಹಂತಕ್ಕೆ ಬಂದಾಗ ಚಿಕಿತ್ಸೆ ನೀಡಿದರೂ, ಯಾವುದೇ ಪ್ರಯೋಜನವಿಲ್ಲ.

ಹೀಗಾಗಿ ಸಣ್ಣ, ಪುಟ್ಟ ಕಾಯಿಲೆಗಳು ಬಂದಾಗಲೂ ನಿರ್ಲಕ್ಷಿಸುವದರ ಬದಲು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕಿದೆ ಎಂದರು. ಕಾರ್ಯಕ್ರಮದಲ್ಲಿ ಮೈಸೂರು ನಗರ ಆಸ್ಪತ್ರೆಗಳ ಒಕ್ಕೂಟದ ಅಧ್ಯಕ್ಷ ಡಾ.ಮಹೇಶ್‌ಕುಮಾರ್‌, ಡಾ.ಸಂತೃಪ್ತ, ಡಾ.ಚಂದ್ರಶೇಖರ್‌, ಎಚ್‌.ಎನ್‌.ಆರ್‌ ಫೌಂಡೇಷನ್‌ ಅಧ್ಯಕ್ಷ ಡಾ.ಎಚ್‌.ಆರ್‌.ರವೀಂದ್ರ ಇನ್ನಿತರರು ಹಾಜರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next