ತಿ.ನರಸೀಪುರ: ಗ್ರಾಮೀಣ ಪ್ರದೇಶಗಳಲ್ಲಿ ಹೈನುಗಾರಿಕೆ ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡಬೇಕು ಎಂದು ಸಂಸದ ಆರ್.ಧ್ರುವನಾರಾಯಣ ಹೇಳಿದರು. ತಾಲೂಕಿನ ನಂಜಾಪುರದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಬಿಎಂಸಿ ಕೇಂದ್ರ ಪರಿಶೀಲಿಸಿ ಮಾತನಾಡಿದರು.
ಯುಪಿಎ ಕೇಂದ್ರ ಸರ್ಕಾರದಲ್ಲಿ ಕೃಷಿ ಮತ್ತು ಪಶು ಸಂಗೋಪನೆ ಸಚಿವರಾಗಿದ್ದ ಶರದ್ ಪವಾರ್ ರಾಷ್ಟ್ರೀಯ ಡೇರಿ ಯೋಜನೆ(ಎನ್ ಡಿಪಿ)ಯನ್ನು ಆರಂಭಿಸಿದ್ದರಿಂದ ದೇಶಾದ್ಯಂತ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಹಾಲು ಶೇಖರಣೆಗೆ ಬಿಎಂಸಿ ಕೇಂದ್ರಗಳು ಆರಂಭಗೊಂಡವು ಎಂದರು.
ಸಂಸದರು ಮತ್ತು ಶಾಸಕರ ಪ್ರದೇಶಾಭಿವೃದ್ಧಿ ಅನುದಾನ ಹಳ್ಳಿಗಳಲ್ಲಿ ಬಳಸುವ ಸರ್ಕಾರಿ ಶಾಲೆ, ಅಂಗನವಾಡಿ ಕೇಂದ್ರ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಟ್ಟಡಗಳಿಗೆ ಸದ್ಬಳಕೆಯಾಗಬೇಕು. ಸಮುದಾಯ ಭವನಗಳಿಗೆ ಹೆಚ್ಚು ಅನುದಾನ ಕೇಳುತ್ತಾರೆ ಹೊರತು ನಿತ್ಯದ ಬಳಕೆಯ ಕಟ್ಟಡಗಳಿಗೆ ಅನುದಾನಕ್ಕೆ ಅಪೇಕ್ಷಿಸಲ್ಲ.
ಮೈಮುಲ್ ಮತ್ತು ಎಂಪಿಸಿಎಸ್ ನಿದರ್ಶಕರ ಮನವಿಯಂತೆ ನಂಜಾಪುರ ಹಾಲು ಉತ್ಪಾದಕರ ಸಹಕಾರ ಸಹಕಾರ ಸಂಘದ 2 ಲಕ್ಷ ರೂ. ಅನುದಾನ ನೀಡಲಾಗಿದೆ ಎಂದು ಆರ್.ಧ್ರುವನಾರಾಯಣ ತಿಳಿಸಿದರು.
ಶಾಸಕ ಎಂ.ಅಶ್ವಿನ್ ಕುಮಾರ್ ನೂತನ ಬಿಎಂಸಿ ಕೇಂದ್ರ ಉದ್ಘಾಟಿಸಿದರು. ಮೈಮುಲ್ ಅಧ್ಯಕ್ಷ ಕೆ.ಜಿ.ಮಹೇಶ್, ಜಿಪಂ ಸದಸ್ಯ ಜಯಪಾಲ ಭರಣಿ, ಸಂಘದ ಅಧ್ಯಕ್ಷ ಡಿ.ಎನ್.ಲಿಂಗಯ್ಯ, ಉಪಾಧ್ಯಕ್ಷ ಬಿ.ಶಿವಣ್ಣ, ಎನ್.ಎಲ್.ಲಿಂಗಣ್ಣ ಹಾಗೂ ಇನ್ನಿತರರಿದ್ದರು.