Advertisement

ಪ್ರೇಮೋ ರಕ್ಷತಿ ರಕ್ಷಿತಃ

03:09 PM Sep 18, 2017 | |

ಈ ಮದುವೆ ಎರಡು ವರ್ಷ ಬಾಳಿಕೆ ಬರೋದಿಲ್ಲ ಎಂದು ಅನೇಕರು ಭವಿಷ್ಯ ನುಡಿದಿದ್ದರು. ಅದಕ್ಕೆ ಕಾರಣವೂ ಹಾಗಿತ್ತು ಬಿಡಿ. ಪ್ರೇಮ್‌ ಪಕ್ಕಾ ಹಳ್ಳಿ ಹೈದ. ರಕ್ಷಿತಾ ಸಿಟಿ ಚೆಲುವೆ. ಇವರಿಬ್ಬರು ಅದ್ಯಾವಾಗಲೋ, ಅದ್ಯಾವ ಮಾಯದಲ್ಲೋ ಲವ್‌ ಮಾಡಿ, ಮದುವೆಯಾಗುವ ಹಂತಕ್ಕೆ ಬಂದು ಬಿಟ್ಟರು. ಇವರಿಬ್ಬರ ನಡುವೆ ಯಾವುದೂ ಸರಿಸಮವಾಗಿರಲಿಲ್ಲ. ಮಾನವಲ್ಲ. ಆಸ್ತಿ, ಅಂತಸ್ತು, ಓದು, ಬಣ್ಣ … ಎಲ್ಲದರಲ್ಲೂ ರಕ್ಷಿತಾ ಬಹಳ ಮುಂದಿದ್ದರು. ಪ್ರೇಮ್‌ ಹಿಂದೆ ಇದ್ದರು. ಹಾಗಿರುವಾಗ ಅವರಿಬ್ಬರ ಮಧ್ಯೆ ಸಾಮ್ಯತೆ ಸಾಧ್ಯವಾ? ಅವರಿಬ್ಬರೂ ನಿಜಕ್ಕೂ ಜಾಸ್ತಿ ದಿನ ಸುಖವಾಗಿ ಸಂಸಾರ ಮಾಡಿಕೊಂಡಿರುವುದುಂಟಾ? … ಹೀಗೆ ತಲೆಗೊಂದು ಮಾತುಗಳು ಆಗಿನ ಕಾಲಕ್ಕೆ ಕೇಳಿ ಬಂದಿದ್ದವು. ಇದೆಲ್ಲದರ ಜೊತೆಗೆ ಪ್ರೇಮ್‌ ಮತ್ತು ರಕ್ಷಿತಾ ಅವರ ಮದುವೆಯನ್ನು “ಕುರುಬನ ರಾಣಿ’ ಚಿತ್ರಕ್ಕೆ ಹೋಲಿಸಿದ್ದ ಉದಾಹರಣೆಯೂ ಇತ್ತು.

Advertisement

ಯಾಕೆ ಇವೆಲ್ಲಾ ಮಾತು ಈಗ ಎಂದು ಆಶ್ಚರ್ಯಪಡಬೇಡಿ. ಪ್ರೇಮ್‌ ಹಾಗೂ ರಕ್ಷಿತಾ ಪ್ರೇಮ್‌ ಎಲ್ಲರ ಬಾಯಿ ಮುಚ್ಚಿಸಿ, ಹತ್ತು ವರ್ಷಗಳನ್ನು ಪೂರೈಸಿಕೊಂಡಿದ್ದಾರೆ. ಈ ಮೂಲಕ ಪ್ರೀತಿಗೆ ಆಸ್ತಿ, ಅಂತಸ್ತು ಯಾವುದೂ ಅಡ್ಡ ಬರುವುದಿಲ್ಲ ಎಂದು ಸಾಬೀತು ಮಾಡಿದ್ದಾರೆ. ಹಾಗೆ ಸಾಬೀತು ಮಾಡುತ್ತಲೇ 10 ವರ್ಷಗಳು ಉರುಳಿ ಹೋಗಿವೆ. ಇಷ್ಟಕ್ಕೂ ಪ್ರೇಮ್‌ ಮತ್ತು ರಕ್ಷಿತಾ ಇಬ್ಬರೂ ಮದುವೆಯಾಗಿ ಎಷ್ಟು ವರ್ಷಗಳಾದವು ಎಂದು ಯಾರಿಗೂ ನೆನಪರಿಲಿಲ್ಲ. ಆ ನೆನಪು ಮಾಡಿಕೊಟ್ಟಿದ್ದು, “ರೋಗ್‌’ ಚಿತ್ರತಂಡ. ಇತ್ತೀಚೆಗೆ “ರೋಗ್‌’ ಚಿತ್ರದ ಹಾಡುಗಳ ಬಿಡುಗಡೆಯಾಯಿತು. ಈ ಸಂದರ್ಭದಲ್ಲಿ ಯಾರಿಗೆ ಮೊದಲು ನೆನಪು ಬಂತೋ ಗೊತ್ತಿಲ್ಲ, ಒಟ್ಟಿನಲ್ಲಿ ಪ್ರೇಮ್‌ ಮತ್ತು ರಕ್ಷಿತಾ ಇಬ್ಬರೂ ಮದುವೆಯಾಗಿ 10 ವರ್ಷಗಳು ಪೂರೈಸಿದೆ ಎಂದು ಹೇಳಿದರು. ವಿಷಯ ಹೊರಬೀಳುತ್ತಿದ್ದಂತೆ, ಇನ್ನೊಂದಿಷ್ಟು ಜನ ಕಾರ್ಯಪ್ರವೃತ್ತರಾದರು. ಈ ಸಂಭ್ರಮವನ್ನು ಸೆಲೆಬ್ರೇಟ್‌ ಮಾಡಬೇಕು ಎಂದು ಕೇಕು ತರಿಸಲಾಯಿತು. ಅಷ್ಟೇ ಅಲ್ಲ, ಎಲ್ಲರ ಸಮ್ಮುಖದಲ್ಲಿ ಕತ್ತರಿಸುವ ಮೂಲಕ ಪ್ರೇಮ್‌ ಹಾಗೂ ರಕ್ಷಿತಾ ಇಬ್ಬರೂ ತಮ್ಮ 10ನೇ ವರ್ಷದ ಮದುವೆ ವಾರ್ಷಿಕೋತ್ಸವವನ್ನು ಆಚರಿಸಿಕೊಂಡರು.

ಈ 10 ವರ್ಷಗಳಲ್ಲಿ ಪ್ರೇಮ್‌ ಹಾಗೂ ರಕ್ಷಿತಾ ಸಾಕಷ್ಟು ಬೆಳೆದಿದ್ದಾರೆ ಮತ್ತು ಬದಲಾಗಿದ್ದಾರೆ. ಆ ಕಡೆ ಪ್ರೇಮ್‌ “ಸ್ಟಾರ್‌ ನಿರ್ದೇಶಕ’ ಎಂಬ ಪಟ್ಟವನ್ನು ಅಲಂಕರಿಸಿದರೆ, ಈ ಕಡೆ ರಕ್ಷಿತಾ ನಿರ್ಮಾಣ ಸಂಸ್ಥೆಯನ್ನು ಹುಟ್ಟು ಹಾಕಿ, ಮೂರು ಚಿತ್ರಗಳನ್ನು ನಿರ್ಮಿಸುವ ಮೂಲಕ ಯಶಸ್ವಿ ನಿರ್ಮಾಪಕಿ ಎನಿಸಿಕೊಂಡಿದ್ದಾರೆ. ಆ ಕಡೆ ಪ್ರೇಮ್‌ ನಿರ್ದೇಶನದ ಜೊತೆಗೆ ನಟನೆಯ ಸಹವಾಸವನ್ನು ಬೆಳೆಸಿಕೊಂಡರೆ, ಈ ಕಡೆ ರಕ್ಷಿತಾ ಹಿರಿತೆರೆಯ ಜೊತೆಗೆ ಕಿರುತೆರೆಯ ನಂಟನ್ನೂ ಬೆಳೆಸಿಕೊಂಡಿದ್ದಾರೆ. ಹೀಗೆ ಇಬ್ಬರೂ ತಮ¤ಮ್ಮ ರೀತಿಯಲ್ಲಿ ಹಲವು ವಿಷಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಎಲ್ಲಕ್ಕಿಂತ ಹೆಚ್ಚಾಗಿ ಇವರಿಬ್ಬರೂ ಹೆಚ್ಚು ದಿನ ಒಟ್ಟಿಗೆ ಇರೋದಿಲ್ಲ ಎಂಬ ಮಾತನ್ನು ಇಬ್ಬರೂ ಸುಳ್ಳು ಮಾಡಿದ ರೀತಿ ಮಾತ್ರ ವಿಶೇಷ. ಈ ಜೋಡಿ ಕೊನೆಯವರೆಗೂ ಹೀಗೆ ಸಂತೋಷವಾಗಿರಲಿ ಎಂದು ದೂರದಲ್ಲೇ ಹಾರೈಸಿಬಿಡಿ.

Advertisement

Udayavani is now on Telegram. Click here to join our channel and stay updated with the latest news.

Next