Advertisement

ಕ್ಯಾಂಟೀನ್‌ ಕಾಪಾಡಲು ಮುನ್ನೆಚ್ಚರಿಕೆ

11:57 AM Sep 11, 2017 | |

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಇಂದಿರಾ ಕ್ಯಾಂಟೀನ್‌ಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ವಲಯ ಜಂಟಿ ಆಯುಕ್ತರು ಹಾಗೂ ಮುಖ್ಯ ಎಂಜಿನಿಯರ್‌ನ್ನು ಜವಾಬ್ದಾರಿ ಅಧಿಕಾರಿಯಾಗಿ ನಿಯೋಜಿಸಿ ಬಿಬಿಎಂಪಿ ಆಯುಕ್ತರು ಆದೇಶ ಹೊರಡಿಸಿದ್ದಾರೆ.

Advertisement

ಇಂದಿರಾ ಕ್ಯಾಂಟೀನ್‌ ಮೂಲಕ ಜನರಿಗೆ ಕಡಿಮೆ ದರದಲ್ಲಿ ಆಹಾರ ಒದಗಿಸಲಾಗುತ್ತಿದೆ. ಆದರೆ, ಯೋಜನೆಗೆ ಕೆಟ್ಟ ಹೆಸರು ತರಲು ಹಾಗೂ ಸರ್ಕಾರಕ್ಕೆ ಮುಜುಗರ ತರುವ ಉದ್ದೇಶದಿಂದ ಆಹಾರದ ಪೂರೈಕೆಯಲ್ಲಿ ವ್ಯತ್ಯಯ ತರುವುದು ಮತ್ತು ಆಹಾರದಲ್ಲಿ ಏನನ್ನಾದರೂ ಬೆರೆಸುವ ಗುಮಾನಿಯಿದೆ.

ಹೀಗಾಗಿ ಸುರಕ್ಷತೆಯ ದೃಷ್ಟಿಯಿಂದ ಪ್ರತಿ ಕ್ಯಾಂಟೀನ್‌ ಸುತ್ತ ಕಾಂಪೌಂಡ್‌ ನಿರ್ಮಿಸಬೇಕು ಮತ್ತು ಕ್ಯಾಂಟೀನ್‌ ಹಾಗೂ ಅಡುಗೆ ಮನೆಗಳಲ್ಲಿ ಕೆಲಸ ಮಾಡುವ ಎಲ್ಲ ಸಿಬ್ಬಂದಿ ಹಾಗೂ ವಾಹನ ಚಾಲಕರ ಗುರುತಿನ ಚೀಟಿ ಪಡೆದು, ಪೊಲೀಸರ ಮೂಲಕ ಅವರ ವಿಳಾಸದ ಪೂರ್ವಪರ ಮಾಹಿತಿ ಪಡೆಯಲು ಅಧಿಕಾರಿಗಳಿಗೆ ತಿಳಿಸಲಾಗಿದೆ.

ಕ್ಯಾಂಟೀನ್‌ ಹಾಗೂ ಅಡುಗೆ ಮನೆಗಳಲ್ಲಿ ಕೆಲಸ ಮಾಡುವ ಎಲ್ಲ ಸಿಬ್ಬಂದಿಗೆ ಒಂದೇ ರೀತಿಯ ಸಮವಸ್ತ್ರ ನೀಡಬೇಕು ಮತ್ತು ವಲಯ ಜಂಟಿ ಆಯುಕ್ತ ಕಚೇರಿಯಿಂದ ಅವರಿಗೆ ಗುರುತಿನ ಚೀಟಿ ವಿತರಿಸಬೇಕು. ಜತೆಗೆ ನೈಟ್‌ ವಿಷನ್‌ ತಂತ್ರಜ್ಞಾನವಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಎಲ್ಲ ಕ್ಯಾಂಟೀನ್‌ ಹಾಗೂ ಅಡುಗೆ ಕೋಣೆಯಲ್ಲಿ ಅಳವಡಿಸಬೇಕು ಎಂದು ಸೂಚನೆ ನೀಡಿದ್ದಾರೆ.

ಈಗಾಗಲೇ ಪ್ರತಿ ಕ್ಯಾಂಟೀನ್‌ಗೆ ನಿಯೋಜಿಸಿರುವ ನೋಡಲ್‌ ಅಧಿಕಾರಿಯು ನಿತ್ಯ ಅಡುಗೆ ಮನೆಯಲ್ಲಿ ತಯಾರಿಸುವ ಆಹಾರವನ್ನು ಪರೀಕ್ಷೆಗೆ ನೀಡಬೇಕು. ಜತೆಗೆ ಪರೀಕ್ಷೆಯ ವರದಿಗಳನ್ನು ಪ್ರತ್ಯೇಕ ಕಡತದಲ್ಲಿ ನಮೂದಿಸಬೇಕು. ಅಡುಗೆ ಮನೆಗಳಿಂದ ಕ್ಯಾಂಟೀನ್‌ಗಳಿಗೆ ಸರಬರಾಜು ಮಾಡುವ ಸಂದರ್ಭದಲ್ಲಿ ವಾಹನ ಚಾಲಕರು ಮತ್ತು ಕಿಡಿಗೇಡಿಗಳು ಏನನ್ನಾದರೂ ಬರೆಸುವ ಸಾಧ್ಯತೆಯಿರುವುದರಿಂದಾಗಿ ಪ್ರತಿಯೊಂದು ವಾಹನವೂ ನಿಗದಿಪಡಿಸಿದ ಮಾರ್ಗದಲ್ಲಿಯೇ ಚಲಿಸಬೇಕು. ವಾಹನ ಚಲಿಸುವ ಮಾರ್ಗದ ಖಚಿತತೆಗೆ ಪ್ರತಿ ವಾಹನಕ್ಕೆ ಜಿಪಿಎಸ್‌ ಅಳವಡಿಸಬೇಕು ಎಂದಿದ್ದಾರೆ.

Advertisement

ಕ್ಯಾಂಟೀನ್‌ನಲ್ಲಿ ಯಾವುದೇ ಕಾರಣಕ್ಕೂ ಆಹಾರವನ್ನು ಪಾರ್ಸಲ್‌ ನೀಡಬಾರದು. ಸಾರ್ವಜನಿಕರ ಟೋಕನ್‌ ನೀಡಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಜತೆಗೆ ಯಾವುದೇ ರೀತಿಯ ನಿರುಪಯುಕ್ತ ವಸ್ತುಗಳ ಶೇಖರಣೆಯಾಗದಂತೆ ನೋಡಿಕೊಂಡು, ಆಗಾಗ ಕೀಟ ನಿರೋಧಕ ಔಷಧ ಸಿಂಪಡಿಸಬೇಕು ಮತ್ತು ಸಾರ್ವಜನಿಕರ ವಾಹನಗಳ ನಿಲುಗಡೆ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಲಾಗಿದೆ.

ಎಲ್ಲ ಮುಂಜಾಗ್ರತೆ ಕ್ರಮಗಳನ್ನು ಜಂಟಿ ಆಯುಕ್ತರು ಹಾಗೂ ಮುಖ್ಯ ಎಂಜಿನಿಯರ್‌ಗಳು ಕಟ್ಟುನಿಟ್ಟಾಗಿ ಪಾಲಿಸಬೇಕು. ಜತೆಗೆ ತಮ್ಮ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸಬೇಕು. ಅಹಿತಕರ ಘಟನೆ ನಡೆದರೆ ವಲಯ ಜಂಟಿ ಆಯುಕ್ತರು ಮತ್ತು ಮುಖ್ಯ ಎಂಜಿನಿಯರ್‌ಗಳನ್ನು ನೇರ ಹೊಣೆ ಮಾಡುವುದಾಗಿ ಹಿರಿಯ ಅಧಿಕಾರಿಗಳು ಎಚ್ಚರಿಸಿದ್ದಾರೆ.

ಪ್ರವೇಶ ನಿಷಿದ್ಧ; ಸ್ವತ್ಛತೆಗೆ ಆದ್ಯತೆ
ಇಂದಿರಾ ಕ್ಯಾಂಟೀನ್‌ಗಳಲ್ಲಿ ಆಹಾರ ವಿತರಿಸುವ ಸ್ಥಳಗಳಿಗೆ ಯಾವುದೇ ಕಾರಣಕ್ಕೂ ಸಾರ್ವಜನಿಕರಿಗೆ ಪ್ರವೇಶ ನೀಡಬಾರದು. ಆಹಾರ ಪೂರೈಕೆಗೆ ಬಳಸುವ ವಾಹನ, ಪಾತ್ರೆ ಮತ್ತು ಇತರೆ ಸಾಮಾಗ್ರಿಗಳನ್ನು ಸ್ವತ್ಛವಾಗಿಟ್ಟುಕೊಳ್ಳಬೇಕು. ಇದರೊಂದಿಗೆ ಕ್ಯಾಂಟೀನ್‌ ಹಾಗೂ ಅಡುಗೆ ಮನೆಯಲ್ಲಿನ ಎಲೆಕ್ಟ್ರಿಕಲ್‌ ವೈಯರಿಂಗ್‌ ವ್ಯವಸ್ಥೆಯನ್ನು ಕಾಲಕಾಲಕ್ಕೆ ಪರೀಕ್ಷಿಸಬೇಕು. ಮುಂಜಾಗ್ರತೆ ಕ್ರಮವಾಗಿ ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಹತ್ತಿರದ ಆಸ್ಪತ್ರೆಯ ದೂರವಾಣಿ ಸಂಖ್ಯೆ ಮತ್ತು ಅಗ್ನಿ ನಿರೋಧಕ ಪೆಟ್ಟಿಗೆಗಳನ್ನು ಅಳವಡಿಸಬೇಕು ಎಂದು ಸೂಚಿಸಿದ್ದಾರೆ.

ಸುರಕ್ಷತೆಗೆ ಮುಂಜಾಗ್ರತೆ ಕ್ರಮಗಳೇನು
– ಪ್ರತಿ ಕ್ಯಾಂಟೀನ್‌ ಸುತ್ತ ಕಾಂಪೌಂಡ್‌ ನಿರ್ಮಾಣ ಕಡ್ಡಾಯ
– ಎಲ್ಲ ಸಿಬ್ಬಂದಿ, ಚಾಲಕರಿಂದ ಗುರುತಿನ ಚೀಟಿ ಪಡೆಯುವುದು
– ಪೊಲೀಸರ ಮೂಲಕ ಸಿಬ್ಬಂದಿ ಪೂರ್ವಪರ ಮಾಹಿತಿ ದೃಢೀಕರಣ
– ಎಲ್ಲ ಸಿಬ್ಬಂದಿಗೆ ಒಂದೇ ರೀತಿಯ ಸಮವಸ್ತ್ರ, ಗುರುತಿನ ಚೀಟಿ
– ಕ್ಯಾಂಟೀನ್‌ನಲ್ಲಿ ನೈಟ್‌ ವಿಷನ್‌ ತಂತ್ರಜ್ಞಾನದ ಸಿಸಿಟಿವಿ ಕ್ಯಾಮೆರಾ
– ಮೂರೂ ಹೊತ್ತು ಆಹಾರ ಪರೀಕ್ಷಿಸಿ ಕಡತದಲ್ಲಿ ವರದಿ ನಮೂದು
– ಪ್ರತಿ ವಾಹನವೂ ನಿಗದಿಪಡಿಸಿದ ಮಾರ್ಗದಲ್ಲಿಯೇ ಚಲಿಸಬೇಕು
– ಮಾರ್ಗ ಖಚಿತತೆಗೆ ವಾಹನಗಳಿಗೆ ಜಿಪಿಎಸ್‌ ಅಳವಡಿಕೆ

Advertisement

Udayavani is now on Telegram. Click here to join our channel and stay updated with the latest news.

Next