ಬೀದರ: ಕೈಗಾರಿಕಾ ಪ್ರದೇಶದ ಕಾರ್ಖಾನೆಗಳಲ್ಲಿ ರಾಸಾಯನಿಕ ದುರಂತ ತಡೆಯಬೇಕಾದರೆ ಮುಂಜಾಗ್ರತೆ ಅತ್ಯವಶ್ಯಕವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ರಾಸಾಯನಿಕ ದುರಂತವನ್ನು ಅಪಾಯಕಾರಿ ಕಾರ್ಖಾನೆಗಳಲ್ಲಿ ತಡೆಗಟ್ಟುವ ಸಲುವಾಗಿ ಅಣಕು ಪ್ರದರ್ಶನ ಪೂರ್ವಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.
ರಾಸಾಯನಿಕ ಕಾರ್ಖಾನೆಗಳಲ್ಲಿ ಕೆಮಿಕಲ್ ಲಿಕೇಜ್ ಆದಲ್ಲಿ ಮುಂಜಾಗ್ರತೆ ಕ್ರಮ ಮತ್ತು ನುರಿತ ಕಾರ್ಮಿಕರಿಗೆ ಈ ಕುರಿತು ಸರಿಯಾದ ತರಬೇತಿ ನೀಡಬೇಕು. ಆಗಲೇ ಯಾವುದೇ ಜೀವಹಾನಿ ಸಂಭವಿಸುವುದಿಲ್ಲ ಮತ್ತು ಯಾವುದೇ ಅಹಿತಕರ ಘಟನೆ ಸಂಭವಿಸಿದಾಗ ನಿರ್ಲಕ್ಷ ತೋರದೇ ತಕ್ಷಣವೇ ಸಂಬಂಧಿಸಿದ ಇಲಾಖೆಗಳ ಗಮನಕ್ಕೆ ತರಬೇಕು ಎಂದರು.
ಕೈಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಸುಕೇಶ ಮಾತನಾಡಿ, ರಾಸಾಯನಿಕ ದುರಂತವನ್ನು ಅಪಾಯಕಾರಿ ಕಾರ್ಖಾನೆಗಳಲ್ಲಿ ತಡೆಗಟ್ಟುವ ಸಲುವಾಗಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ಕಾರ್ಖಾನೆಗಳು-ಬಾಯಲರ್, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆ ವತಿಯಿಂದ ಆ.4ರಂದು ಬೆಳಿಗ್ಗೆ 10:30ಕ್ಕೆ ಇಲ್ಲಿನ ಸಾಯಿ ಲೈಫ್ ಸೈನ್ಸ್ ಲಿಮಿಟೆಡ್‌ನಲ್ಲಿ ಅಣಕು ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಹಾಗಾಗಿ ಇದರ ಸುತ್ತಲಿನ ಗ್ರಾಮಸ್ಥರು, ಫ್ಯಾಕ್ಟರಿಗಳ ಜನರು ಯಾರು ಆತಂಕಕ್ಕೆ ಒಳಗಾಗಬಾರದು ಎಂದರು.
ರಾಸಾಯನಿಕ ದುರಂತವನ್ನು ಅಪಾಯಕಾರಿ ಕಾರ್ಖಾನೆಗಳಲ್ಲಿ ಅಹಿತಕರ ಘಟನೆಗಳು ಸಂಭವಿಸಿದಾಗ ಹೇಗೆ ಮುಂಜಾಗ್ರತೆ ವಹಿಸಬೇಕೆನ್ನುವ ಕುರಿತು ಈ ಅಣಕು ಪ್ರದರ್ಶನ ನಡೆಸಲಾಗುತ್ತಿದೆ. ಇದರ ರಿಲೀಫ್ ಸೆಂಟರ್‌ನ್ನು ನಗರದ ಪಶು ವಿಶ್ವವಿದ್ಯಾಲಯದಲ್ಲಿ ತೆರೆಯಲಾಗಿದೆ. ಸುತ್ತಮುತ್ತಲಿನ ಜನರು ಯಾವುದೇ ರೀತಿಯ ಭಯ ಮತ್ತು ಆತಂಕಕ್ಕೆ ಒಳಗಾಗಬಾರದೆಂದು ಹೇಳಿದರು.
ಎನ್‌ಡಿಆರ್‌ಎಫ್ ಹೈದ್ರಾಬಾದನ ಅಸಿಸ್ಟೆಂಟ್ ಕಮಾಂಡೆಂಟ್ ದಾಮೋಧರಸಿಂಗ್, ಹೆಚ್ಚುವರಿ ಎಸ್‌ಪಿ ಮಹೇಶ ಮೇಘಣ್ಣನವರ, ಜಿಲ್ಲಾ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕಿ ಸುರೇಖಾ, ತಹಶೀಲ್ದಾರ್ ಅಣ್ಣಾರಾವ ಪಾಟೀಲ ಮತ್ತು ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.