ಕನ್ನಡ ಚಿತ್ರರಂಗದಲ್ಲಿ ಹೊಸ ಟ್ರೆಂಡ್‌ವೊಂದು ಶುರುವಾಗಿದೆ. ಅದು ಪ್ರೀ ರಿಲೀಸ್ ಇವೆಂಟ್. ಸಿನಿಮಾ ಬಿಡುಗಡೆ ಪೂರ್ವದಲ್ಲಿ ಪ್ರೇಕ್ಷಕರನ್ನು ತನ್ನತ್ತ ಸೆಳೆಯಲು ಈಗ ಸಿನಿಮಾ ತಂಡಗಳು ಪ್ರೀ ರಿಲೀಸ್ ಇವೆಂಟ್ ಮೊರೆ ಹೋಗುತ್ತಿವೆ. ಹಾಗಂತ ಇದು ಕನ್ನಡಕ್ಕೆ ತೀರಾ ಹೊಸದೇನು ಅಲ್ಲ. ಈ ಹಿಂದೆ ಅಲ್ಲೊಂದು-ಇಲ್ಲೊಂದು ಸಿನಿಮಾಗಳು ಈ ತರಹದ ಕಾರ್ಯಕ್ರಮ ಮಾಡುತ್ತಿದ್ದವು. ಆದರೆ, ಈಗ ಬಹುತೇಕ ಎಲ್ಲಾ ಸ್ಟಾರ್ ಸಿನಿಮಾಗಳು ಸಿನಿಮಾ ಬಿಡುಗಡೆಗೆ ಮುನ್ನ ಈ ತರಹದ ಒಂದು ಇವೆಂಟ್ ಪ್ಲ್ರಾನ್ ಮಾಡಿಕೊಳ್ಳುತ್ತಿವೆ.
ಇತ್ತೀಚೆಗೆ ಈ ತರಹದ ಇವೆಂಟ್ ಮೂಲಕ ಪ್ರೇಕ್ಷಕರನ್ನು ತನ್ನತ್ತ ಸೆಳೆದ ಚಿತ್ರಗಳಲ್ಲಿ ಎರಡು ಪ್ರಮುಖವಾಗಿವೆ. ಅದು “ಪೊಗರು’ ಹಾಗೂ “ರಾಬರ್ಟ್’. ಧ್ರುವ ಸರ್ಜಾ ನಟನೆಯ “ಪೊಗರು’ ಚಿತ್ರ ಬಿಡುಗಡೆಗೆ ಮೊದಲು ದಾವಣಗೆರೆಯಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಿ, ಆ ಮೂಲಕ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಸೇರಿಸಿತ್ತು. ಇನ್ನು ದರ್ಶನ್ ನಟನೆಯ “ರಾಬರ್ಟ್’ ಚಿತ್ರ ಕೂಡಾ ಪ್ರೀ ರಿಲೀಸ್ ಇವೆಂಟ್ ಮೂಲಕ ಅಭಿಮಾನಿಗಳನ್ನು ಸೆಳೆದಿದ್ದು ಸುಳ್ಳಲ್ಲ. ಮೊದಲು ಹೈದರಾಬಾದ್‌ನಲ್ಲಿ ಕಾರ್ಯಕ್ರಮ ಮಾಡಿ, ತೆಲುಗು ಪ್ರೇಕ್ಷಕರ ಮನಗೆದ್ದ “ರಾಬರ್ಟ್’ ತಂಡ ಬಳಿಕ ಹುಬ್ಬಳ್ಳಿಯಲ್ಲಿ ಅದ್ಧೂರಿ ಕಾರ್ಯಕ್ರಮ ಮಾಡಿತು. ಇದು ಸಿನಿಮಾಕ್ಕೆ ಪ್ಲಸ್ ಪಾಯಿಂಟ್ ಆಗಿದ್ದು, ಸುಳ್ಳಲ್ಲ.
ತಮ್ಮ ಬಳಿಗೆ ಬಂದ ನಾಯಕನ ಸಿನಿಮಾವನ್ನು ಕಣ್ತುಂಬಿಕೊಳ್ಳಬೇಕೆಂಬ ಕಾರಣದಿಂದ ಆ ಭಾಗದ ಜನ ಚಿತ್ರಮಂದಿರಕ್ಕೆ ಬರುತ್ತಿದ್ದಾರೆ. ಪರಿಣಾಮವಾಗಿ ಕಲೆಕ್ಷನ್ ಕೂಡಾ ಚೆನ್ನಾಗಿದೆ. ಈಗ ಮತ್ತಷ್ಟು ಚಿತ್ರತಂಡಗಳು ಈ ತರಹದ ಇವೆಂಟ್‌ಗೆ ಮುಂದಾಗಿವೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ “ಯುವರತ್ನ’ ಚಿತ್ರದ ಪ್ರೀ-ರಿಲೀಸ್ ಇವೆಂಟ್ ಮೈಸೂರಿನಲ್ಲಿ ನಡೆಯಬೇಕಿತ್ತು. ಅದಕ್ಕೆ ಸಿದ್ಧತೆಗಳು ಕೂಡಾ ನಡೆದಿದ್ದವು. “ಯುವ ಸಂಭ್ರಮ’ ಹೆಸರಿನಲ್ಲಿ ಈ ಕಾರ್ಯಕ್ರಮ ನಡೆಸಲು ಚಿತ್ರತಂಡ ಮುಂದಾಗಿತ್ತು. ಆದರೆ, ಕೊರೊನಾ ಹೆಚ್ಚಾಗುತ್ತಿರುವ ಕಾರಣದಿಂದ ಚಿತ್ರತಂಡ ಸದ್ಯಕ್ಕೆ ಆ ಕಾರ್ಯಕ್ರಮವನ್ನು ಮುಂದಕ್ಕೆ ಹಾಕಿದೆ. ಮುಂದಿನ ದಿನಗಳಲ್ಲಿ ಮಾಡುವ ಯೋಚನೆ ಕೂಡಾ ಇದೆ.
ಇನ್ನು “ಯುವರತ್ನ’ ಚಿತ್ರ ತೆಲುಗಿನಲ್ಲೂ ತೆರೆಕಾಣುತ್ತಿದ್ದು, ಅಲ್ಲೂ ಚಿತ್ರತಂಡ ಇವೆಂಟ್ ಮಾಡುವ ಯೋಚನೆ ಇದೆ ಎನ್ನಲಾಗಿದೆ. ಇದಲ್ಲದೇ, ಶಿವರಾಜ್ ಕುಮಾರ್ ಹಾಗೂ ಎ.ಹರ್ಷ ಕಾಂಬಿನೇಶನ್‌ನಲ್ಲಿ ಮೂಡಿಬರುತ್ತಿರುವ “ಭಜರಂಗಿ-2′ ಚಿತ್ರತಂಡ ಕೂಡಾ ರಾಯಚೂರಿನಲ್ಲಿ ಪ್ರೀ ರಿಲೀಸ್ ಇವೆಂಟ್‌ವೊಂದನ್ನು ಮಾಡುವ ಯೋಚನೆಯಲ್ಲಿದೆ.
ಉತ್ತರ ಕರ್ನಾಟಕದಲ್ಲೇ ಹೆಚ್ಚು :
ಇಲ್ಲಿ ಗಮನಿಸಬೇಕಾದ ಒಂದು ಅಂಶವೆಂದರೆ ಬಹುತೇಕ ಸಿನಿಮಾ ಕಾರ್ಯಕ್ರಮಗಳು ಉತ್ತರ ಕರ್ನಾಟಕ ಕಡೆ ನಡೆಯುತ್ತವೆ. ಸಿನಿಮಾ ಮಂದಿ ಆ ಭಾಗದಲ್ಲಿ ಇವೆಂಟ್ ನಡೆಸಲು ಹೆಚ್ಚು ಉತ್ಸಾಹ ತೋರುತ್ತಾರೆ ಅದಕ್ಕೆ ಕಾರಣ ಕನ್ನಡ ಸಿನಿಮಾಕ್ಕೆ ದೊಡ್ಡ ಮಟ್ಟದ ಪ್ರೇಕ್ಷಕರಿರೋದು ಉತ್ತರ ಕರ್ನಾಟಕ ಭಾಗದಲ್ಲಿ. ಕನ್ನಡ ಸಿನಿಮಾಕ್ಕೆ ಮೊದಲ ಆದ್ಯತೆ ಕೊಡುವ ಜನರ ಊರಲ್ಲಿ ಕಾರ್ಯಕ್ರಮ ಮಾಡಿ ಅವರನ್ನು ಖುಷಿಪಡಿಸುವ ಜೊತೆಗೆ ಸಿನಿಮಾಕ್ಕೆ ಸೆಳೆಯುವ ಪ್ರಯತ್ನ ಇದಾಗಿದೆ.
ರವಿಪ್ರಕಾಶ್ ರೈ