Advertisement
ವಾಡಿಕೆಗಿಂತ ಶೇ.90ರಷ್ಟು ಪೂರ್ವ ಮುಂಗಾರು ಮಳೆ ಪಟ್ಟಣ ಸೇರಿದಂತ್ತೆ ತಾಲೂಕಿನಾದ್ಯಂತ ಬಿದ್ದಿದೆ. ಈ ಪರಿಣಾಮ ಪ್ರಮುಖ ವಾಣಿಜ್ಯ ಬೆಳೆಗಳಾದ ತಂಬಾಕು, ಮೆಕ್ಕೆ ಜೋಳ ಬಿತ್ತನೆ ಆರಂಭಗೊಂಡಿದೆ. ಆಲೂಗಡ್ಡೆ ಬಿತ್ತನೆ ಬೀಜ ಮಾರುಕಟ್ಟೆಗೆ ಬಂದಿದ್ದು, ಬಿತ್ತನೆ ಮಾತ್ರ ವಾರದಲ್ಲಿ ಪ್ರಾರಂಭಗೊಳ್ಳಬೇಕಿದೆ. ಜನವರಿಯಿಂದ ಮೇ ವರೆಗಿನ ವಾಡಿಕೆ ಮಳೆ ಪ್ರಮಾಣ 108 ಮಿ.ಮೀ.ಇದ್ದು, ಮೇ 9ರ ಅಂತ್ಯಕ್ಕೆ 220 ಮಿ.ಮೀ.ಮಳೆಯಾಗಿದೆ. ಇದು ರೈತರಿಗೆ ವರದಾನವಾಗಿ ಕೃಷಿ ಚಟುವಟಿಕೆ ಚುರುಕುಗೊಳ್ಳಲು ನೆರವಾಗಿದೆ.
Related Articles
Advertisement
ರಸಗೊಬ್ಬರ ದಾಸ್ತಾನು: ತಾಲೂಕಿಗೆ ಮುಂಗಾರು ಹಂಗಾಮಿಗೆ ಒಟ್ಟಾರೆಯಾಗಿ 23800 ಟನ್ ರಸಗೊಬ್ಬರ ಸರಬರಾಜು ಅಗತ್ಯವಿದ್ದು ತಾಲೂಕಿನ 5 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, 1 ತಾಲೂಕು ವ್ಯವಸಾಯೋತ್ಪನ್ನ ಸಹಕಾರ ಸಂಘ ಹಾಗೂ 59 ಖಾಸಗಿ ರಸಗೊಬ್ಬರ ಮಾರಾಟ ಮಳಿಗೆಗಳಲ್ಲಿ ರಸಗೊಬ್ಬರ ದಾಸ್ತಾನು ಹಾಗೂ ವಿತರಣೆ ವ್ಯವಸ್ಥಿತವಾಗಿ ನಡೆಯುತ್ತಿದೆ. ಪ್ರಸ್ತುತ್ತ ಏಪ್ರೀಲ್ ಅಂತ್ಯಕ್ಕೆ 3280 ಟನ್ ವಿವಿಧ ರಸಗೊಬ್ಬರಗಳ ದಾಸ್ತಾನು ಲಭ್ಯವಿರುತ್ತದೆ. ಹಾಗೂ ತಂಬಾಕು ಮಂಡಳಿ ಪ್ಲಾಟ್ ಫಾರಂ-7 ಮತ್ತು 63ರಲ್ಲಿ ಪ್ರತ್ಯೇಕ ವಾಗಿ 5800ಟನ್ ರಸಗೊಬ್ಬರ ದಾಸ್ತಾನಿದ್ದು ತಂಬಾಕು ಬೆಳೆಗಾರರಿಗೆ ತಂಬಾಕು ಮಂಡಳಿ ವತಿಯಿಂದ ವಿತರಿಸಲಾಗುತ್ತಿದೆ.
ಮಳೆ ವಿವರ: ಜನವರಿ ಒಂದರಿಂದ ಮೇ 9ರವರೆಗೆ ಬಿದ್ದ ಮಳೆವಿವರ ಇಂತಿದೆ. ಅರಕಲಗೂಡು ತಾಲೂಕಿನಾದ್ಯಂತ ಒಟ್ಟು 92ಮಿ.ಮೀ ಮಳೆ ಬಿದ್ದಿದೆ. ಕಸಬಾ ಹೋಬಳಿ 75 ಮಿ.ಮೀ.ದೊಡ್ಡಮಗ್ಗೆ 99ಮಿ. ಮೀ.ಕೊಣನೂರು 110ಮಿ.ಮೀ.ಮಲ್ಲಿಪಟ್ಟಣ 66ಮಿ.ಮೀ. ಹಾಗೂ ರಾಮನಾಥಪುರ 115ಮಿ. ಮೀ.ಮಳೆಯಾಗಿದೆ.
ತಾಲೂಕಿನಲ್ಲಿ ವಾಡಿಕೆಗಿಂತ ಮುಂಚೆಯೇ ಮಳೆಯಾಗುತಿದ್ದು, ಈ ಅವಧಿಯಲ್ಲಿ ಕೈಗೊಳ್ಳಬೇಕಾದ ಬಿತ್ತನೆಯನ್ನು ರೈತರು ಕೈಗೊಳ್ಳಬಹುದಾಗಿದೆ. ರೈತ ಬಾಂಧವರು ಆಧಾರ್‌ಕಾರ್ಡ್ ಮತ್ತು ಪಹಣಿ, ಪಟ್ಟೆ ಪುಸ್ತಕ, ಹಿಡುವಳಿ ಪತ್ರವನ್ನು ತಂದು, ಲಭ್ಯವಿರುವ ಕೃಷಿ ಪರಿಕರಗಳನ್ನು ಖರೀದಿಸಿ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. – ರಮೇಶ್ ಕುಮಾರ್, ತಾಲೂಕು ಸಹಾಯಕ ಕೃಷಿ ನಿರ್ದೇಶಕರು.
ಪೂರ್ವ ಮುಂಗಾರು ಮಳೆ ಬೀಳುತ್ತಿರುವ ಹಿನ್ನೆಲೆ ಭೂಮಿ ಹದಗೊಳಿಸಲು, ಕೃಷಿ ಕಾಯಕದಲ್ಲಿ ತೊಡಗಲು ಸಹಕಾರಿಯಾಗಿದೆ. ಆದರೆ, ಏರಿಕೆಯಾಗಿರುವ ರಸಗೊಬ್ಬರ ಬೆಲೆಯಿಂದ ನಿರೀಕ್ಷಿತ ಕೃಷಿಯನ್ನು ಕೈಗೊಳ್ಳಲು ತುಂಬಾ ತೊಂದರೆಯಾಗಿದೆ. ರಸಗೊಬ್ಬರ ಖರೀದಿಗೆ ಸಹಾಯ ಧನವನ್ನು ಸರಕಾರ ನೀಡಬೇಕಿತ್ತು. – ಸಣ್ಣಯ್ಯ, ನೇಗೆರೆ ಗ್ರಾಮದ ರೈತ.
-ವಿಜಯ್ ಕುಮಾರ್