Advertisement

Pre Education: ಜು. 22ರಿಂದ 250 ಅಂಗನವಾಡಿಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭ

11:17 PM Jul 14, 2024 | Team Udayavani |

ಬೆಂಗಳೂರು: ಇಡೀ ದೇಶಕ್ಕೆ ಮಾದರಿಯಾಗಿರುವ ಕರ್ನಾಟಕದ ಅಂಗನವಾಡಿ ಕೇಂದ್ರಗಳ ಉನ್ನತೀಕರಣದ ಮೊದಲ ಭಾಗವಾಗಿ ಜುಲೈ 22ರಂದು ರಾಜ್ಯದ 250 ಅಂಗನವಾಡಿ ಕೇಂದ್ರಗಳಲ್ಲಿ ಪೂರ್ವ ಪ್ರಾಥಮಿಕ (ಎಲ್‌ಕೆಜಿ, ಯುಕೆಜಿ) ತರಗತಿಗಳನ್ನು ಸಾಂಕೇತಿಕವಾಗಿ ಆರಂಭಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಟಾಳ್ಕರ್‌ ಹೇಳಿದರು.

Advertisement

ಬೆಂಗಳೂರಿನಲ್ಲಿ ನಡೆದ “ಅಂಗನವಾಡಿ ಕೇಂದ್ರಗಳಲ್ಲೇ ಪೂರ್ವ ಪ್ರಾಥಮಿಕ ಶಿಕ್ಷಣ ಜಾರಿಯಾಗಲಿ, ಐಸಿಡಿಎಸ್‌ ಉಳಿಸಿ ಮಕ್ಕಳನ್ನು ರಕ್ಷಿಸಿ, ಸಂಘಟನೆ-ಸಂಘರ್ಷ-ಶಿಕ್ಷಣ ಅಧ್ಯಯನ ಶಿಬಿರ’ದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿ ಪೂರ್ವ ಪ್ರಾಥಮಿಕ ಶಾಲಾ ಮಕ್ಕಳಿಗೆ ಇಲಾಖೆ ವತಿಯಿಂದಲೇ ಬ್ಯಾಗ್‌, ಪುಸ್ತಕ ಹಾಗೂ ಸಮವಸ್ತ್ರಗಳನ್ನು ವಿತರಿಸಲಾಗುವುದು. 30 ವರ್ಷಕ್ಕಿಂತ ಮೇಲ್ಪಟ್ಟ ಅಂಗನವಾಡಿ ಕೇಂದ್ರಗಳನ್ನು ಉನ್ನತ ದರ್ಜೆಗೆ ಏರಿಸಲಾಗುವುದು. ನನ್ನ ಅಧಿಕಾರಾವಧಿಯಲ್ಲಿ ಇಲಾಖೆಗೆ ಕೈಲಾದಷ್ಟು ಉತ್ತಮ ಕೆಲಸ ಮಾಡುವೆ. ಕಾರ್ಯಕರ್ತೆಯರ ಹೋರಾಟದ ಶಕ್ತಿಯೇ ಅಂಗನವಾಡಿ ಉನ್ನತೀಕರಣಕ್ಕೆ ಕಾರಣ ಎಂದರು.

ಗವರ್ನಮೆಂಟ್‌ ಮಾಂಟೆಸ್ಸರಿ ಆರಂಭ
ಇನ್ನು ಮುಂದೆ ಅಂಗನವಾಡಿಗಳು ಗವರ್ನಮೆಂಟ್‌ ಮಾಂಟೆಸ್ಸರಿ ಆಗಿ ಬದಲಾಗಲಿವೆ. ಮಕ್ಕಳಿಗೆ ಆರಂಭಿಕ ಶಿಕ್ಷಣ ನೀಡಲು ಮೊದಲ ಹಂತದಲ್ಲಿ 15ರಿಂದ 20 ಸಾವಿರ ಅಂಗನವಾಡಿ ಕೆಂದ್ರಗಳಲ್ಲಿ ಗವರ್ನಮೆಂಟ್‌ ಮಾಂಟೆಸ್ಸರಿ ಆರಂಭಿಸಲಾಗುತ್ತಿದೆ. ಅಂಗನವಾಡಿ ಕೇಂದ್ರಗಳನ್ನು ಉನ್ನತೀಕರಣ ಮಾಡುವುದೇ ಇಲಾಖೆಯ ಉದ್ದೇಶ ಎಂದರು.

ಶೀಘ್ರವೇ ವಿಮೆ ತೀರ್ಮಾನ
ಅಂಗನವಾಡಿ ಕಾರ್ಯಕರ್ತೆಯರಿಗೆ ವಿಮೆ ನೀಡುವ ಕುರಿತು ಶೀಘ್ರವೇ ತೀರ್ಮಾನಿಸಲಾಗುವುದು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಚರ್ಚೆ ನಡೆಸಲಾಗುವುದು. ಗೌರವ ಧನ ಹೆಚ್ಚಳದ ಬಗ್ಗೆಯೂ ಸಿಎಂ ಜೊತೆಗೆ ಚರ್ಚಿಸಿದ್ದು, ಶೀಘ್ರವೇ ಕಾರ್ಯರೂಪಕ್ಕೆ ತರುವ ಕೆಲಸ ಆಗಲಿದೆ ಎಂದು ಸಚಿವರು ತಿಳಿಸಿದರು.

ಏನಿದು ಮಾಂಟೆಸ್ಸರಿ?
ಅಂಗನವಾಡಿ ಎಂಬುದು ಹಳೆಯ ಪರಿಕಲ್ಪನೆಯಾಗಿದ್ದು ಅದನ್ನು ಮಾಂಟೆಸ್ಸರಿ ಪರಿಕಲ್ಪನೆಗೆ ಬದಲಾಯಿಸಲಾಗುತ್ತದೆ. ಮಾಂಟೆಸ್ಸರಿಗಳಲ್ಲಿ ಇಂಗ್ಲಿಷ್‌ ಭಾಷೆ ಜತೆ ಮಕ್ಕಳ ಶಿಕ್ಷಣಕ್ಕೂ ಆದ್ಯತೆ ನೀಡಲಾಗುತ್ತದೆ. ಪೌಷ್ಟಿಕಾಂಶದ ಜತೆ ಶೂ, ಪುಸ್ತಕ, ಶಾಲಾ ಬ್ಯಾಗ್‌ಗಳನ್ನು ನೀಡಲಾಗುತ್ತದೆ. ಖಾಸಗಿ ಶಾಲೆಗಳಲ್ಲಿನ ಎಲ್‌ಕೆಜಿ, ಯುಕೆಜಿಯಂತೆ ಶಿಕ್ಷಣ ಸಿಗಲಿದೆ. ಮಗುವಿಗೆ 6 ವರ್ಷ ತುಂಬಿದಾಗ ಟಿಸಿ ನೀಡುವ ಪದ್ಧತಿ ಆರಂಭಗೊಳ್ಳಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next