Advertisement

Education Department: ಪಿಯು ನಂತರ ಸಿಇಟಿಗೆ ಉಚಿತ ತರಬೇತಿ: ಶಿಕ್ಷಣ ಸಚಿವ ಮಧು ಬಂಗಾರಪ್ಪ

01:42 AM Sep 06, 2024 | Esha Prasanna |

ಬೆಂಗಳೂರು: ಪದವಿಪೂರ್ವ ಶಿಕ್ಷಣದ ನಂತರ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಸರ್ಕಾರದಿಂದಲೇ ಉಚಿತವಾಗಿ ತರಬೇತಿ ಕೊಡಲಾಗುವುದು ಎಂದು ಘೋಷಿಸಿದ ಶಾಲಾ ಶಿಕ್ಷಣ ಮತ್ತು ಸಾರಕ್ಷತಾ ಇಲಾಖೆ ಸಚಿವ ಮಧು ಬಂಗಾರಪ್ಪ, ಸೆ.15 ಅಥವಾ 20 ರಿಂದ ಮಕ್ಕಳಿಗೆ ವಾರವಿಡಿ ಮೊಟ್ಟೆ ಕೊಡುವ ಕಾರ್ಯಕ್ರಮ ಜಾರಿಗೊಳಿಸಲಾಗುವುದು ಎಂದೂ ಪ್ರಕಟಿಸಿದರು.

Advertisement

ವಿಧಾನಸೌಧದ ಬ್ಯಾಂಕ್ವೆಟ್‌ ಸಭಾಂಗಣದಲ್ಲಿ ಗುರುವಾರ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ “ಅಕ್ಷರ ಆವಿಷ್ಕಾರ’ ಕಾರ್ಯಕ್ರಮದ ಮೂಲಕ 1008 ಎಲ್‌ಕೆಜಿ, ಯುಕೆಜಿ ತರಗತಿ ಆರಂಭಿಸಿದ್ದು, 40 ದಿನದಲ್ಲಿ 40 ಸಾವಿರ ಮಕ್ಕಳು ದಾಖಲಾಗಿದ್ದಾರೆ.

ಶೈಕ್ಷಣಿಕ ವರ್ಷದ ಮೊದಲ ದಿನವೇ 42,500 ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡಿದ್ದೇವೆ, 12,500 ಶಾಲಾ ಶಿಕ್ಷಕರ ನೇಮಕ ಆಗಿದೆ. 9 ವರ್ಷದಿಂದ ನೇಮಕವಾಗದ ಅನುದಾನಿತ ಶಾಲೆಗಳಲ್ಲೂ 5 ವರ್ಷಕ್ಕೆ ಶಿಕ್ಷಕರ ನೇಮಕಾತಿ ಆಗಿದೆ. ಮುಂದಿನ ದಿನಗಳಲ್ಲಿ ಶಿಕ್ಷಕರು, ಉಪನ್ಯಾಸಕರ ಕೊರತೆ ನೀಗಿಸುತ್ತೇವೆ ಎಂದರು.

ಸಮಾನತೆ, ಬಂಧುತ್ವ, ಸಾಮಾಜಿಕ ನ್ಯಾಯ ಕೊಡುವ ಸಂವಿಧಾನದ ಪೀಠಿಕೆಯನ್ನು 1.06 ಕೋಟಿ ಮಕ್ಕಳು ಪ್ರತಿದಿನ ಓದುವಂತಾಗಿದೆ. ವಾರದಲ್ಲಿ 6 ದಿನವೂ ಹಾಲು, ರಾಗಿ ಮಾಲ್ಟ್, ಮಧ್ಯಾಹ್ನದ ಬಿಸಿಯೂಟ ಸಿಗುತ್ತಿದ್ದು, ವಾರದಲ್ಲಿ ಒಂದು ದಿನ ಸಿಗುತ್ತಿದ್ದ ಮೊಟ್ಟೆಯನ್ನು ವಾರದಲ್ಲಿ ಎರಡು ದಿನ ಕೊಡಲಾಗುತ್ತಿದೆ.

ಅಜೀಂ ಪ್ರೇಮ್‌ಜೀ ಪ್ರತಿಷ್ಠಾನದೊಂದಿಗೆ ಒಡಂಬಡಿಕೆ ಮಾಡಿಕೊಂಡಿರುವ ಪ್ರಕಾರ ಸೆ.15 ಅಥವಾ 20 ರಿಂದ 1500 ಕೋಟಿ ರೂ. ವೆಚ್ಚದಲ್ಲಿ 56 ಲಕ್ಷ ಮಕ್ಕಳಿಗೆ ವಾರವಿಡೀ ಮೊಟ್ಟೆ, ಚಿಕ್ಕಿ ಅಥವಾ ಬಾಳೆಹಣ್ಣು ಕೊಡುವ ಕಾರ್ಯ ಆರಂಭವಾಗಲಿದೆ. ಎಲ್ಲಕ್ಕಿಂತ ಮಿಗಿಲಾಗಿ ಪಿಯು ನಂತರ ಸಿಇಟಿ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗೆ ಸರ್ಕಾರದಿಂದ ಉಚಿತ ತರಬೇತಿ ಕೊಡುವ ಚಿಂತನೆಯೂ ಇದ್ದು, ಈ ಬಾರಿಯಿಂದಲೇ ಶುರು ಮಾಡುತ್ತೇವೆ ಎಂದು ಪ್ರಕಟಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next