Advertisement

ಜೀವಕ್ಕೆ ಮುಳುವಾದ ಪ್ರಸಾದ ಎಚ್ಚರಿಕೆ ಅಗತ್ಯ

12:30 AM Jan 28, 2019 | |

ಕೆಲ ದಿನಗಳ ಹಿಂದೆ ಚಾಮರಾಜನಗರ ಜಿಲ್ಲೆ ಸುಳ್ವಾಡಿಯ ಮಾರಮ್ಮ ದೇವಸ್ಥಾನದಲ್ಲಿ ವಿಷ ಪ್ರಸಾದ ಸೇವಿಸಿ 17 ಜನರು ಮೃತಪಟ್ಟಿದ್ದ ದುರಂತ ಘಟನೆಯ ವೇದನೆ ಮಾಸುವ ಮುನ್ನವೇ ಚಿಂತಾಮಣಿ ನಗರದ ಗಂಗಮ್ಮ ದೇವಾಲಯದಲ್ಲಿ ಶನಿವಾರ ಭಕ್ತರೊಬ್ಬರು ಹಂಚಿದ ಪ್ರಸಾದ ಸೇವಿಸಿ 12 ಮಂದಿ ಅಸ್ವಸ್ಥರಾಗಿ, ಇಬ್ಬರು ಮಹಿಳೆಯರು ಮೃತಪಟ್ಟಿರುವ ಘಟನೆ ಜರುಗಿದೆ.

Advertisement

ರಾಜ್ಯದ ಪಾಲಿಗಂತೂ ಈ ಘಟನೆ ನಿಜಕ್ಕೂ ಅತೀವ ನೋವು ತರಿಸುವಂಥದ್ದು. ಚಾಮರಾಜನಗರ ಜಿಲ್ಲೆಯಲ್ಲಾದ ಪಾತಕತನದಿಂದ ಆಘಾತಗೊಂಡಿದ್ದ ಜನರಿಗೆ, ಈಗಿನ ಘಟನೆಯೂ ಬೇಸರ ತರಿಸಿದೆ. ‘ಚಿಂತಾಮಣಿ ಘಟನೆಯಲ್ಲಿ ಮೇಲ್ನೋಟಕ್ಕೆ ಪ್ರಸಾದದಲ್ಲಿ ವಿಷ ಪದಾರ್ಥವಿಲ್ಲ ಎಂಬುದು ಕಂಡುಬಂದಿದ್ದು, ಫ‌ುಡ್‌ ಪಾಯಿಸನ್‌ಗೆ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಮೊದಲು ತಾಲೂಕು ಆರೋಗ್ಯಾಧಿಕಾರಿಗಳು ಹೇಳಿದ್ದರು. ಆದರೆ ಇದೀಗ ವಿಷ ಬೆರೆಸಿರುವ ಶಂಕೆ ವ್ಯಕ್ತವಾಗಿದೆ. ಸತ್ಯಾಸತ್ಯತೆ ವೈದ್ಯಕೀಯ ವರದಿ ಮತ್ತು ತನಿಖೆಯ ನಂತರವೇ ತಿಳಿಯಲಿದೆಯಾದರೂ ಈ ರೀತಿಯ ಘಟನೆಗಳು ದೇವರ ಪ್ರಸಾದ ಎಂದರೆ ಜನರು ಹೆದರುವಂತೆ ಮಾಡುತ್ತಿರುವುದು ಸುಳ್ಳಲ್ಲ. ಅದರಲ್ಲೂ ಮಾರಮ್ಮ ದೇವಸ್ಥಾನದ ಪ್ರಕರಣವಂತೂ ಭಕ್ತರಲ್ಲಿ ಅನುಮಾನದ ಬೀಜವನ್ನು, ಭಯವನ್ನು ಬಿತ್ತಿಬಿಟ್ಟಿರುವುದು ಸುಳ್ಳಲ್ಲ.

ನೆಮ್ಮದಿಯ ತಾಣವಾಗಬೇಕಾದ ಮಂದಿರಗಳಿಂದ ಈ ರೀತಿಯ ಸುದ್ದಿ ಬರುತ್ತಿರುವುದು ನಿಜಕ್ಕೂ ಕಳವಳದ ಸಂಗತಿ. ಈ ರೀತಿಯ ಘಟನೆಗಳು ಮುಂದೆ ನಡೆಯಬಾರದು ಎಂದು ಆಶಿಸಬಹುದಷ್ಟೇ ಹೊರತು, ಅಪಾಯವನ್ನು ತಡೆಯಲು ಪರಿಪೂರ್ಣ ತಡೆ ಕ್ರಮಗಳಿಲ್ಲ ಎನ್ನುವ ಸತ್ಯವೇ ಈ ಕಳವಳಕ್ಕೆ ಕಾರಣ. ಒಂದು ಮಂದಿರದಲ್ಲಿ ಹಲವಾರು ಜನರು ಕೆಲಸ ಮಾಡುತ್ತಿರುತ್ತಾರೆ. ಹಾಗಾಗಿ ಉತ್ತರದಾಯಿತ್ವವೆನ್ನುವುದು ಅಷ್ಟಾಗಿ ಇರುವುದಿಲ್ಲ. ಯಾರು ಪ್ರಸಾದ ತಯಾರಿಸಿದರು, ಯಾರು ಅಡುಗೆ ಶಾಲೆಗೆ ಪ್ರವೇಶಿಸಿದರು, ಹಣ್ಣು-ಹಂಪಲು, ತರಕಾರಿಗಳ ಮೇಲೆ ನಿಗಾ ಇಡಲಾಗಿದೆಯೇ ಎನ್ನುವುದನ್ನು ನೋಡಿಕೊಳ್ಳುವುದು ಹೇಗೆ? ಹಾಗೆಂದಾಕ್ಷಣ ಮಂದಿರಗಳನ್ನೆಲ್ಲ ಸರ್ಕಾರದ ಸುಪರ್ದಿಗೆ ವಹಿಸಿಬಿಡಬೇಕು ಎನ್ನುವ ವಾದ ಬಾಲಿಶವಾಗುತ್ತದೆ. ಏಕೆಂದರೆ, ಪ್ರಸಾದ ಎನ್ನುವ ಪರಿಕಲ್ಪನೆಯೇ ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ಇರುತ್ತದೆ. ಕೆಲವೆಡೆ ಭಕ್ತರೇ ಮನೆಯಿಂದ ಪ್ರಸಾದ ಮಾಡಿಸಿಕೊಂಡು ಬಂದು ಮಂದಿರದಲ್ಲಿ ನೆರೆದ ಭಕ್ತರಿಗೆ ಹಂಚುತ್ತಾರೆ. ಕೆಲವೆಡೆ ಹರಕೆ ಹೊತ್ತವರು ದೇವಸ್ಥಾನದ ಹೊರಗೆ ನಿಂತು ಪ್ರಸಾದ ಹಂಚುತ್ತಾರೆ. ಅವರಿಗೆ ಪ್ರಸಾದ ಹಂಚಬೇಡಿ ಎಂದು ಹೇಳುವುದಕ್ಕೆ ಸಾಧ್ಯವಿದೆಯೇ? ಹೀಗೆ ಕೊಟ್ಟ ಪ್ರಸಾದ ಶುದ್ಧವಾಗಿದೆಯೋ ಇಲ್ಲವೋ ಎಂದು ಲ್ಯಾಬ್‌ ರಿಪೋರ್ಟ್‌ ಕೇಳಲಿಕ್ಕಂತೂ ಆಗುವುದಿಲ್ಲವಲ್ಲ? ಆದರೂ ದೇವಸ್ಥಾನದಲ್ಲೇ ಸಿದ್ಧವಾಗುವ ಪ್ರಸಾದವಾದರೆ, ಅಲ್ಲಿನ ಆಡಳಿತ ಮಂಡಳಿ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತಾಗಬೇಕು. ಅನೇಕ ಬಾರಿ ಕೊಳೆತ ತರಕಾರಿಯೋ ಹಣ್ಣೋ ಪ್ರಸಾದವನ್ನು ಸೇರಿ, ಸೇವಿಸಿದವರನ್ನು ಅನಾರೋಗ್ಯಕ್ಕೆ ದೂಡುವ ಪ್ರಕರಣಗಳೇ ಅಧಿಕವಾಗಿರುತ್ತವೆ. ಫ‌ುಡ್‌ಪಾಯಿಸನಿಂಗ್‌ನಂಥ ಅಪಾಯಗಳಂತೂ ಇದ್ದೇ ಇರುತ್ತವೆ.

ಹೀಗಾಗಿ ದೇವಸ್ಥಾನದ ಆಡಳಿತ ಮಂಡಳಿಗಳು ತಮ್ಮ ಸಿಬ್ಬಂದಿಯಲ್ಲೇ ಕೆಲವರಿಗೆ ತರಬೇತಿ ನೀಡಿ ಆಹಾರ ಪರೀಕ್ಷಣ ತಂಡ ನೇಮಿಸಲು ಯೋಚಿಸಿದರೆ ಒಳ್ಳೆಯದು. ಅಥವಾ ಫ‌ುಡ್‌ ಸೇಫ್ಟಿ ಪರಿಣತರನ್ನು ದೇವಸ್ಥಾನಕ್ಕೆ ಕರೆಸಿ ಅವರಿಂದ ಆಹಾರ ತಯ್ನಾರಕರಿಗೆ ನೈರ್ಮಲ್ಯದ ಶಿಕ್ಷಣ ಕೊಡಿಸುವಂಥ ಕ್ರಮಗಳನ್ನು ಕೈಗೊಳ್ಳಬೇಕು. ಪ್ರಸಾದದ ಕೋಣೆಗಳು ಸ್ವಚ್ಛವಾಗಿವೆಯೇ, ನೀರು ಕೊಳಚೆಗಟ್ಟಿದೆಯೇ ಅಥವಾ ಸರಾಗವಾಗಿ ಹರಿದುಹೋಗುತ್ತಿದೆಯೇ, ಪಾತ್ರೆಗಳನ್ನೆಲ್ಲ ಸರಿಯಾಗಿ ಸ್ವಚ್ಛಗೊಳಿಸಲಾಗುತ್ತಿದೆಯೇ ಎನ್ನುವ ವಿಷಯದಲ್ಲಿ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ. ಇನ್ನು, ಹರಕೆ ಹೊತ್ತು ಮನೆಯಿಂದಲೇ ಪ್ರಸಾದ ಮಾಡಿಕೊಂಡು ಹೋಗುವವರೂ ಇದೇ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲದಿದ್ದರೆ ಪುಣ್ಯದ ಕೆಲಸವೊಂದು ತಿಳಿಯದೇ ಇನ್ನೊಬ್ಬರ ಜೀವಕ್ಕೆ ಮಾರಕವಾಗಿಬಿಡುತ್ತದೆ.

ಇನ್ನು ಭಕ್ತರಿಗೆ ಪ್ರಸಾದವನ್ನು ತಿನ್ನಬೇಡಿ ಎಂದು ಹೇಳುವುದು ತಪ್ಪಾಗುತ್ತದೆ. ಅದು ಭಾವನಾತ್ಮಕ ವಿಷಯ. ಹೀಗಾಗಿ, ಆಹಾರ ಸುರಕ್ಷತೆಯ ವಿಚಾರದಲ್ಲಿ ದೇವಸ್ಥಾನದ ಆಡಳಿತ ಮಂಡಳಿಗಳು, ಪ್ರಸಾದ ವಿತರಿಸುವವರು ಸ್ವಯಂಪ್ರೇರಣೆಯಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತಾಗಲಿ. ಇಂಥ ಘಟನೆಗಳು ಮರುಕಳಿಸದಿರಲಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next