Advertisement

ಬ್ಯಾಡಗಿಯಲ್ಲಿ ಮಳೆಗಾಗಿ ಪ್ರಾರ್ಥಿಸಿ “ಕತ್ತೆಗಳ ಮದುವೆ’

06:40 PM Jul 01, 2023 | Team Udayavani |

ಬ್ಯಾಡಗಿ: ಕೈಕೊಟ್ಟ ಮಳೆಯಿಂದ ಕಂಗಾಲಾದ ರೈತ ಸಮುದಾಯ ಮಳೆಗಾಗಿ ಪ್ರಾರ್ಥಿಸಿ ಪಟ್ಟಣದ ಚಾವಡಿ ರಸ್ತೆಯಲ್ಲಿರುವ
ಗ್ರಾಮದೇವತೆ(ದ್ವಾಮವ್ವ ದೇವಿ)ದೇವಸ್ಥಾನದ ಬಳಿ ಶುಕ್ರವಾರ ಕತ್ತೆಗಳ ಮದುವೆ ಮಾಡಿಸಿದರು.

Advertisement

ಮಳೆಗಾಗಿ ದೇವಸ್ಥಾನಗಳಲ್ಲಿ ಪೂಜೆ, ಪುನಸ್ಕಾರ, ಹೋಮ-ಹವನಗಳನ್ನು ನಡೆಸುವುದು ಸಹಜ. ಮಳೆ ಕೈಕೊಟ್ಟ ಸಂದರ್ಭದಲ್ಲಿ ಕಪ್ಪೆಗಳ ಮದುವೆ, ಕತ್ತೆಗಳ ಮದುವೆ, ಗೋಪೂಜೆ, ಬೋರ್ಗಲ್‌ ಮೇಲೆ ನೀರು ಸುರಿಯುವುದು, ಗಣ ಹೋಮ ಸೇರಿದಂತೆ ಇನ್ನಿತರ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸುವುದು ಕೂಡ ಸಾಮಾನ್ಯ. ಅಂತೆಯೇ, ಪಟ್ಟಣದ ರೈತರು ಗ್ರಾಮದೇವತೆ ದೇವಸ್ಥಾನದ ಎದುರು ಕತ್ತೆಗಳ ಮದುವೆ ನೆರವೇರಿಸಿದರು.

ಶಾಸ್ತ್ರೋಕ್ತ ಮದುವೆ: ದೇವಸ್ಥಾನದ ಎದುರು ಮದುವೆ ಸಮಾರಂಭಗಳಿಗೆ ಹಾಕುವ ಮಾದರಿಯಲ್ಲೇ ಹಂದರ ಹಾಕಲಾಗಿತ್ತು.
ಕತ್ತೆಗಳಿಗೆ ಮುತ್ತೆ„ದೆಯರು ಅರಿಶಿಣ ಹಚ್ಚಿ, ಸುರಿಗೆ ನೀರು ಹಾಕಿ, ಹಂದರಕ್ಕೆ ಪೂಜೆ ಮಾಡಿದರು. ನಂತರ ಕತ್ತೆಗಳಿಗೆ ತಾಳಿ ಕಟ್ಟುವ
ಕಾರ್ಯ ಪುರೋಹಿರ ಮಂತ್ರಘೋಷಗಳ ನಡುವೆ ಶಾಸ್ತ್ರೋಕ್ತವಾಗಿ ನಡೆಯಿತು.

ಉಚ್ಚಂಗಿ ದುರ್ಗದ ವಧು-ವರರು: ನೂತನ ವಧು-ವರರು ಹರಪನಹಳ್ಳಿ ತಾಲೂಕು ಉಚ್ಚಂಗಿ ದುರ್ಗದವರಾಗಿದ್ದಾರೆ (ಸ್ಥಳೀಯವಾಗಿ ಕತ್ತೆಗಳು ಸಿಗದ ಕಾರಣ). ಪಟ್ಟಣದ ರೈತ ಮುಖಂಡರ ಸಮ್ಮುಖದಲ್ಲಿ ಕತ್ತೆಗಳನ್ನು ಸಾಂಪ್ರದಾಯಿಕ ವಿ ಧಿವಿಧಾನಗಳೊಂದಿಗೆ ಮದುವೆ ಮಾಡಲಾಯಿತು. ನಂತರ ಸಕಲ ವಾದ್ಯವೈಭವಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ವಧು-ವರ ಕತ್ತೆಗಳ ಮರೆವಣಿಗೆ ನಡೆಸಿ ಮಧ್ಯಾಹ್ನ ಅನ್ನಸಂತರ್ಪಣೆ ನೆರವೇರಿಸಲಾಯಿತು.

ನಂಬಿಕೆ ಹುಸಿಯಾಗದಿರಲಿ: ಈ ವೇಳೆ ಮಾಜಿ ಶಾಸಕ ಸುರೇಶಗೌಡ ಪಾಟೀಲ ಮಾತನಾಡಿ, ಪರಿಸ್ಥಿತಿ ಹೀಗೆಯೇ ಮುಂದುವರೆದಲ್ಲಿ ಪ್ರಸಕ್ತ ವರ್ಷ ಬರಗಾಲ ಎದುರಾಗುವ ಭೀತಿ ಇದೆ. ಹಾಗಾಗಿ, ಕತ್ತೆಗಳ ಮದುವೆ ಮಾಡಿಸಿದಲ್ಲಿ ಮಳೆ ಬರುತ್ತದೆ ಎಂಬ ನಮ್ಮ ಪೂರ್ವಜರ ನಂಬಿಕೆಯಂತೆ ಮದುವೆ ಕಾರ್ಯ ಮಾಡಲಾಗುತ್ತಿದೆ. ಪ್ರಸಕ್ತ ವರ್ಷ ಬರಗಾಲದ ಛಾಯೆ ಅವರಿಸಿದ್ದು, ರೈತರನ್ನು ಚಿಂತೆಗೀಡು ಮಾಡಿದೆ. ಕಳೆದ ತಿಂಗಳು ಸುರಿದ ಅಷ್ಟಿಷ್ಟು ಮಳೆಯನ್ನು ನಂಬಿ ಕೆಲ ರೈತರು ಬಿತ್ತನೆ ಕಾರ್ಯ ಮುಗಿಸಿದ್ದಾರೆ. ಮಳೆ ಕೈಕೊಟ್ಟಿದ್ದರಿಂದ ರೈತ ಸಮೂಹಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದರು.

Advertisement

ಈ ಸಂದರ್ಭದಲ್ಲಿ ರೈತ ಮುಖಂಡರಾದ ಅಶೋಕ ಮೂಲಿಮನಿ, ಪುಟ್ಟಪ್ಪ ಛತ್ರದ, ಎಂ.ಆರ್‌.ಭದ್ರಗೌಡ್ರ, ಅಶೋಕ ಮಾಳೇನಹಳ್ಳಿ, ಈಶ್ವರ ಮಠದ, ಪ್ರಶಾಂತ ಹಾಲನಗೌಡ್ರ, ಬಸವರಾಜ ಸಂಕಣ್ಣನವರ, ಸಿದ್ಧಣ್ಣ ಮಾಳೇನಹಳ್ಳಿ, ಶಂಕರ ಬಿದರಿ, ರಾಜು ಚನ್ನಗೌಡ್ರ, ಶಿವಕುಮಾರ ಕಲ್ಲಾಪೂರ, ಶಕುಂತಲ ಮಠದ, ವಿಕಾಸ ಕಾಟೇನಹಳ್ಳಿ, ಜ್ಯೋತಿ ಡಂಬಳ, ಸುಶೀಲಮ್ಮ ಯಲಿ, ತಿಮ್ಮಣ್ಣನವರ, ಕರಬಸಪ್ಪ ಹರಿಯಾಳದ, ಸುನಂದಾ ಮಾಳೇನಹಳ್ಳಿ, ಲಕ್ಷಣಪ್ಪ ಸೊಟ್ಟೇರ, ಕನ್ನಪ್ಪ ಕೊಪ್ಪದ, ವೀರಬಸವ್ವ ಮೂಲಿಮನಿ, ಸುಮ ಸಂಕಣ್ಣನವರ, ನಿರ್ಮಲ ಛತ್ರದ, ಶೈಲ ಆಟದವರ, ಮಹದೇವಕ್ಕ ಮಾಳೇನಹಳ್ಳಿ, ಚಂದ್ರಣ್ಣ ಶೆಟ್ಟರ, ಮಹದೇವಪ್ಪ ಎಲಿ, ಗಣೇಶ ಬೆನಕನಕೊಂಡ, ಉಮೇಶ ಕಬ್ಬೂರ, ಮಹದೇವಪ್ಪ ಕೊಪ್ಪದ, ಮುತ್ತು ಸಂಕಣ್ಣನವರ,
ರಾಜು ಹೂಲಿಹಳ್ಳಿ, ಮಂಜು ಕೊಪ್ಪದ ಇನ್ನಿತರರಿದ್ದರು.

ವೈಜ್ಞಾನಿಕವಾಗಿ ನಾವು ಎಷ್ಟೇ ಮುಂದುವರೆದಿದ್ದರೂ ಸಂಪ್ರದಾಯವಾದಿ ರಾಷ್ಟ್ರ ಭಾರತದಲ್ಲಿ ನಿಗದಿತ ಸಮಯಕ್ಕೆ ಮಳೆ ಬಾರದಿದ್ದಾಗ ಇಂತಹ ಪದ್ಧತಿ, ಆಚರಣೆಳನ್ನು ನೆರವೇರಿಸುತ್ತಾರೆ. ಮಳೆಯಾದರೆ ಎಲ್ಲರಿಗೂ ಒಳಿತು. ವರುಣ ದೇವ ರೈತರ ನಂಬಿಕೆ ಹುಸಿಗೊಳಿಸಿದಿರಲಿ.
ಸುರೇಶಗೌಡ ಪಾಟೀಲ,
ಮಾಜಿ ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next