Advertisement

“ಪ್ರವಾಸಿ ಮಿತ್ರರು’ಸಂಕಷ್ಟದಲ್ಲಿ: ವರ್ಷದಲ್ಲಿ 6 ತಿಂಗಳಷ್ಟೇ ಕೆಲಸ; ಭರವಸೆಗಳು ಯೋಜನೆಗೆ ಸೀಮಿತ

11:29 PM Jan 08, 2023 | Team Udayavani |

ಹುಬ್ಬಳ್ಳಿ: ರಾಜ್ಯ ಪ್ರವಾಸೋದ್ಯಮ ಪ್ರಗತಿಗೆ ರೂಪಿತಗೊಂಡಿದ್ದ “ಪ್ರವಾಸಿ ಮಿತ್ರ’ ಯೋಜನೆ ದಾರಿ ತಪ್ಪಿದ್ದು, ಪ್ರವಾಸಿಗರ ಸುರಕ್ಷೆ, ಪ್ರವಾಸಿ ತಾಣದ ಸಂರಕ್ಷಣೆಗೆ ಕಾರ್ಯ ನಿರ್ವಹಿಸುತ್ತಿದ್ದ ಪ್ರವಾಸಿ ಮಿತ್ರರು ಅಕ್ಷರಶಃ ಅತಂತ್ರರಾಗಿದ್ದಾರೆ. ಕಡಿಮೆ ಗೌರವಧನ ಒಂದೆಡೆಯಾದರೆ ಮೂರು ತಿಂಗಳು ಕೆಲಸ, ಮೂರು ತಿಂಗಳು ಕೂಲಿ ನಾಲಿ ಮಾಡುವಂತಾಗಿದ್ದು, ಯೋಜನೆ ಮೂಲ ಉದ್ದೇಶಕ್ಕೆ ಧಕ್ಕೆ ತರುವ ಕೆಲಸ ನಡೆಯುತ್ತಿದೆ.

Advertisement

2015ರಲ್ಲಿ ದೇಶದಲ್ಲೇ ಮೊದಲ ಬಾರಿಗೆ “ಪ್ರವಾಸಿ ಮಿತ್ರ’ ಯೋಜನೆ ಯಡಿ ಗೃಹ ರಕ್ಷಕದಳ ಸಿಬಂದಿಯನ್ನು ನಿಯೋಜಿಸಲಾಗಿತ್ತು. ಅರ್ಹರಿಗೆ ಒಂದು ತಿಂಗಳ ವಿಶೇಷ ತರಬೇತಿಯಲ್ಲಿ ಪ್ರವಾಸಿ ತಾಣ, ಕೆಲ ಪೊಲೀಸ್‌ ನಿಯ ಮಗಳು, ಕರ್ತವ್ಯ-ಹೊಣೆಗಾರಿಕೆ ವಿಷಯಗಳಲ್ಲಿ ಸಜ್ಜುಗೊಳಿಸಿ ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಿಗೆ ಹಂಚಿಕೆ ಮಾಡಲಾಗಿತ್ತು. ಈಗ 930 ಪ್ರವಾಸಿ ಮಿತ್ರರು ತರಬೇತಿ ಪಡೆದಿದ್ದು, ತರಬೇತಿಗಾಗಿ ಒಬ್ಬರಿಗೆ ಸುಮಾರು 85-90 ಸಾವಿರ ರೂ. ಖರ್ಚು ಮಾಡಲಾಗಿದೆ. ಎರಡನೇ ಹಂತದಲ್ಲಿ ತರಬೇತಿ ಪಡೆದವರಿಗೆ ಪ್ರಮಾಣ ಪತ್ರವನ್ನೂ ನೀಡಿಲ್ಲ.

ವರ್ಷ ಪೂರ್ತಿ ಕೆಲಸ ಕೊಡಿ
ಪ್ರವಾಸಿಮಿತ್ರರು ವರ್ಷದಲ್ಲಿ ಆರು ತಿಂಗಳು ನಿರುದ್ಯೋಗಿಗಳಾಗಿರುತ್ತಾರೆ. ಗೃಹ ರಕ್ಷಕ ದಳದ ಸಿಬಂದಿಗೆ ಪೊಲೀಸ್‌ ಠಾಣೆ, ಅಗ್ನಿಶಾಮಕ ಠಾಣೆ, ಆರ್‌ಟಿಒ, ಅಬಕಾರಿ, ಧಾರ್ಮಿಕ ದತ್ತಿ ಇಲಾಖೆ ಮುಂತಾದ ಕಚೇರಿಗಳಲ್ಲಿ ನಿರಂ ತರವಾಗಿ ಕೆಲಸ ದೊರೆಯುತ್ತಿದೆ. ಆದರೆ ಪ್ರವಾಸಿ ಮಿತ್ರ ತರಬೇತಿ ಪಡೆದಿ ರುವವರನ್ನು ಪ್ರವಾಸಿ ತಾಣ ಹೊರತು ಪಡಿಸಿ ಇತರ ಕಾರ್ಯಕ್ಕೆ ಕಳುಹಿಸುತ್ತಿಲ್ಲ. ಹೀಗಾಗಿ ವರ್ಷಪೂರ್ತಿ ಕೆಲಸ ಸಿಗು ತ್ತಿಲ್ಲ. ನಮಗೆ ನಿರಂತರ ಕೆಲಸ ಕೊಡಿ ಎನ್ನುವುದು ಪ್ರವಾಸಿಮಿತ್ರರ ಅಗ್ರಹ.

ಲಿಖಿತ ಆಕ್ಷೇಪಕ್ಕೂ ಬೆಲೆಯಿಲ್ಲ
ಪ್ರವಾಸೋದ್ಯಮ ಇಲಾಖೆಯಿಂದ ಕೋಟ್ಯಂತರ ರೂ. ಖರ್ಚು ಮಾಡಿ ತರಬೇತಿ ನೀಡಲಾಗಿದೆ. ಹೀಗಾಗಿ ಈ ಸಿಬಂದಿ ಸೇವೆಯನ್ನು ಆಯಾ ತಾಣಗಳಲ್ಲೇ ಮುಂದುವರಿಸಬೇಕು ಹಾಗೂ ಇತರ ಕರ್ತವ್ಯಗಳಿಗೆ ನಿಯೋ ಜಿಸಬಾರದೆಂದು ಗೃಹರಕ್ಷಕ ಮತ್ತು ಪೌರರಕ್ಷಣ ಇಲಾಖೆಯ ಆರಕ್ಷಕ ಮಹಾ ನಿರ್ದೇಶಕರಿಗೆ ಪ್ರವಾಸೋ ದ್ಯಮ ಇಲಾಖೆ ನಿರ್ದೇಶಕರು ಲಿಖಿತವಾಗಿ ತಿಳಿಸಿದ್ದರೂ ಪ್ರಯೋಜನವಾಗಿಲ್ಲ.

ಸೌಲಭ್ಯಗಳು ಗೌಣ
ಪ್ರವಾಸಿ ಮಿತ್ರರು ನಿತ್ಯ 384 ರೂ. ಭತ್ತೆ ಪಡೆಯುತ್ತಿದ್ದು, ತಿಂಗಳಿಗೆ 11,400 ರೂ.ಆಗುತ್ತಿದೆ. ಇದು ಕನಿಷ್ಠ ವೇತನವನ್ನೂ ಮುಟ್ಟಿಲ್ಲ. ಇತರ ಗೃಹ ರಕ್ಷಕ ಸಿಬಂದಿ ಪೊಲೀಸ್‌ ಠಾಣೆ ಕರ್ತವ್ಯಕ್ಕೆ 750 ರೂ. ಇತರ ಇಲಾಖೆ ಯಲ್ಲಿ 600 ರೂ. ಭತ್ತೆ ಪಡೆಯುತ್ತಿದ್ದಾರೆ. ಆರಂಭದಲ್ಲಿ ಸಮವಸ್ತ್ರ ನೀಡಿದ್ದು ಬಿಟ್ಟರೆ ಮತ್ತೆ ವಿತರಿಸಿಲ್ಲ. ಸಂಚಾರಿ ಭತ್ತೆ ಅಥವಾ ಬಸ್‌ ಪಾಸ್‌ ನೀಡುವುದು ಸಹಿತ ಹಲವು ಭರವಸೆಗಳು ಈಡೇರಿಲ್ಲ. ರಾಜ್ಯದಲ್ಲಿ 1000 ಸಾವಿರಕ್ಕೂ ಪ್ರವಾಸಿ ತಾಣಗಳಿದ್ದು, ಒಂದಕ್ಕೆ ಇಬ್ಬರಂತೆ ನಿಯೋಜಿಸಿದರೆ 2000 ಸಿಬಂದಿ ಬೇಕು. ಆದರೆ ತರಬೇತಿ ಪಡೆದ 930ರಲ್ಲಿ ಸುಮಾರು 150ಕ್ಕೂ ಹೆಚ್ಚು ಮಂದಿ ಹೊರ ಹೋಗಿದ್ದಾರೆ ಎನ್ನುತ್ತಾರೆ ಪ್ರವಾಸಿ ಮಿತ್ರರು.

Advertisement

ಪ್ರವಾಸಿಮಿತ್ರರನ್ನು ಆರಂಭದಲ್ಲಿ ಖಾಯಂ ಮಾಡಿಕೊಳ್ಳುವುದು ಸಹಿತ ಹಲವು ಭರವಸೆಗಳನ್ನು ನೀಡಿದ್ದರು. ಆದರೆ ಈಗ ನಿರಂತರ ಸೇವೆಗೂ ಅವಕಾಶ ನೀಡುತ್ತಿಲ್ಲ. ಸಮಸ್ಯೆಗಳ ಪರಿಹಾರಕ್ಕಾಗಿ ಪ್ರವಾಸಿ ಮಿತ್ರರು ಸ್ಥಳೀಯ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸುವ ಅಭಿಯಾನ
ಆರಂಭಿಸಿದ್ದೇವೆ.
– ಹನುಮಂತರೆಡ್ಡಿ,
ಅಧ್ಯಕ್ಷ, ಕರ್ನಾಟಕ ಪ್ರವಾಸಿ ಮಿತ್ರರ ಕ್ಷೇಮಾಭಿವೃದ್ಧಿ ಅಸೋಸಿಯೇಶನ್‌

– ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next