Advertisement

ಪ್ರತಿಭಾ ಪುರಸ್ಕಾರ ವೇದಿಕೆಯಿಂದ ಸನ್ಮಾನ

01:26 PM Aug 04, 2017 | Sharanya Alva |

ಬೆಂಗಳೂರು: ಪ್ರತಿಭಾ ಪುರಸ್ಕಾರ ವೇದಿಕೆಯು ಈ ಬಾರಿ ನರರೋಗ ತಜ್ಞ ಹಾಗೂ ಬ್ರೈನ್ಸ್‌ (ಬಿಆರ್‌ಎಐಎನ್‌ಎಸ್‌) ಸಂಸ್ಥಾಪಕ ಡಾ.ಎನ್‌.ಕೆ. ವೆಂಕಟರಮಣ ಅವರನ್ನು ಪುರಸ್ಕರಿಸಲು ನಿರ್ಧರಿಸಿದೆ.

Advertisement

ಆಗಸ್ಟ್‌ 5ರಂದು ಸಂಜೆ 5ಕ್ಕೆ ನಗರದ ಚೌಡಯ್ಯ ಸ್ಮಾರಕ ಭವನದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಡಾ.ವೆಂಕಟರಮಣ ಅವರನ್ನು ಪುರಸ್ಕರಿಸಲಾಗುವುದು. ಮಾಜಿ ಕೇಂದ್ರ ಸಚಿವೆ ಡಿ. ಪುರಂದೇಶ್ವರಿ ಕಾರ್ಯಕ್ರಮ ಉದ್ಘಾಟಿಸವರು. ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಂ.ಎನ್‌. ವೆಂಕಟಾಚಲಯ್ಯ, ಇಸ್ರೋ ಅಧ್ಯಕ್ಷ ಎ.ಎಸ್‌. ಕಿರಣ ಕುಮಾರ್‌ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ವೇದಿಕೆಯ ಸದಸ್ಯ ಗಂಗರಾಜು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ದೇಶದಲ್ಲಿಯೇ ಮೊಟ್ಟಮೊದಲ ಬಾರಿಗೆ ಅಪಘಾತದ ಸಂದರ್ಭದಲ್ಲಿ ತುರ್ತು ಸ್ಪಂದನೆಗಾಗಿ 1062 ಜಿಪಿಎಸ್‌ ಆಧಾರಿತ ಮೊಬೈಲ್‌ ತುರ್ತು ಸ್ಪಂದನೆಯ ವ್ಯವಸ್ಥೆ ಜಾರಿಗೊಳಿಸಿದ ಅಗ್ಗಳಿಕೆ ಡಾ.ವೆಂಕಟರಮಣ ಅವರಿಗೆ ಸಲ್ಲುತ್ತದೆ. ಈ ಹೊಸ ಪ್ರಯೋಗದಿಂದ ಬೆಂಗಳೂರಿನಲ್ಲಿ
ಅಪಘಾತದಿಂದ ಸಾವನ್ನಪ್ಪುವವರ ಸಂಖ್ಯೆ ಶೇ. 22ರಿಂದ ಶೇ. 5ಕ್ಕೆ ಇಳಿಯಿತು. ಮುಂದೆ ಈ ವ್ಯವಸ್ಥೆಯನ್ನು ರಾಜ್ಯ ಸರ್ಕಾರ “108 ತುರ್ತು ಸೇವೆ’ ಅಡಿ ಜಾರಿಗೊಳಿಸಲಾಯಿತು.

ಇದರ ಮುಂದುವರಿದ ಭಾಗವಾಗಿ ಈಗ “ಗೋಲ್ಡನ್‌ ಅವರ್‌’ ಎಂಬ ಹೊಸ ಯೋಜನೆ ಅನುಷ್ಠಾನಕ್ಕೆ ಡಾ.ವೆಂಕಟರಮಣ ನಿರ್ಧರಿಸಿದ್ದಾರೆ. ಅಂದರೆ ಅಪಘಾತ ನಡೆದ ತಕ್ಷಣದಲ್ಲೇ ಅಪಘಾತಕ್ಕೀಡಾದವರಿಗೆ ಪ್ರಾಥಮಿಕ ಚಿಕಿತ್ಸೆ ದೊರೆತರೆ, ಜೀವ ಉಳಿಯುವ ಸಾಧ್ಯತೆಗಳು ಹೆಚ್ಚು. ಇದರಿಂದ ಸಾವಿನ ಪ್ರಮಾಣ ಮತ್ತಷ್ಟು ತಗ್ಗಿಸಬಹುದು. ಈ ಹಿನ್ನೆಲೆಯಲ್ಲಿ ನಗರದಲ್ಲಿ ವಾರ್ಡ್‌ಗೊಂದು “ಗೋಲ್ಡನ್‌ ಅವರ್‌’ ಕೇಂದ್ರ ತೆರೆಯಲು ಉದ್ದೇಶಿಸಲಾಗಿದೆ.

ಮೊದಲ ಹಂತದಲ್ಲಿ ನೂರು ಕೇಂದ್ರಗಳನ್ನು ಆರಂಭಿಸಲು ನರರೋಗ ತಜ್ಞ ನಿರ್ಧರಿಸಿದ್ದಾರೆ. ಈ ಸೇವೆಯನ್ನು ಪರಿಗಣಿಸಿ ಪುರಸ್ಕರಿಸಲಾಗುತ್ತಿದೆ. ಈ ಸೇವೆಗೆ ಆಗಸ್ಟ್‌ 5ರಂದು ನಡೆಯುವ ಕಾರ್ಯಕ್ರಮದಲ್ಲಿ ಚಾಲನೆ ನೀಡಲಾಗುವುದು ಎಂದೂ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸದಸ್ಯ ಮೋಹನರಾಜು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next