ಬೆಂಗಳೂರು: ಪ್ರವಾದಿ ಮೊಹಮ್ಮದ್ ಪೈಗಂಬರ್ ವಿರುದ್ಧದ ಹೇಳಿಕೆ ಖಂಡಿಸಿ ಆಕ್ರೋಶ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಶನಿವಾರ ಮುಸ್ಲಿಂ ಧರ್ಮಗುರುಗಳ ಜತೆ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಸಭೆ ನಡೆಸಿದ್ದಾರೆ.
ಸುಮಾರು ಎರಡೂವರೆ ಗಂಟೆಗಳ ಕಾಲ ನಡೆದ ಸಭೆಯಲ್ಲಿ ಪೊಲೀಸ್ ಆಯುಕ್ತರು, ಮುಸ್ಲಿಂ ಮುಖಂಡರಿಗೆ ಬೆಂಗಳೂರು ಸಹಿತ ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪರಿಸ್ಥಿತಿ ನಿಯಂತ್ರಿಸಲು ಸಹಾಯ ಮಾಡುವಂತೆ ಕೋರಿದ್ದರು.
ಅದಕ್ಕೆ ಪ್ರತಿಕ್ರಿಯಿಸಿರುವ ಮುಖಂಡರು, ಬೆಂಗಳೂರು ಸೇರಿ ರಾಜ್ಯದಲ್ಲಿ ಯಾವುದೇ ಪ್ರತಿಭಟನೆ ಅಥವಾ ರ್ಯಾಲಿ ಮಾಡುವುದಿಲ್ಲ. ಆದರೆ ನಮ್ಮ ಸಮುದಾಯದ ಮುಖ್ಯಸ್ಥರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ಕೊಡುವವರ ವಿರುದ್ಧ ಪೊಲೀಸರು ಕಠಿನ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಇದೇ ವೇಳೆ ಮುಖ್ಯಮಂತ್ರಿಗಳು, ಪ್ರಧಾನಮಂತ್ರಿಗಳಿಗೆ ಇಂತಹ ಹೇಳಿಕೆ ನೀಡುವವರ ವಿರುದ್ಧ ಕಾನೂನು ಕ್ರಮಕ್ಕೆ ಪ್ರತ್ಯೇಕ ಕಾಯ್ದೆ ತರುವಂತೆ ಪತ್ರ ನೀಡುವುದಾಗಿ ಸಭೆಯಲ್ಲಿ ಪ್ರಸ್ತಾವವಾಗಿದೆ. ಈ ಪತ್ರವನ್ನು ಆಯುಕ್ತರ ಮೂಲಕ ಸರಕಾರಕ್ಕೆ ಕಳುಹಿಸಲಾಗುತ್ತದೆ ಎಂದು ಆಯುಕ್ತರು ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಸ್ಲಿಂ ಧಾರ್ಮಿಕ ಮುಖಂಡ ಮಕ್ಸೂದ್ ಇಮ್ರಾನ್ ರಷಾದಿ, ಮುಸ್ಲಿಂ ನಾಯಕರು ಒಗ್ಗಟ್ಟಿನಿಂದ ತೀರ್ಮಾನ ಕೈಗೊಂಡು ಆಯುಕ್ತರ ಜತೆ ಸಭೆ ನಡೆಸಲಾಗಿದೆ. ಯಾವುದೇ ಧರ್ಮದ ಗುರುಗಳು ಅಥವಾ ಮುಖ್ಯಸ್ಥರ ಬಗ್ಗೆ ಟೀಕೆ ಮಾಡುವುದರಿಂದ ಸಾಮರಸ್ಯ ಹಾಳಾಗುತ್ತದೆ. ಅದಕ್ಕೆ ಅವಕಾಶ ಕೊಡಬೇಡಿ. ಸಮುದಾಯದ ತೀರ್ಮಾನದಂತೆ ಬೆಂಗಳೂರು ಸೇರಿ ರಾಜ್ಯದಲ್ಲಿ ಯಾವುದೇ ಪ್ರತಿಭಟನೆ, ರ್ಯಾಲಿ ನಡೆಸುವುದಿಲ್ಲ. ಆದರೆ, ಹೇಳಿಕೆ ನೀಡಿದ ನೂಪೂರ್ ಶರ್ಮಾರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು. ಈ ಮಧ್ಯೆ ಕೆಲವರು ಪ್ರತಿಭಟನೆಗೆ ಅವಕಾಶ ನೀಡುವಂತೆ ಪೊಲೀಸರಿಗೆ ಕೋರುತ್ತಿದ್ದಾರೆ. ಅದಕ್ಕೂ ನಮಗೂ ಸಂಬಂಧವಿಲ್ಲ. ಸಮುದಾಯದ ಎಲ್ಲರಿಗೂ ಶಾಂತಿಯಿಂದ ವರ್ತಿಸುವಂತೆ ಕೋರುತ್ತೇನೆ ಎಂದರು.