Advertisement
ಶೇಷಾದ್ರಿಪುರ ಕ್ರೆಸೆಂಟ್ ರಸ್ತೆಯಲ್ಲಿರುವ ಪ್ರಶಾಂತ್ ಮಾಡಾಳು ಖಾಸಗಿ ಕಚೇರಿಯಲ್ಲಿ ಲಂಚದ ಹಣ 40 ಲಕ್ಷ ರೂ. ಅಲ್ಲದೇ ಹೆಚ್ಚುವರಿಯಾಗಿ ಪತ್ತೆಯಾಗಿದ್ದ 1.50 ಕೋಟಿ ರೂ. ದುಡ್ಡಿನ ಮೂಲ ಪತ್ತೆಯಾಗಿದೆ. ಇದು ಚಾಮರಾಜಪೇಟೆಯ ಅರೋಮಾಸ್ ಕಂಪೆನಿಯಿಂದ ಪಡೆದಿರುವ ಕಮಿಷನ್ ಹಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಭ್ರಷ್ಟಾಚಾರ ನಿಗ್ರಹ ತಡೆ ಕಾಯ್ದೆಯಡಿ ಪ್ರತ್ಯೇಕ ಎರಡು ಪ್ರಕರಣ ದಾಖಲಾಗಿದೆ. ಲೋಕಾಯುಕ್ತ ಇನ್‌ಸ್ಪೆಕ್ಟರ್ ಕುಮಾರಸ್ವಾಮಿ ನೀಡಿರುವ ಒಂದು ದೂರಿನಲ್ಲಿ ಪ್ರಶಾಂತ್ ಮಾಡಾಳು, ಇವರ ಕಚೇರಿ ಅಕೌಂಟೆಂಟ್ ಸುರೇಂದ್ರ, ಇವರ ಸಂಬಂಧಿ ಚಿತ್ರದುರ್ಗದ ನಿವಾಸಿ ಸಿದ್ದೇಶ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಮತ್ತೂಂದು ದೂರಿನಲ್ಲಿ ಪ್ರಶಾಂತ್ ಮಾಡಾಳು, ಕರ್ನಾಟಕ ಅರೋಮಾಸ್ ಕಂಪೆನಿ ನೌಕರರಾದ ಅಲ್ಬರ್ಟ್ ನಿಕೋಲಸ್, ಗಂಗಾಧರ್, ಮ್ಯಾನೇಜರ್ ದೀಪಕ್ ಜಾಧವ್, ಕಂಪೆನಿ ಮಾಲಕರು ಹಾಗೂ ಕೆಎಸ್‌ಡಿಎಲ್ ಅಧಿಕಾರಿ/ಸಿಬಂದಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಗುರುವಾರ 4 ಗಂಟೆ ಲೋಕಾ ಪೊಲೀಸರ ವಿಚಾರಣೆ ಎದುರಿಸಿದ್ದ ಶಾಸಕ ಮಾಡಾಳು ವಿರುಪಾಕ್ಷಪ್ಪ ಶುಕ್ರವಾರ ಮತ್ತೆ ವಿಚಾರಣೆಗೆ ಹಾಜರಾದರು. ಆದರೆ ಅವರು ತನಿಖೆಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿಲ್ಲ ಎಂದು ತಿಳಿದುಬಂದಿದೆ. ಈ ನಡುವೆ ನಿರೀಕ್ಷಣ ಜಾಮೀನು ರದ್ದುಗೊಳಿಸುವಂತೆ ಸುಪ್ರಿಂ ಕೋರ್ಟ್‌ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಲು ಲೋಕಾ ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ.