Advertisement

ಪ್ರಶಾಂತ್‌ ಚೋಪ್ರಾ: ಹುಟ್ಟುಹಬ್ಬದಂದೇ ತ್ರಿಶತಕ!

07:00 AM Oct 08, 2017 | Team Udayavani |

ಧರ್ಮಶಾಲಾ: ಕ್ರಿಕೆಟಿಗನೊಬ್ಬನ ಹುಟ್ಟುಹಬ್ಬಕ್ಕೆ ತ್ರಿಶತಕಕ್ಕಿಂತ ಮಿಗಿಲಾದ ಉಡುಗೊರೆ ಖಂಡಿತ ಇರಲಿಕ್ಕಿಲ್ಲ. ಈ ಭರ್ಜರಿ ಉಡುಗೊರೆಯೊಂದು ಹಿಮಾಚಲ ಪ್ರದೇಶದ ಆರಂಭಕಾರ ಪ್ರಶಾಂತ್‌ ಚೋಪ್ರಾ ಪಾಲಾಗಿದೆ. ಶನಿವಾರ “25ನೇ ಬರ್ತ್‌ಡೇ’ಯಂದೇ ಅವರು ಪಂಜಾಬ್‌ ವಿರುದ್ಧದ ರಣಜಿ ಪಂದ್ಯದಲ್ಲಿ 338 ರನ್‌ ಬಾರಿಸಿ ಮಿಂಚಿದರು.

Advertisement

ಚೋಪ್ರಾ ಸಾಹಸದಿಂದ ಹಿಮಾಚಲ 8ಕ್ಕೆ 729 ರನ್‌ ಬಾರಿಸಿ ಮೊದಲ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿತು. ಜವಾಬಿತ್ತ ಪಂಜಾಬ್‌ 2ನೇ ದಿನದಾಟದ ಮುಕ್ತಾಯಕ್ಕೆ ಒಂದು ವಿಕೆಟ್‌ ಕಳೆದುಕೊಂಡು 110 ರನ್‌ ಮಾಡಿದೆ.

ಧರ್ಮಶಾಲಾದಲ್ಲಿ ನಡೆಯುತ್ತಿರುವ ಈ ರಣಜಿ ಪಂದ್ಯದ ಮೊದಲ ದಿನ ಪ್ರಶಾಂತ್‌ ಚೋಪ್ರಾ 271 ರನ್‌ ಬಾರಿಸಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದರು. ದ್ವಿತೀಯ ದಿನ ತ್ರಿಶತಕದ ಅಭಿಯಾನವನ್ನು ಪೂರ್ತಿಗೊಳಿಸಿದರು. ಆದರೆ ಭಾರತ “ಎ’ ತಂಡಕ್ಕೆ ಆಯ್ಕೆಯಾಗಿರುವ ಚೋಪ್ರಾ ಮುಂದಿನ ರಣಜಿ ಪಂದ್ಯದಿಂದ ಹೊರಗುಳಿಯಲಿದ್ದಾರೆ.

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಜನ್ಮದಿನದಂದೇ ತ್ರಿಶತಕ ಹೊಡೆದ ಕೇವಲ 3ನೇ ಅದೃಷ್ಟಶಾಲಿ ಪ್ರಶಾಂತ್‌ ಚೋಪ್ರಾ. 2ನೇ ಭಾರತೀಯನೂ ಹೌದು. 1932ರ ಡಿ. 24ರಂದು ಎಂಸಿಸಿ ಪರ ಆಡುತ್ತಿದ್ದ ಕಾಲಿನ್‌ ಕೌಡ್ರಿ ಸೌತ್‌ ಆಸ್ಟ್ರೇಲಿಯ ವಿರುದ್ಧ 307 ರನ್‌ ಹೊಡೆದಿದ್ದರು. ಬಳಿಕ ಈ ಸಾಲಿಗೆ ಸೇರ್ಪಡೆಗೊಂಡವರು ಭಾರತದ ರಮಣ್‌ ಲಾಂಬಾ. ದಿಲ್ಲಿ ಪರ ರಣಜಿ ಪಂದ್ಯ ಆಡುತ್ತಿದ್ದ ಲಾಂಬಾ 1995ರ ಜ. 2ರಂದು ಹಿಮಾಚಲ ಪ್ರದೇಶ ವಿರುದ್ಧ 312 ರನ್‌ ಬಾರಿಸಿದ್ದರು. 
ಈ ಇನ್ನಿಂಗ್ಸ್‌ ವೇಳೆ ಪ್ರಶಾಂತ್‌ ಚೋಪ್ರಾ ನಿರ್ಮಿಸಿದ ಕೆಲವು ದಾಖಲೆಗಳನ್ನು ಇಲ್ಲಿ ಉಲ್ಲೇಖೀಸಲಾಗಿದೆ.

ಚೋಪ್ರಾ ಶುಕ್ರವಾರ 271 ರನ್‌ ಮಾಡಿ ಅಜೇಯರಾಗಿ ಉಳಿದಿದ್ದರು. ಇದು ಭಾರತದ ಪ್ರಥಮ ದರ್ಜೆ ಕ್ರಿಕೆಟ್‌ ಪಂದ್ಯದ ಮೊದಲ ದಿನದಾಟದಲ್ಲಿ ದಾಖಲಾದ ಸರ್ವಾಧಿಕ ವೈಯಕ್ತಿಕ ಗಳಿಕೆಯಾಗಿದೆ. 1935ರಲ್ಲಿ ಇಂಡಿಯನ್‌ ಯುನಿವರ್ಸಿಟಿ ಒಕೇಶನಲ್ಸ್‌ ಪರ ಆಡುತ್ತಿದ್ದ ವಜೀರ್‌ ಅಲಿ “ವಿಕೆರಾಯ್ಸ ಇಲೆವೆನ್‌’ ವಿರುದ್ಧ ಅಜೇಯ 268 ರನ್‌ ಬಾರಿಸಿದ ದಾಖಲೆ ಪತನಗೊಂಡಿತು.

Advertisement

ಇದು ಭಾರತದ ಪ್ರಥಮ ದರ್ಜೆ ಕ್ರಿಕೆಟ್‌ ಪಂದ್ಯದ ದಿನದಾಟವೊಂದರಲ್ಲಿ ದಾಖಲಾದ 2ನೇ ಸರ್ವಾಧಿಕ ವೈಯಕ್ತಿಕ ಗಳಿಕೆ. 1948-49ರ ರಣಜಿ ಪಂದ್ಯದ 2ನೇ ದಿನದಾಟದಲ್ಲಿ ಬಿ.ಬಿ. ನಿಂಬಾಳ್ಕರ್‌ 277 ರನ್‌ ಬಾರಿಸಿದ್ದು ದಾಖಲೆ.

ಚೋಪ್ರಾ ಅವರ 338 ರನ್‌ 363 ಎಸೆತಗಳಲ್ಲಿ ಬಂತು. ಇದರಲ್ಲಿ 44 ಬೌಂಡರಿ ಹಾಗೂ 2 ಸಿಕ್ಸರ್‌ ಒಳಗೊಂಡಿತ್ತು. ಚೋಪ್ರಾ ಭಾರತದ ಪ್ರಥಮ ದರ್ಜೆ ಇನ್ನಿಂಗ್ಸ್‌ ಒಂದರಲ್ಲಿ ಸರ್ವಾಧಿಕ ಬೌಂಡರಿ ಹೊಡೆದ 4ನೇ ಬ್ಯಾಟ್ಸ್‌ಮನ್‌. ಉಳಿದ ಮೂವರೆಂದರೆ ಕೇದಾರ್‌ ಜಾಧವ್‌ (54), ಲಕ್ಷ್ಮಣ್‌ (52) ಮತ್ತು ಸಂಜಯ್‌ ಮಾಂಜ್ರೆàಕರ್‌ (50 ಬೌಂಡರಿ).

ಚೋಪ್ರಾ ಹಿಮಾಚಲ ಪ್ರದೇಶ ಪರ ತ್ರಿಶತಕ ಬಾರಿಸಿದ ಮೊದಲ ಕ್ರಿಕೆಟಿಗನೆಂಬ ಹೆಗ್ಗಳಿಕೆಗೆ ಪಾತ್ರರಾದರು. 1999-2000ದ ಋತುವಿನಲ್ಲಿ ಜಮ್ಮು-ಕಾಶ್ಮೀರ ವಿರುದ್ಧ ರಾಜೀವ್‌ ನಯ್ಯರ್‌ 271 ರನ್‌ ಬಾರಿಸಿದ ದಾಖಲೆ ಮುರಿಯಲ್ಪಟ್ಟಿತು.

ಇದು ರಣಜಿ ಇತಿಹಾಸದ 41ನೇ ತ್ರಿಶತಕ ಪ್ಲಸ್‌ ಸಾಧನೆ, 10ನೇ ಅತೀ ಹೆಚ್ಚಿನ ವೈಯಕ್ತಿಕ ಗಳಿಕೆ. ಚೋಪ್ರಾ 36ನೇ ತ್ರಿಶತಕವೀರ. ಮಹಾರಾಷ್ಟ್ರದ ಬಿ.ಬಿ. ನಿಂಬಾಳ್ಕರ್‌ ಖತಿಯವಾರ್‌ ತಂಡದ ವಿರುದ್ಧ ಅಜೇಯ 443 ರನ್‌ ಬಾರಿಸಿದ್ದು ದಾಖಲೆ. 

ಚೋಪ್ರಾ ಪಂಜಾಬ್‌ ವಿರುದ್ಧ ಅತ್ಯಧಿಕ ರನ್‌ ಬಾರಿಸಿದ ಕ್ರಿಕೆಟಿಗನಾಗಿಯೂ ಮೂಡಿಬಂದರು. ಕಳೆದ ರಣಜಿ ಋತುವಿನಲ್ಲಿ ಗುಜರಾತ್‌ನ ಪ್ರಿಯಾಂಕ್‌ ಪಾಂಚಾಲ್‌ ಅಜೇಯ 314 ರನ್‌ ಹೊಡೆದ ದಾಖಲೆ ಪತನಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next