ಒಂದು ಸಿನಿಮಾದ ಹಲವು ವಿಭಾಗಗಳಲ್ಲಿ ತೊಡಗಿಸಿಕೊಂಡು ತಮ್ಮ ಪ್ರತಿಭಾ ಪ್ರದರ್ಶನ ಮಾಡುವ ಅನೇಕರು ಚಿತ್ರರಂಗದಲ್ಲಿ ಸಿಗುತ್ತಾರೆ. ಈ ಸಾಲಿಗೆ ಡಾ.ಎಸ್.ಮಹೇಶ್ ಬಾಬು ಕೂಡಾ ಸೇರುತ್ತಾರೆ. ಯಾರು ಈ ಮಹೇಶ್ ಬಾಬು ಎಂದರೆ “ಪ್ರಾಪ್ತಿ’ ಸಿನಿಮಾ ಬಗ್ಗೆ ಹೇಳಬೇಕು.
ಸದ್ಯ ಬಿಡುಗಡೆಗೆ ಸಿದ್ಧವಾಗಿರುವ “ಪ್ರಾಪ್ತಿ’ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ಸಂಗೀತ, ಸಂಕಲನ, ನಿರ್ದೇಶನ ಜತೆಗೆ ಸಿಸಿ ಕ್ರಿಯೇಶನ್ಸ್ ಅಡಿಯಲ್ಲಿ ನಿರ್ಮಾಣ ಕೂಡಾ ಮಾಡಿದ್ದಾರೆ. ಚಿತ್ರಕ್ಕೆ ವಿಧಿ ನಿಗದಿಯಾಗಿದೆ ಎಂಬ ಟ್ಯಾಗ್‌ಲೈನ್ ಕೂಡಾ ಇದೆ. ಈಗಾಗಲೇ ಚಿತ್ರ ಸೆನ್ಸಾರ್ ಮುಗಿಸಿದ್ದು, “ಯು/ಎ’ ಪ್ರಮಾಣ ಪತ್ರ ದೊರಕಿದೆ.
ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಹಾಗೂ ಮೂರು ಹಾಡುಗಳ ಬಿಡುಗಡೆ ಸಮಾರಂಭ ನಡೆಯಿತು. ಹಿರಿಯ ನಿರ್ದೇಶಕ ಸಾಯಿಪ್ರಕಾಶ್ ಚಿತ್ರತಂಡಕ್ಕೆ ಸಾಥ್ ನೀಡಿದರು.
ಈಗಿನ ಕಾಲಮಾನದಲ್ಲಿ ನಡೆಯುತ್ತಿರುವ ಮೂರು ಅಂಶಗಳನ್ನು ಬಳಸಿಕೊಂಡು, ಸಂದೇಶದ ಮೂಲಕ ತೋರಿಸುವ ಪ್ರಯತ್ನ ಈ ಚಿತ್ರದಲ್ಲಿ ಮಾಡಲಾಗಿದೆ. ಮೊದಲನೆಯದಾಗಿ ಮದುವೆ ಬಳಿಕದ ಅಕ್ರಮ ಸಂಬಂಧ, ಇದರಿಂದ ಪತಿ-ಪತ್ನಿ ನಡುವೆ ಬಿರುಕು ಬಂದು ವಿಚ್ಚೇದನಕ್ಕೆ ಅರ್ಜಿ ಹಾಕುತ್ತಿದ್ದಾರೆ. ಎರಡನೆಯದು ಆಕರ್ಷಣೆ. ಇದು ಹೆಚ್ಚಾಗಿ ಸಣ್ಣ ಹುಡುಗರು, ಹುಡುಗಿಯರಲ್ಲಿ ಕಂಡು ಬರುತ್ತದೆ. ಇದರಿಂದ ಮಾನಸಿಕವಾಗಿ ಕುಗ್ಗುತ್ತಾರೆ. ಕೊನೆಯದಾಗಿ ನಮ್ಮ ನಾಡಿನ ಸಂಸ್ಕೃತಿಯನ್ನು ಬಿಂಬಿಸುವುದು. ಅಂದರೆ ನೃತ್ಯ ಅದರಲ್ಲೂ ಭರತನಾಟ್ಯ ವಿಶ್ವದೆಲ್ಲೆಡೆ ಪ್ರಚಲಿತವಾಗಿದೆ. ಇವೆಲ್ಲವು ಸಸ್ಪೆನ್ಸ್-ಥ್ರಿಲ್ಲರ್‌ನೊಂದಿಗೆ ಹೇಳಿದ್ದಾರಂತೆ.
ಜಯಸೂರ್ಯ ಈ ಚಿತ್ರದ ನಾಯಕ. ಗಾಯಕಿ ಮಂಜುಳಾ ಗುರುರಾಜ್ ಸೊಸೆ ಗೌರಿಸಾಗರ್ ವೃತ್ತಿಯಲ್ಲಿ ಡ್ಯಾನ್ಸರ್. ಸಿನಿಮಾದಲ್ಲೂ ಅದೇ ಪಾತ್ರದಲ್ಲಿ ನಟನೆ ಮಾಡಿದ್ದಾರೆ. ಉಳಿದಂತೆ ನಿಖೀತಾರಾಂ, ಮೋನಿಷಾ ಥಾಮಸ್ ಅಭಿನಯಿಸಿದ್ದಾರೆ.