ಧಾರವಾಡ: ಆರೋಗ್ಯ ಶುದ್ಧಿಯಿಂದ ಆತ್ಮ ಶೋಧನೆಯೆಡೆಗೆ ನಡೆಯುವುದೇ ಪ್ರಾಣಾಯಾಮ, ಧ್ಯಾನ ಮತ್ತು ಯೋಗಗಳ ಗುರಿಯಾಗಿದೆ ಎಂದು ಭದ್ರಾವತಿ ತಾಲೂಕಿನ ಗೊಂದಿಯ ಪಾಂಡುರಂಗ ಸಾಧಕಾಶ್ರಮದ ಶ್ರೀ ನಾಮದೇವಾನಂದ ಭಾರತಿ ಸ್ವಾಮೀಜಿ ಹೇಳಿದರು.
ತಾಲೂಕಿನ ಶೇಡಬಾಳ ಮತ್ತು ಖಾನಾಪುರ ಗ್ರಾಮದಲ್ಲಿರುವ ಸದ್ಗುರು ಶ್ರೀಧರಾನಂದ ಸ್ವಾಮೀಜಿಗಳ ಆತ್ಮವಿದ್ಯಾ ಪರಿಶೀಲನಾ ಆಶ್ರಮದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಪ್ರಾಣಾಯಮ, ಧ್ಯಾನ, ಕಮ್ಮಟ ಮತ್ತು ಧ್ಯಾನ ಮಂದಿರದ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು.
ಭಾರತ ದೇಶದ ಋಷಿ ಪ್ರಣೀತವಾದ ಈ ವಿದ್ಯೆಯ ಮಹೋನ್ನತ ಉದ್ದೇಶ ಸ್ವರೂಪ ಸಾûಾತ್ಕಾರವಾಗಿದೆ. ಆದರೆ ದುದ್ವೆವದಿಂದ ವಿಶ್ವದಲ್ಲಿ ಯೋಗವಿಂದು ಮಾರಾಟದ ವಸ್ತುವಾಗಿದೆ ಎಂದರು. ಕಮ್ಮಟ ಉದ್ಘಾಟಿಸಿದ ಕವಿವಿ ಕುಲಸಚಿವ ಪ್ರೊ| ಎಂ.ಎನ್. ಜೋಶಿ ಮಾತನಾಡಿ, ಪ್ರಾಣಾಯಾಮ ಧ್ಯಾನ ಮತ್ತು ಯೋಗ ಆಧಾರಿತ ಆತ್ಮವಿದ್ಯೆ ವಿಶ್ವಕ್ಕೆ ಭಾರತ ನೀಡಿದ ಕೊಡುಗೆ.
ಅದರ ಮೂಲಸತ್ವ ಕಾಯ್ದುಕೊಳ್ಳುವದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ ಎಂದು ಹೇಳಿದರು. ಮನೋವಿಜ್ಞಾನಿ ಡಾ| ಬಿ.ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿ, 21ನೇ ಶತಮಾನದ ಕಾಲಘಟ್ಟದಲ್ಲಿ ಕೇವಲ ವೈಯಕ್ತಿಕ ಉದ್ಧಾರಕ್ಕಿಂತ ಇಡೀ ಸಮುದಾಯದ ಉದ್ಧಾರ ಯೋಗದ ಉದ್ದೇಶವಾಗಬೇಕಿದೆ ಎಂದರು.
ಪ್ರವಚನಕಾರ ಇಬ್ರಾಹಿಂ ಸುತಾರ ಮತ್ತು ಲೇಖಕ ರಂಜಾನ್ ದರ್ಗಾ ಮಾತನಾಡಿದರು. ಮನೋವಿಜ್ಞಾನಿ ಡಾ| ಅಶೋಕ ಪಾಲ್, ಆತ್ಮ ವಿದ್ಯಾ ಪರಿಶೀಲನಾ ಆಶ್ರಮದ ಕಾರ್ಯಾಧ್ಯಕ್ಷ ಮಹಾದೇವ ಹೊರಟ್ಟಿ, ಕುವೆಂಪು ವಿಶ್ವವಿದ್ಯಾಲಯದ ಡಾ| ಯಾಶ್ಮಿನ್ ನದಾಫ್ ಮಾತನಾಡಿದರು.
ಪ್ರೊ| ಬಿ.ಪಿ. ವಾಘಮೋರೆ, ಬಿ.ಎನ್. ಗುಹೇಶ್ವರ, ಮೈಸೂರಿನ ಪ್ರೊ| ಶಿವಕುಮಾರ, ಕರ್ನಾಟಕ ಕಾನೂನು ವಿವಿ ಸಿಂಡಿಕೇಟ್ ಸದಸ್ಯ ಪ್ರೊ| ಶಂಭು ಹೆಗಡಾಳ, ಉದ್ಯಮಿ ಸೀತಾರಾಮ ಶೆಟ್ಟಿ, ಎನ್. ಎಸ್. ಕೂಡಲ, ಮಹಾದೇವ ಬಾಗೇವಾಡಿ, ರಾಚಪ್ಪ ಹಡಪದ, ಸಂಭಾಜಿ ಶಿಂಧೆ, ಮಂಜುನಾಥ ಮೊಹರೆ, ಪತ್ರಕರ್ತ ಗಣೇಶ ಜೋಶಿ, ಮಾಜಿ ಕಾರ್ಪೊರೇಟರ್ ಸಿ.ಎಸ್. ಪಾಟೀಲ ಇದ್ದರು. ಚನ್ನಬಸಪ್ಪ ಕರಡೆಣ್ಣನವರ ಸ್ವಾಗತಿಸಿದರು. ಶಿಕ್ಷಕ ಸತೀಶ ಕಾರಿಮನಿ ನಿರೂಪಿಸಿದರು. ಎಚ್.ಕೆ. ಹೊಸಮನಿ ವಂದಿಸಿದರು.