ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರು
ಅಯೋಧ್ಯೆಯಲ್ಲಿ ಶ್ರೀರಾಮ ದೇವರ ಪ್ರಾಣ ಪ್ರತಿಷ್ಠೆಯು ಲೋಕ ಕಲ್ಯಾಣಕ್ಕೆ ಕಾರಣವಾಗಲಿದೆ. ಶ್ರೀ ರಾಮ ದೇವರು ಜಗತ್ತಿನ ಕಲ್ಯಾಣಕ್ಕಾಗಿ ಮಹಾವಿಷ್ಣು ಎತ್ತಿದ ವಿಶೇಷ ಅವತಾರಗಳಲ್ಲಿ ಒಂದಾಗಿದೆ. ಅಂತಹ ದೇವರ ಪ್ರಾಣಪ್ರತಿಷ್ಠೆ ಆಗುತ್ತಿರುವುದರಿಂದ ಇಡೀ ಜಗತ್ತಿಗೆ ಇದರಿಂದ ಸನ್ಮಂಗಲವಾಗಲಿದೆ. ಶ್ರೀ ರಾಮ ದೇವರು ಜಗತ್ತಿಗೆ ಅನುಗ್ರಹ ಮಾತ್ರ ಮಾಡಿದ್ದಲ್ಲ. ಬದಲಾಗಿ ಆದರ್ಶಗುಣಗಳನ್ನು ಜಗತ್ತಿಗೆ ತೋರಿಸಿಕೊಟ್ಟಿ ದ್ದಾರೆ. ಶ್ರೀ ದೇವರ ಬದುಕಿನ ಪ್ರತಿ ಹೆಜ್ಜೆಯು ಭಗವದ್ಭಕ್ತರಿಗೆ ಮಾರ್ಗದರ್ಶನವಾಗಿದೆ. ಮರ್ಯಾದಾ ಪುರುಷೋತ್ತಮನಾಗಿ ನೂರಾರು ವರ್ಷಗಳಿಂದ ಕೋಟ್ಯಂತರ ಜನಮಾನಸದಲ್ಲಿ ಆಶಯದ ವಿಚಾರವಾಗಿದ್ದ ಶ್ರೀ ರಾಮ ಮಂದಿರ ಈಗ ಸಾಕಾರವಾಗುತ್ತಿರುವುದು ಸಮಕಾಲೀನ ಭಕ್ತರ ಸುಯೋಗವಾಗಿದೆ. ರಾಮ ಮಂದಿರ ನಿರ್ಮಾಣ ಹಾಗೂ ರಾಮ ದೇವರ ಪ್ರಾಣಪ್ರತಿಷ್ಠೆಯು ರಾಮ ರಾಜ್ಯದ ಪ್ರಾಣಪ್ರತಿಷ್ಠೆ ಎಂಬುದಾಗಿಯೂ ತಿಳಿಯಬಹುದಾಗಿದೆ. ರಾಮ ರಾಜ್ಯದ ಪರಿಕಲ್ಪನೆಯು ಎಲ್ಲೆಡೆಯು ಅನುಷ್ಠಾನಕ್ಕೆ ಬರಬೇಕು.
ನಮ್ಮ ಚತುರ್ಥ ಪರ್ಯಾಯದ ಆರಂಭದಲ್ಲಿಯೇ ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣವಾಗುತ್ತಿರುವುದು ನಮ್ಮ ಸುಯೋಗ. ಅಯೋಧ್ಯೆಯಲ್ಲಿ ಶ್ರೀ ರಾಮ ದೇವರ ಪ್ರಾಣ ಪ್ರತಿಷ್ಠೆಯು ಪರ್ಯಾಯದ ಮೊದಲನೆಯ ವಿಶಿಷ್ಟ ಕಾರ್ಯಕ್ರಮವಾಗಿ ನಾವೆಲ್ಲರೂ ಸೇರಿ ಸಂಭ್ರಮದಿಂದ ಆಚರಿಸಲಿದ್ದೇವೆ. ಆ ದಿನ ಹಾಲುಪಾಯಸ ಹಂಚುವ ಸಂಕಲ್ಪವನ್ನು ಮಾಡಿದ್ದೇವೆ. ಯಾಕೆಂದರೆ ಶ್ರೀರಾಮನ ಅವತಾರವು ಪಾಯಸದಿಂದ ಆಯಿತು ಎಂದು ರಾಮಾಯಣದ ಮೂಲಕ ತಿಳಿದು ಕೊಂಡಿದ್ದೇವೆ. ನಮ್ಮ 2ನೇ ಪರ್ಯಾಯದ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣಕ್ಕೆ ಬೇಕಾದ ಎಲ್ಲ ಪ್ರಕ್ರಿಯೆ ನಡೆದು ಜಾಗ ಶುದ್ಧಗೊಳಿಸುವ ಕಾರ್ಯ ಆರಂಭ ವಾಗಿತ್ತು. ರಾಮ ಜನ್ಮ ಭೂಮಿಯ ಎಲ್ಲ ಆಂದೋಲನದಲ್ಲೂ ಸಕ್ರಿಯವಾಗಿ ಪಾಲ್ಗೊಂಡಿದ್ದೆವು. ರಾಮಲಲ್ಲಾನ ವಿಗ್ರಹ ವನ್ನು ಜೈಲಿನಿಂದ ಹೊರತಂದ ಭಾಗ್ಯವು ನಮ್ಮ ಬಾಳಿಗೆ ಸಿಕ್ಕಿದೆ. 1986ರಲ್ಲಿ ನ್ಯಾಯಾಲಯದ ತೀರ್ಪಿನಂತೆ ಜೈಲಿನಲ್ಲಿರುವ ಶ್ರೀ ರಾಮ ದೇವರ ಮೂರ್ತಿಯನ್ನು ಹೊರತರ ಲಾಗಿತ್ತು.
ಮೂರ್ತಿಯನ್ನು ಜೈಲಿನಲ್ಲಿಟ್ಟು ಬೀಗ ಹಾಕಿದ್ದು, ಬೀಗದ ಕೀಲಿಕೈ ಇಲ್ಲದೇ ಇದ್ದುದ್ದರಿಂದ ಪೇಜಾವರ ಮಠಾಧೀಶ ರಾದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹಾಗೂ ವಿಶ್ವಹಿಂದೂ ಪರಿಷತ್‌ನ ಮುಖ್ಯಸ್ಥರಾಗಿದ್ದ ಅಶೋಕ್ ಸಿಂಘಾಲ್ ಅವರು ಜೈಲಿನ ಬೀಗ ಒಡೆಯಲು ನಮಗೆ ತಿಳಿಸಿದ್ದರು. ಅದರಂತೆ ಜೈಲಿನ ಬೀಗ ಒಡೆದು ಕೋರ್ಟ್‌ನ ಆದೇಶದಂತೆ ಮೂರ್ತಿ ಯನ್ನು ಹೊರತರಲಾಯಿತು. ಜೈಲಿನ ಅಧಿಪತಿ ಶ್ರೀಕೃಷ್ಣ ದೇವರ ಅನುಗ್ರಹದಿಂದ ರಾಮ ದೇವರನ್ನು ಜೈಲಿನಿಂದ ಹೊರ ತರುವ ಭಾಗ್ಯ ನಮಗೆ ಬಂದಿತ್ತು. ಶ್ರೀ ಕೃಷ್ಣಮಠದಲ್ಲಿರುವ ಪ್ರಾಣ ದೇವರು ಅಯೋಧ್ಯೆ ಯಲ್ಲಿರುವ ಪ್ರಾಣ ದೇವರು. ಶ್ರೀ ವಾದಿರಾಜರು ಅಯೋಧ್ಯೆಯಿಂದ ಪ್ರಾಣ ದೇವರನ್ನು ಇಲ್ಲಿ ಪ್ರತಿಷ್ಠೆ ಮಾಡಿದರು ಎಂಬ ಪ್ರತೀತಿಯಿದೆ. ಆದ್ದರಿಂದಲೇ ರಾಮ ಮಂದಿರದ ಎಲ್ಲ ಪ್ರಕ್ರಿಯೆಗಳು ಉಡುಪಿಯಿಂದಲೇ ಆರಂಭವಾಗಿತ್ತು. ರಾಮ ಮಂದಿರ ನಿರ್ಮಾಣ ಆಗಬೇಕು ಎಂಬ ಘೋಷಣೆ ಸಹಿತ ಪ್ರಮುಖ ನಿರ್ಧಾರ ಇಲ್ಲಿಂದಲೇ ಆಗಿದೆ. ಕಾರಣ, ಅಯೋಧ್ಯೆಯ ಪ್ರಾಣ ದೇವರು ಉಡುಪಿಯಲ್ಲಿ ಕುಳಿತು ಮಂದಿರ ನಿರ್ಮಾಣಕ್ಕೆ ಬೇಕಾದ ಎಲ್ಲ ಪ್ರಕ್ರಿಯೆಗಳನ್ನು ಮಾಡಿಸುತ್ತಿದ್ದರು. ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಮಂದಿರ, ಶ್ರೀರಾಮ ದೇವರ ಪ್ರಾಣ ಪ್ರತಿಷ್ಠೆಯು ಜಗತ್ತಿಗೆ ಮರ್ಯಾದ ಪುರುಷೋತ್ತಮನ ಆದರ್ಶ ಗುಣಗಳನ್ನು ಸಾರುತ್ತಿವೆ. ಇದನ್ನು ಕಣ್ಮನ ತುಂಬಿಕೊಳ್ಳುವುದು ನಮ್ಮೆಲ್ಲರ ಸುಯೋಗ ಮತ್ತು ಶ್ರೀ ರಾಮ ದೇವರ ಆದರ್ಶಗುಣಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿ ಕೊಳ್ಳುವಂತೆ ಆಗಬೇಕು.