Advertisement

ರಾಷ್ಟ್ರಪತಿಯಾಗಿ ಮೊದಲ ಭಾಷಣದಲ್ಲೇ ಮೋಡಿ ಮಾಡಿದ್ದ ಪ್ರಣಬ್‌

06:27 PM Aug 31, 2020 | Karthik A |

ಮಣಿಪಾಲ: “ನೀವು ಕೊಟ್ಟಿರುವ ಈ ಶ್ರೇಷ್ಠ ಗೌರವಕ್ಕೆ ನಾನು ತಲೆ ಬಾಗಿದ್ದೇನೆ. ಈ ಗೌರವ ಈ ಹುದ್ದೆಯಲ್ಲಿರುವ ‌ವ್ಯಕ್ತಿಗೆ ವೈಯಕ್ತಿಕ ಮತ್ತು ವಿಭಜನಕಾರಿ ಆಸಕ್ತಿಗಳನ್ನು ಬದಿಗೊತ್ತಿ ದೇಶದ ಹಿತಕ್ಕಾಗಿ ಕೆಲಸ ಮಾಡಲು ಪ್ರೇರಣೆಯಾಗುತ್ತದೆ. ಸಾರ್ವಜನಿಕ ವ್ಯಕ್ತಿಯೊಬ್ಬನಿಗೆ ನಮ್ಮ ಗಣರಾಜ್ಯದ ಪ್ರಥಮ ಪ್ರಜೆಯಾಗಿ ಚುನಾಯಿತನಾಗುವುದಕ್ಕಿಂತ ಮಿಗಿಲಾದ ಗೌರವವಿಲ್ಲ’ ಇದು ಭಾರತದ 13ನೇ ರಾಷ್ಟ್ರಪತಿಯಾಗಿ ಚುನಾಯಿತರಾಗಿದ್ದ ಸಂದರ್ಭ ಪ್ರಣಬ್‌ ಮುಖರ್ಜಿ ಅವರು ಹೇಳಿದ ಮಾತು.

Advertisement

ರಾಷ್ಟ್ರಪತಿಯಾಗಿ ಮಾಡಿದ ಮೊದಲ ಭಾಷಣದಲ್ಲೇ ಮೋಡಿ ಮಾಡಿದ ಕೆಲವೇ ರಾಷ್ಟ್ರಪತಿಗಳ ಸಾಲಿಗೆ ಮುಖರ್ಜಿ ಅವರೂ ನಿಲ್ಲುತ್ತಾರೆ. ಪ್ರಜಾಪ್ರಭುತ್ವ, ಬಡತನ, ಅಭಿವೃದ್ಧಿ, ಭಯೋತ್ಪಾದನೆ, ಜಾತ್ಯತೀತತೆ, ಸಂವಿಧಾನ ರಕ್ಷಣೆ ಈ ಮುಂತಾದ ವಿಷಯಗಳ ಮೇಲೆ ಮುಖರ್ಜಿ ಅವರು ವಿಶಾಲವಾದ ವಿಚಾರ ಲಹರಿಯನ್ನು ಹೊಂದಿದ್ದರು.

ಆಧುನಿಕ ಭಾರತದ ಪದಕೋಶದಿಂದ ಹಸಿವು ಎಂಬ ಪದವನ್ನೇ ತೆಗೆದುಹಾಕಬೇಕು. ಹಸಿವು ಎಂಬುದು ಮಾನವ ಸಂಕುಲಕ್ಕೇ ಅವಮಾನ. ಸಾರ್ವಜನಿಕ ಸೇವಕನೊಬ್ಬನಿಗೆ ದೇಶದ ಮೊದಲ ಪ್ರಜೆಯಾಗುವುದಕ್ಕಿಂತ ಬೇರೊಂದು ಗೌರವ ಇಲ್ಲ ಎಂದು ರಾಷ್ಟ್ರಪತಿಯಾಗಿ ಚುನಾಯಿತರಾದ ಪ್ರಥಮ ಭಾಷಣದಲ್ಲಿ ಹೇಳಿದ್ದರು. ಇದು ದೇಶದೆಲ್ಲೆಡೆ ಅನುರಣಿಸಿತ್ತು. 2012ರ ಜುಲೈ 25ರಂದು ಭಾರತದ 13ನೇ ರಾಷ್ಟ್ರಪತಿಯಾಗಿ ಗೌರವ ಸ್ವೀಕರಿಸುವ ಮೊದಲು ತಿರುಪತಿ ತಿಮ್ಮಪ್ಪನ ಆಶೀರ್ವಾದ ಪಡೆದುಕೊಂಡಿದ್ದರು. ಅವರಿಗಾಗಿ ತಿರುಪತಿಯಿಂದ ಪ್ರಸಾದವನ್ನು ತರಲಾಗಿತ್ತು.

ತಮ್ಮ ಮೊದಲ ಭಾಷಣ: ಸಂವಿಧಾನದ ರಕ್ಷಣೆ
ಪ್ರಣಬ್‌ ಮುಖರ್ಜಿ ಅವರು ತಮ್ಮ ಮೊದಲ ಭಾಷಣದಲ್ಲಿ ಹಲವು ಮಹತ್ವದ ಸಂಗತಿಗಳನ್ನು ಪ್ರಸ್ತಾವಿಸಿದ್ದರು. ಸಂವಿಧಾನವನ್ನು ಕೇವಲ ಮಾತಿನಿಂದ ಮಾತ್ರವಲ್ಲ ಕೃತಿಯಿಂದಲೂ ರಕ್ಷಿಸುತ್ತೇನೆ ಹಾಗೂ ವೈಯಕ್ತಿಕ ಅಥವಾ ವಿಭಜನಕಾರಿ ಆಸಕ್ತಿಗಳನ್ನು ಮೀರಿ ನಿಂತು ಕರ್ತವ್ಯ ನಿಭಾಯಿಸುತ್ತೇನೆಂದು 13ನೇ ರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಪ್ರಣವ್‌ ಮುಖರ್ಜಿ ಪ್ರತಿಜ್ಞೆ ಮಾಡಿದ್ದರು. ಭ್ರಷ್ಟಾಚಾರವನ್ನು “ಪಿಡುಗು’ ಎಂದು ಬಣ್ಣಿಸಿ ಕೆಲವು ವ್ಯಕ್ತಿಗಳ ದುರಾಸೆಯಿಂದ ದೇಶದ ಅಭಿವೃದ್ಧಿ ಅಪಹರಣವಾಗುವುದಕ್ಕೆ ಅವಕಾಶ ಕೊಡಬಾರದು ಎಂದಿದ್ದರು.

ಈ ಹುದ್ದೆಯ ಪ್ರಧಾನ ಹೊಣೆ ನಮ್ಮ ಸಂವಿಧಾನದ ಸಂರಕ್ಷಕನಾಗುವುದು. ಪ್ರಮಾಣವಚನದಲ್ಲಿ ಹೇಳಿರುವಂತೆ ಸಂವಿಧಾನವನ್ನು ಮಾತಿನಲ್ಲಿ ಮಾತ್ರವಲ್ಲ ಕೃತಿಯಲ್ಲೂ ಸಂರಕ್ಷಿಸುತ್ತೇನೆ ಮತ್ತು ಕಾಪಾಡುತ್ತೇನೆ ಎಂದು ಪ್ರಣಬ್‌ ದಾದಾ ನುಡಿದಾಗ ಸಭಿಕರು ಮೇಜುಗುದ್ದಿ ಹರ್ಷೋದ್ಗಾರಗಳೊಂದಿಗೆ ನೂತನ ರಾಷ್ಟ್ರಪತಿಯ ಭಾಷಣವನ್ನು ಸ್ವಾಗತಿಸಿದ್ದರು.

Advertisement

ಆಧುನಿಕ ಭಾರತವನ್ನು ಕೆಲವೊಂದು ಮೂಲ ತಣ್ತೀಗಳ ಮೇಲೆ ಕಟ್ಟಲಾಗಿದೆ. ಪ್ರಜಾಪ್ರಭುತ್ವ ಅಥವಾ ಪ್ರತಿಯೊಬ್ಬ ಪ್ರಜೆಗೆ ಸಮಾನ ಹಕ್ಕು, ಪ್ರತಿ ರಾಜ್ಯಕ್ಕೆ ಮತ್ತು ಭಾಷೆಗೆ ಸಮಾನತೆ, ಲಿಂಗ ಸಮಾನತೆ ಮತ್ತು ಇವೆಲ್ಲಕ್ಕಿಂತ ಮಿಗಿಲಾಗಿ ಆರ್ಥಿಕ ಸಮಾನತೆಯನ್ನು ಒದಗಿಸುವುದು ಸಂವಿಧಾನದ ಮುಖ್ಯ ಆಶಯ. ದೇಶದ ಕಟ್ಟ ಕಡೆಯ ಬಡವನಿಗೆ ಕೂಡ ತಾನು ಅಭಿವೃದ್ಧಿ ಹೊಂದುತ್ತಿರುವ ದೇಶದ ಭಾಗ ಎನ್ನುವ ಭಾವನೆ ಬಂದಾಗಲೇ ನಿಜವಾದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ತಮ್ಮ ಭಾಷಣದಲ್ಲಿ ಉಲ್ಲೇಖೀಸಿದ್ದರು.

ಬಡತನ ಎನ್ನುವ ಶಬ್ದವನ್ನು ದೇಶದ ಶಬ್ದಕೋಶದಿಂದ ಅಳಿಸಿ ಹಾಕಬೇಕು. ಹಸಿವೆಗಿಂತ ದೊಡ್ಡ ಅವಮಾನವಿಲ್ಲ. ಜಟಿಲ ಸಿದ್ಧಾಂತಗಳಿಂದ ಬಡವರ ಸಮಸ್ಯೆಗಳನ್ನು ಬಗೆಹರಿಸುವುದು ಅಸಾಧ್ಯ. ಬಡವರನ್ನು ತಳ ದಿಂದ ಮೇಲೆತ್ತಬೇಕು. ಬಡತನದ ಶಾಪ ವಿಮೋಚನೆಗಾಗಿ ಮತ್ತು ಯುವ ಜನಾಂಗ ದೇಶವನ್ನು ದೈತ್ಯ ಪ್ರಗತಿಯೆಡೆಗೆ ಒಯ್ಯುವಂತಹ ಅವಕಾಶಗಳನ್ನು ಸೃಷ್ಟಿಸಲು ನಮ್ಮ ರಾಷ್ಟ್ರೀಯ ಕಾರ್ಯಕ್ರಮಗಳು ಪೂರಕ ವಾಗಬೇಕು. ಗಾಂಧಿ, ನೆಹರು, ಸರ್ದಾರ್‌ ವಲ್ಲಭಭಾಯಿ ಪಟೇಲ್‌, ರಾಜೇಂದ್ರ ಪ್ರಸಾದ್‌, ಬಿ. ಆರ್‌. ಅಂಬೇಡ್ಕರ್‌ ಮತ್ತು ಮೌಲಾನಾ ಆಜಾದ್‌ ಅವರಂತಹ ಶ್ರೇಷ್ಠ ನಾಯಕರ ಹೋರಾಟದ ಫ‌ಲವಾಗಿ ಸಿಕ್ಕಿರುವ ದೇಶವನ್ನು ಅಭಿವೃದ್ಧಿಯತ್ತ ಒಯ್ಯುವುದು ನಮ್ಮ ಕರ್ತವ್ಯ ಎಂದು ಹೇಳಿದ್ದರು.

ಭಯೋತ್ಪಾದನೆಗೆ 4ನೇ ಸಮರ ಮದ್ದು…
ಭಯೋತ್ಪಾದನೆ ವಿರುದ್ಧದ ಹೋರಾಟವನ್ನು ನಾಲ್ಕನೇ ಜಾಗತಿಕ ಯುದ್ಧಕ್ಕೆ ಹೋಲಿಸಿದ್ದರು. ಭಯೋತ್ಪಾದನೆ ಜಗತ್ತಿನ ಯಾವುದೇ ಭಾಗದಲ್ಲಿ ತಲೆ ಎತ್ತುವ ಸಾಧ್ಯತೆಯಿರುವುದರಿಂದ ಅದರ ವಿರುದ್ಧ ಮಾಡುತ್ತಿರುವ ಹೋರಾಟ ನಾಲ್ಕನೇ ವಿಶ್ವ ಯುದ್ಧ ಎಂದಿದ್ದರು. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತ ಮುಂಚೂಣಿಯಲ್ಲಿದೆ. ಒಂದು ನಿಮಿಷದ ಶಾಂತಿಗಾಗಿ ನಾವು ವರ್ಷಗಟ್ಟಲೆ ಕಾದಾಡಬೇಕಾಗುತ್ತದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಯುದ್ಧ ಮುಗಿದು ಶಾಂತಿ ಸ್ಥಾಪನೆಯಾಗುವ ಸಾಧ್ಯತೆ ಗೋಚರಿಸುತ್ತಿಲ್ಲ. ನಾವೀಗ ನಾಲ್ಕನೇ ಜಾಗತಿಕ ಯುದ್ಧದ ನಡುವೆ ಇದ್ದೇವೆ. ಮೂರನೇ ಜಾಗತಿಕ ಯುದ್ಧ ಶೀತಲ ಸಮರವಾಗಿತ್ತು ಹಾಗೂ ಏಶ್ಯಾದಲ್ಲಿ ಗೋಚರವಾಗಿರಲಿಲ್ಲ ಎಂದು ಪ್ರಣಬ್‌ ವಿಶ್ಲೇಷಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next