Advertisement

ಮೈಸೂರು ರಾಜವಂಶಸ್ಥರಿಗೆ ಬಿಗ್‌ ರಿಲೀಫ್

06:35 AM Apr 06, 2018 | Team Udayavani |

ಮೈಸೂರು: ಆದಾಯ, ಸಂಪತ್ತು ತೆರಿಗೆ ನಿರ್ಧಾರ ವಿಚಾರದಲ್ಲಿ ಉಂಟಾಗಿದ್ದ ಗೊಂದಲದಿಂದಾಗಿ ನಾಲ್ಕು ದಶಕ ನಡೆಸಿದ ಕಾನೂನು ಹೋರಾಟದಲ್ಲಿ ಮೈಸೂರು ರಾಜಮನೆತನಕ್ಕೆ ಜಯ ಸಿಕ್ಕಿದೆ. ಕೈತಪ್ಪಿದ್ದ ಕೋಟ್ಯಂತರ ರೂ. ಮೌಲ್ಯದ ಆಸ್ತಿ, ಹೆಚ್ಚುವರಿ ಪಾವತಿಸಿದ್ದ ತೆರಿಗೆ ಹಣವನ್ನೂ ಆದಾಯ ತೆರಿಗೆ ಇಲಾಖೆ ಹಿಂತಿರುಗಿಸಿದೆ.

Advertisement

ನಗರದಲ್ಲಿನ ಅರಮನೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್‌, ತಮ್ಮ ಪತಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಕಾಲದಿಂದ ಸಂಪತ್ತು ಹಾಗೂ ಆದಾಯ ತೆರಿಗೆ ವಿಚಾರದಲ್ಲಿ ಕಾನೂನು ಹೋರಾಟ ಮಾಡಲಾಗಿತ್ತು. ಇದೀಗ ಗೊಂದಲಗಳು ಬಗೆಹರಿದಿವೆ ಎಂದು ಸ್ಪಷ್ಟಪಡಿಸಿದರು.

ರಾಜಮನೆತನಕ್ಕೆ ಸೇರಿದ ಮೈಸೂರಿನ ಆಸ್ತಿಗಳ ಮೌಲ್ಯಮಾಪನ ಸರಿಯಾಗಿಲ್ಲ, ಆದ್ದರಿಂದ 1975ರಿಂದಲೂ ಇಲಾಖೆ ಕೇಳಿದಷ್ಟು ತೆರಿಗೆ ಪಾವತಿಸುತ್ತಲೇ ಬಂದಿದ್ದೇವೆ. ಆದರೆ, ಆದಾಯ ತೆರಿಗೆ ತಮ್ಮ ಆಸ್ತಿಗಳ ಮೌಲ್ಯ ನಿರ್ಧರಿಸಿರುವುದು ಮತ್ತು ತೆರಿಗೆ ವಸೂಲು ಮಾಡುತ್ತಿರುವುದು ಸರಿಯಲ್ಲ ಎಂದು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದರು. ಅವರ ನಿಧನದ ಬಳಿಕ ಆ ಕಾನೂನು ಹೋರಾಟ ಮುಂದುವರಿಸಿದ್ದು, 2015ರಲ್ಲಿ ತಮ್ಮ ಪರ ತೀರ್ಪುಬಂದಿತ್ತು ಎಂದು ಹೇಳಿದರು.

ಆದರೆ, ಮುಟ್ಟುಗೋಲು ಹಾಕಿಕೊಂಡಿದ್ದ ಯಾವ್ಯಾವ ಆಸ್ತಿ ಹಿಂತಿರುಗಿಸಬೇಕು, ಕಳೆದ 40 ವರ್ಷಗಳಿಂದ ಹೆಚ್ಚುವರಿಯಾಗಿ ಎಷ್ಟು ತೆರಿಗೆ ಪಾವತಿಸಲಾಗಿದೆ ಎಂಬುದನ್ನು ನಿರ್ಧರಿಸಲು ಆದಾಯ ತೆರಿಗೆ ಇಲಾಖೆ ಎರಡು ವರ್ಷ ತೆಗೆದುಕೊಂಡಿತ್ತು. ಇದೀಗ ಹೆಚ್ಚುವರಿಯಾಗಿ ಕಟ್ಟಿದ್ದ ಆದಾಯ ಮತ್ತು ಸಂಪತ್ತು ತೆರಿಗೆಗೆ 40 ವರ್ಷಗಳ ಬಡ್ಡಿ ಸಮೇತ ಹಿಂತಿರುಗಿಸಿದೆ ಎಂದು ತಿಳಿಸಿದರು.

ದಸರಾ ವಸ್ತು ಪ್ರದರ್ಶನ ಮೈದಾನದ ಕೆಲಭಾಗ, ಎದುರಿನ ಜಾಗ, ಕರುಬಾರಹಳ್ಳಿ, ಗರಿಕೆಮಾಳದ ಆಸ್ತಿಗಳು ತಮ್ಮದಾಗಲಿವೆ ಎಂದು ಹೇಳಿದರು.

Advertisement

40 ವರ್ಷಗಳಿಂದ ಹೆಚ್ಚುವರಿಯಾಗಿ ಪಾವತಿಸಿದ್ದ ಆದಾಯ ಮತ್ತು ಸಂಪತ್ತು ತೆರಿಗೆಯ ಬಾಬ್ತು ಎಷ್ಟು ಹಣ ಬಂದಿದೆ ಎಂದು ಹೇಳಲು ಬಯಸುವುದಿಲ್ಲ. ಆದರೆ, ಹಲವಾರು ಲಕ್ಷ ರೂ. ಅನ್ನಬಹುದು.
– ಪ್ರಮೋದಾದೇವಿ ಒಡೆಯರ್‌, ಮೈಸೂರು ರಾಜವಂಶಸ್ಥೆ

ಶಾ ಅರಮನೆ ನೋಡಲು ಬಂದಿದ್ರು
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರದ್ದು ಸೌಹಾರ್ದದ ಭೇಟಿ. ತಮ್ಮೊಂದಿಗೆ ರಾಜಕೀಯ ವಿಷಯ ಚರ್ಚಿಸಿಲ್ಲ. ಅರಮನೆ ನೋಡಲು ಬಂದಿದ್ದರು ಎಂದು ಪ್ರಮೋದಾದೇವಿ ಒಡೆಯರ್‌ ಸ್ಪಷ್ಟಪಡಿಸಿದರು. ತನಗೆ ರಾಜಕಾರಣದಲ್ಲಿ ಆಸಕ್ತಿ ಇಲ್ಲ. ಬರುವುದೂ ಇಲ್ಲ ಎಂದು ಹಿಂದಿನಿಂದಲೂ ಹೇಳುತ್ತಲೇ ಬಂದಿದ್ದೇನೆ. ಅಮಿತ್‌ ಶಾ ಚುನಾವಣೆ ವೇಳೆ ಅರಮನೆಗೆ ಭೇಟಿ ನೀಡಿದ್ದರಿಂದ ಈ ರೀತಿಯ ಸುದ್ದಿಗಳು ಹರಡಿದೆ ಅಷ್ಟೇ. ಯದುವೀರ್‌ಗೆ ಇಚ್ಛೆ ಇದ್ದರೆ ರಾಜಕೀಯಕ್ಕೆ ಹೋಗಬಹುದು. ಅದಕ್ಕೆ ನನ್ನ ಅನುಮತಿ ಬೇಕಿಲ್ಲ. ಆದರೆ, ಯದುವೀರ್‌ ಅವರೇ ನನಗೆ ರಾಜಕೀಯದಲ್ಲಿ ಆಸಕ್ತಿಯಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next