“ಕಿರಿಕ್ ಪಾರ್ಟಿ’, “ಸರ್ಕಾರಿ ಹಿ. ಪ್ರಾ. ಶಾಲೆ ಕಾಸರಗೋಡು’, “ಬೆಲ್‌ಬಾಟಂ’ ಸೇರಿದಂತೆ ಅನೇಕ ಚಿತ್ರಗಳಲ್ಲಿ ಪೋಷಕ ಪಾತ್ರದಲ್ಲಿ ಮಿಂಚಿದ್ದ ನಟ ಪ್ರಮೋದ್ ಶೆಟ್ಟಿ ಮೊದಲ ಬಾರಿಗೆ ಮುಖ್ಯ ಪಾತ್ರದಲ್ಲಿ ಪ್ರೇಕ್ಷಕರ ಮುಂದೆ ಬರೋದಕ್ಕೆ ಸಿದ್ಧವಾಗುತ್ತಿದ್ದಾರೆ. ಅಂದಹಾಗೆ, ಪ್ರಮೋದ್ ಶೆಟ್ಟಿ “ಒಂದು ಶಿಕಾರಿಯ ಕಥೆ’ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದು, ಸಸ್ಪೆನ್ಸ್-ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಐವತ್ತರ ಅಸುಪಾಸಿನ ಪ್ರಸಿದ್ಧ ಕಾದಂಬರಿಕಾರನ ಪಾತ್ರಕ್ಕೆ ಪ್ರಮೋದ್ ಶೆಟ್ಟಿ ಬಣ್ಣ ಹಚ್ಚಿದ್ದಾರೆ.
ಪತ್ನಿಯನ್ನು ತೊರೆದು ಏಕಾಂಗಿಯಾಗಿ ವಾಸಿಸುತ್ತಿರುವ ಕರಾವಳಿ ಭಾಗದ ವಿರಕ್ತ ಕಾದಂಬರಿಕಾರನ ಬದುಕಿನಲ್ಲಿ ಎದುರಾಗುವ ಕೆಲ ಅನಿರೀಕ್ಷಿತ ತಿರುವುಗಳು, ಅವನಲ್ಲಿ ಏನೇನು ಬದಲಾವಣೆಗೆ ಕಾರಣವಾಗುತ್ತವೆ. ಲೇಖನಿ(ಪೆನ್)ಯ ಸ್ನೇಹ ಮತ್ತು ಕೋವಿ(ಗನ್)ಯ ಸಹವಾಸದಿಂದ ಏನೆಲ್ಲ ನಡೆಯತ್ತದೆ ಅನ್ನೋದೆ “ಒಂದು ಶಿಕಾರಿಯ ಕಥೆ’ ಚಿತ್ರದ ಒಂದೆಳೆ. ಸಸ್ಪೆನ್ಸ್-ಥ್ರಿಲ್ಲರ್ ಶೈಲಿಯಲ್ಲಿ ಮೂಡಿಬಂದಿರುವ “ಒಂದು ಶಿಕಾರಿಯ ಕಥೆ’ ಚಿತ್ರಕ್ಕೆ ಕುಂದಾಪುರ ಮೂಲದ ನವ ಪ್ರತಿಭೆ ಸಚಿನ್ ಶೆಟ್ಟಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.
ಚಿತ್ರದಲ್ಲಿ ಪ್ರಮೋದ್ ಶೆಟ್ಟಿ ಅವರೊಂದಿಗೆ ಪ್ರಸಾದ್ ಚೆರ್ಕಾಡಿ, ಸಿರಿ ಪ್ರಹ್ಲಾದ್, ಅಭಿಮನ್ಯು ಪ್ರಜ್ವಲ್, ಎಂ.ಕೆ ಮಠ, ಶ್ರೀಪ್ರಿಯಾ ಮೊದಲಾದವರು ಇತರೆ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. “ಶೆಟ್ಟಿಸ್ ಫಿಲ್ಮ್ ಫ್ಯಾಕ್ಟರಿ’ ಬ್ಯಾನರ್‌ನಲ್ಲಿ ರಾಜೀವ್ ಶೆಟ್ಟಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಯೋಗೇಶ್ ಗೌಡ ಛಾಯಾಗ್ರಹಣ, ಬಿ.ಎಸ್ ಕೆಂಪರಾಜು ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ಚಿತ್ರದ ಹಾಡುಗಳಿಗೆ ಶಾನ್ ಗೊನ್ಸಲ್ವೇಸ್, ಸನತ್ ಬಲ್ಕೂರ್ ಸಂಗೀತ ಸಂಯೋಜಿಸಿದ್ದಾರೆ.
ಸುಮಾರು ಎರಡು ವರ್ಷಗಳ ಪರಿಶ್ರಮದ ಬಳಿಕ “ಒಂದು ಶಿಕಾರಿಯ ಕಥೆ’ ಚಿತ್ರ ಅಂದುಕೊಂಡಂತೆ ರೀತಿಯಲ್ಲಿ ಮೂಡಿಬಂದಿದ್ದು, ಯಕ್ಷಗಾನ, ಅಡಿಕೆ ವ್ಯಾಪಾರ, ಭೋರ್ಗರೆಯುವ ಕಡಲು, ದಟ್ಟ ಕಾನನ, ತುಂಬಿ ಹರಿಯುವ ನದಿಗಳು ಈ ಎಲ್ಲಾ ಕರಾವಳಿ ಮತ್ತು ಮಲೆನಾಡು ಅಸ್ಮಿತೆ ಬಿಂಬಿಸುವ ಅಂಶಗಳು ಚಿತ್ರದಲ್ಲಿ ಪಾತ್ರಗಳೇ ಆಗಿ ಬರುತ್ತವೆ. ನೋಡುಗರಿಗೆ ಚಿತ್ರ ಹೊಸ ಅನುಭವ ನೀಡಲಿದೆ.
ಚಿತ್ರದ ಬಹುತೇಕ ಚಿತ್ರೀಕರಣವನ್ನು ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಯ ಸುಂದರ ತಾಣಗಳಲ್ಲಿ ಚಿತ್ರೀಕರಿಸಲಾಗಿದೆ ಎನ್ನುತ್ತದೆ ಚಿತ್ರತಂಡ. ಈಗಾಗಲೇ ಶೂಟಿಂಗ್, ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಸದ್ದಿಲ್ಲದೆ ಪೂರ್ಣಗೊಳಿಸಿರುವ ಚಿತ್ರತಂಡ, ಸೆನ್ಸಾರ್‌ನಿಂದಲೂ ಗ್ರೀನ್ ಸಿಗ್ನಲ್ ಪಡೆದುಕೊಂಡಿದ್ದು, ಶೀಘ್ರದಲ್ಲಿಯೇ ಹೊಸಬರ ತಂಡ “ಒಂದು ಶಿಕಾರಿಯ ಕಥೆ’ಯನ್ನು ಪ್ರೇಕ್ಷಕರ ಮುಂದೆ ಹೇಳಲು ತಯಾರಿ ಮಾಡಿಕೊಳ್ಳುತ್ತಿದೆ.