ವಿಜಯಪುರ: ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಅಧ್ಯಕ್ಷ ರಾಮಮಂದಿರ ಕೆಡವಿ ಮತ್ತೆ ಅದೇ ಜಾಗದಲ್ಲಿ ಬಾಬರಿ ಮಸೀದಿ ನಿರ್ಮಿಸುತ್ತೇವೆ ಎಂಬ ಸಂವಿಧಾನ ಹಾಗೂ ಸುಪ್ರೀಂ ಕೋರ್ಟ್ ತೀರ್ಪಿಗೆ ವಿರುದ್ಧವಾದ ಹೇಳಿಕೆ ನೀಡಿದ್ದಾರೆ. ಆದರೆ ನ್ಯಾಯಾಂಗ ನಿಂದನೆ ಮಾಡಿರುವ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಮುಖ್ಯಸ್ಥನ ಹೇಳಿಕೆ ವಿರುದ್ಧ ಕಠಿಣ ಕಾನೂನು ಕ್ರಮ ಕ್ರಮ ಕೈಗೊಳ್ಳುವ ಬದಲು ಕೇಂದ್ರ ಮೃಧು ದೋರಣೆ ಅನುಸರಿಸುತ್ತಿದೆ. ಕೂಡಲೇ ಸದರಿ ಸಂಘಟನೆಯನ್ನು ನಿಷೇಧಿಸಬೇಕು ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.
ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಆಗ್ರಹ ಮಾಡಿದ ಅವರು, ಇದು ದೇಶದ್ರೋಹ ಮತ್ತು ಸಂವಿಧಾನ ವಿರೋಧಿ ಕ್ರಮ. ಸುಪ್ರೀಂಕೋರ್ಟ್ ಆದೇಶ ಪಾಲಿಸಲು ಆಗದವರು ದೇಶದಲ್ಲಿ ಇರಲು ನಾಲಾಯಕ್. ಅಂಥವರು ಪಾಕಿಸ್ತಾನಕ್ಕೆ ಹೋಗಲಿ. ಇಲ್ಲವೇ ಸರ್ಕಾರವೇ ಅವರನ್ನು ಪಾಕಿಸ್ತಾನಕ್ಕೆ ಕಳಿಸಬೇಕು. ಇಂತ ಸಮಾಜ ವಿರೋಧಿ ಜನರ ವಿರುದ್ಧ ಕೇಂದ್ರ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳದೇ ಮೃದು ಧೋರಣೆ ಅನುಸರಿಸುತ್ತಿರುವುದು ಖಂಡನೀಯ ಎಂದರು.
ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ ಇಕ್ಬಾಲ್ ಅನ್ಸಾರಿ ಅವರಂತಹ ರಾಮಮಂದಿರ ನಿರ್ಮಾಣ ವಿರೋಧಿಗಳನ್ನು ಆಹ್ವಾನಿಸಿತ್ತು. ಆದರೆ, ಜೀವನ ಪೂರ್ತಿ ಮಂದಿರ ನಿರ್ಮಾಣಕ್ಕಾಗಿ ಹೋರಾಟ ನಡೆಸಿದ ಪ್ರವೀಣ್‍ಭಾಯಿ ತೊಗಾಡಿಯಾ ಅವರನ್ನು ಸೌಜನ್ಯಕ್ಕೂ ಆಹ್ವಾನಿಸದೇ ಇರುವುದು ಖಂಡನೀಯ ಎಂದರು.
ಕೋವಿಡ್ ರೋಗ ನಿಗ್ರಹಕ್ಕಾಗಿ ಭಾರತೀಯ ವೈದ್ಯ ಪದ್ಧತಿಯ ತಜ್ಞ ಡಾ.ಗಿರಿಧರ ಕಜೆ ಅವರು ಕೊರೊನಾ ರೋಗಿಗಳನ್ನು ಗುಣಪಡಿಸಬಲ್ಲ 70 ಲಕ್ಷ ಆಯುರ್ವೇದಿಕ್ ಮಾತ್ರೆಗಳನ್ನು ಉಚಿತವಾಗಿ ಜನರಿಗೆ ಸರ್ಕಾರಕ್ಕೆ ನೀಡಿದ್ದಾರೆ. ಸರ್ಕಾರ ಮಾತ್ರ ಈ ಮಾತ್ರೆ ವಿತರಿಸದೇ ಆಲೋಪಥಿ ಲಾಬಿಗೆ ಮಣಿದಿದೆ. ಆದಷ್ಟು ಬೇಗ ಆಯುರ್ವೇದಿಕ್ ಗುಳಿಗೆಗಳನ್ನು ಜನರಿಗೆ ವಿತರಿಸಬೇಕು ಎಂದು ಆಗ್ರಹಿಸಿದರು.
ಕೋವಿಡ್ ನಿರ್ವಹಣೆಯಲ್ಲಿ ಭ್ರಷ್ಟಾಚಾರದ ವಾಸನೆ ಹರಡಿದೆ. ರಾಜ್ಯ ಸರ್ಕಾರ ನೂರಕ್ಕೆ ನೂರರಷ್ಟು ಭ್ರಷ್ಟಾಚಾರ ನಡೆಸಿದೆ. ಆದರೆ, ವಿರೋಧ ಪಕ್ಷ ಸರಿಯಾದ ಸಾಕ್ಷಿಗಳನ್ನು ನೀಡುವಲ್ಲಿ ಎಡವಿದೆ. ಕೋವಿಡ್ ಸಾವು, ನೋವಿನಲ್ಲಿ ಸಚಿವರು ಭ್ರಷ್ಟಾಚಾರ ಮಾಡುವ ಮೂಲಕ ಪಾಪದ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಆಗಸ್ಟ್ 22 ರಿಂದ ನಡೆಯಲಿರುವ ಸಾರ್ವಜನಿಕ ಗಣೇಶೋತ್ಸವಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿಲ್ಲ. ಮಹಾರಾಷ್ಟ್ರ ಸರ್ಕಾರ ಈಗಾಗಲೇ ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶ ನೀಡಿದೆ. ರಾಜ್ಯದಲ್ಲೂ ಅವಕಾಶ ನೀಡಬೇಕು. ಕೋವಿಡ್ ನಿಯಮಾವಳಿಯನ್ನು ಕಡ್ಡಾಯವಾಗಿ ಪಾಲಿಸುತ್ತೇವೆ. ಒಂದೊಮ್ಮೆ ಸರ್ಕಾರ ಮೊಂಡುತನ ತೋರಿದಲ್ಲಿ ನಾವಂತೂ ಆಚರಿಸುತ್ತೇವೆ. ಸರ್ಕಾರ ಬೇಕಾದರೆ ನಮ್ಮನ್ನು ಬಂಧಿಸಲಿ, ಗಣೇಶನ ಮೂರ್ತಿಗಳನ್ನು ಬೇಕಾದರೆ ಸ್ವಾಧೀನ ಮಾಡಿಕೊಳ್ಳಲಿ ಎಂದು ಸವಾಲು ಎಸೆದರು.
ಶ್ರೀರಾಮ ಸೇನೆಯ ಮುಖಂಡರಾದ ನೀಲಕಂಠ ಕಂದಗಲ್, ಗಂಗಾಧರ ಕುಲಕರ್ಣಿ, ರಾಕೇಶ್ ಮಠ, ಬಸವರಾಜ ಕಲ್ಯಾಣಪ್ಪಗೋಳ, ಆನಂದ ಕುಲಕರ್ಣಿ ಇತರರು ಇದ್ದರು.