ಬಾಗಲಕೋಟೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ಪ್ರಸಕ್ತ ಬಜೆಟ್‌ನಲ್ಲಿ ಮುಸ್ಲಿಮರ ಓಲೈಕೆ ಮಾಡಿರುವುದು ಖಂಡನೀಯ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ ಹೇಳಿದರು.
ರವಿವಾರ ಸುದ್ದಿಗಾರರ ಜತೆ ಮಾತನಾಡಿ, ಮುಸ್ಲಿಮರ ಖಬರಸ್ತಾನ ಅಭಿವೃದ್ಧಿಗೆ 10 ಕೋಟಿ ರೂ. ಘೋಷಣೆ ಮಾಡಲಾಗಿದೆ. ಈಗಾಗಲೇ ವಕ್ಫ್ ಬೋರ್ಡ್‌ನಲ್ಲಿ ಸಾವಿರಾರು ಕೋಟಿ ರೂ. ಮತ್ತೆ ಹೆಚ್ಚುವರಿಯಾಗಿ ಬಜೆಟ್‌ನಲ್ಲಿ 10 ಕೋಟಿ ರೂ. ಏಕೆ ಎಂದು ಪ್ರಶ್ನಿಸಿದರು.
ಬಿಜೆಪಿಯವರು ಹಿಂದೂ ಹೋರಾಟಗಾರರಿಗೆ ಟಿಕೆಟ್ ಕೊಡುವುದಿಲ್ಲ. ಅವರನ್ನು ಗದ್ದುಗೆಗೆ ಏರಿಸಿದವರೇ ನಾವು. ನನಗೆ ಟಿಕೆಟ್ ಕೇಳುವ ಹಕ್ಕಿದೆ. ನಿಮ್ಮನ್ನು ಟೀಕಿಸುವ-ಬೈಯುವ ಹಕ್ಕಿದೆ. ಬಿಜೆಪಿಯವರು ಹಿಂದೂ ಕಾರ್ಯಕರ್ತರು, ಹೋರಾಟಗಾರರಿಗೆ ದ್ರೋಹ ಮಾಡುತ್ತಿದ್ದಾರೆ. ಬಿಜೆಪಿಯ ಯಾರ್ಯಾರು ದ್ರೋಹ ಮಾಡಿದ್ದೀರಿ ಎಂಬುದನ್ನು ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ವಿಜಯ ಸಾಧಿಸಿ ತೋರಿಸುತ್ತೇನೆ ಎಂದರು.
ಎಸ್‌ಡಿಪಿಐ ದ್ರೇಶದ್ರೋಹಿ, ಸಮಾಜಘಾತುಕ ಪಕ್ಷ. ರಾಜ್ಯದಲ್ಲಿ ನಡೆದ 23 ಕೊಲೆ ಪ್ರಕರಣಗಳ ಪೈಕಿ 9 ರಲ್ಲಿ ಎಸ್‌ಡಿಪಿಐ ಹೆಸರಿದೆ.
ಪುತ್ತೂರಿನಲ್ಲಿ ಪ್ರವೀಣ್ ನೆಟ್ಟಾರು ಕೊಲೆ ಆರೋಪಿಯನ್ನು ಅಭ್ಯರ್ಥಿಯನ್ನಾಗಿ ಎಸ್‌ಡಿಪಿಐ ರಾಜ್ಯಾಧ್ಯಕ್ಷರು ಘೋಷಣೆ ಮಾಡಿದ್ದಾರೆ. ಇದು ಕೊಲೆ ಮಾಡಿದವರಿಗೆ ಪ್ರೋತ್ಸಾಹ ಕೊಟ್ಟಂತೆ ಅಲ್ಲವೇ ಎಂದು ಪ್ರಶ್ನಿಸಿದರು.
ನಾವು ಬಿಜೆಪಿ ವಿರೋಧಿಗಳಲ್ಲ. ಪ್ರಧಾನಿ ಮೋದಿಯವರೇ ನಮ್ಮ ನಾಯಕರು. ಅವರ ವಿಚಾರಧಾರೆಯನ್ನು ಕಾರ್ಕಳದ ಮೂಲಕ ತರುವುದಕ್ಕಾಗಿ ಚುನಾವಣೆ ಕಣಕ್ಕಿಳಿದಿದ್ದೇನೆ. ಬಿಜೆಪಿ ಹಿಂದುತ್ವದ ಪಕ್ಷ. ಆದರೆ ಅದರಲ್ಲಿರುವ ಕೆಲವರ ವಿಕೃತಿ, ಹಿಂದೂ ದ್ರೋಹ, ಭ್ರಷ್ಟತೆಯ ವಿರುದ್ಧ ನನ್ನ ಹೋರಾಟ. ಬಿಜೆಪಿ ವಿರುದ್ಧ ಅಲ್ಲ ಎಂದರು.