ಧಾರವಾಡ: ನೂಪುರ್ ಶರ್ಮಾ ವಿರುದ್ಧ ಬಿಜೆಪಿ ಕ್ರಮ ಕೈಗೊಂಡಿದ್ದು, ಆದರೂ ಅವರ ಹೇಳಿಕೆ ಮುಂದಿಟ್ಟುಕೊಂಡು ಗಲಭೆ ನಡೆಯುತ್ತಿರುವುದು ಖಂಡನೀಯ. ಇದೊಂದು ಯೋಜನಾಬದ್ಧ ಗಲಭೆಯಾಗಿದ್ದು, ಇದರಲ್ಲಿ ವ್ಯವಸ್ಥಿತ ಸಂಚು, ಷಡ್ಯಂತ್ರ ಇದೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಸ್ಲಿಂ ರಾಷ್ಟ್ರಗಳು ನಮ್ಮ ದೇಶದಲ್ಲಿ ಮೂಗು ತೂರಿಸ ಬೇಕಿಲ್ಲ. ದೇಶದ ಮುಸ್ಲಿಮರು ನ್ಯಾಯಾಲಯಕ್ಕೆ ಗೌರವಿಸಬೇಕು. ಸಂವಿಧಾನದ ಚೌಕಟ್ಟಿನಲ್ಲೇ ನ್ಯಾಯಬದ್ಧ ಹೋರಾಟ ಮಾಡಬೇಕೇ ಹೊರತು ಕಲ್ಲು, ತಲ್ವಾರ್ ಹಿಡಿಯಬಾರದು ಎಂದರು.
ಎಸ್‌ಡಿಪಿಐ, ಪಿಎಫ್‌ಐ, ಎಂಐಎಂನವರು ಮಾತ್ರ ಹೊರಗೆ ಬಿದ್ದು ಪ್ರತಿಭಟಿಸುತ್ತಿದ್ದಾರೆ. ಇವರು ದೇಶದ್ರೋಹಿಗಳು, ದೇಶಕ್ಕೆ ಕಂಟಕರು. ಈ ಸಂಘಟನೆಗಳನ್ನು ನಿಷೇಧಿಸಬೇಕಿದೆ ಎಂದು ಹೇಳಿದರು.
ನೂಪುರ್ ಶರ್ಮಾ ನೀಡಿರುವ ಹೇಳಿಕೆ ಕುರಿತು ನಮ್ಮ ಪಕ್ಷ ಸ್ಪಷ್ಟವಾದ ನಿಲುವು ಕೈಗೊಂಡಿದೆ. ಕೆಲವರು ಈ ಸಂದರ್ಭವನ್ನು ಬಳಸಿಕೊಂಡು ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ. ಕೆಲವು ಸಂಘಟನೆಗಳು ಕೂಡ ಈ ಘಟನೆಗೆ ಕೋಮು ಸ್ಪರ್ಶ ನೀಡುತ್ತಿವೆ. ಈ ರೀತಿಯ ಕೆಲಸ ಮಾಡಬಾರದು.
– ಡಾ| ಅಶ್ವತ್ಥನಾರಾಯಣ,
ಉನ್ನತ ಶಿಕ್ಷಣ ಸಚಿವ