ಹುಬ್ಬಳ್ಳಿ: ಪ್ರಕೃತಿ ಮಾತೆಗೆ ನಮಿಸುವ, ಪರಿಸರ ರಕ್ಷಣೆ-ಪೋಷಣೆ ಸಂಕಲ್ಪ, ಮುಖ್ಯವಾಗಿ ಹೊಸ ಪೀಳಿಗೆಗೆ ಪ್ರಕೃತಿ ಮಾತೆಗೆ ಗೌರವ ಸಲ್ಲಿಸುವ ಪರಂಪರೆ ಮನದಟ್ಟು ಮಾಡುವ ನಿಟ್ಟಿನಲ್ಲಿ ಆರ್‌ಎಸ್‌ಎಸ್ ಮಹತ್ವದ ಹೆಜ್ಜೆ ಇರಿಸಿದೆ. ಆ.30ರಂದು ರಾಷ್ಟ್ರದಾದ್ಯಂತ ಪ್ರಕೃತಿ ವಂದನಾ ಕಾರ್ಯಕ್ರಮ ಮೊಳಗಲಿದ್ದು, ರಾಜ್ಯದಲ್ಲಿ ಸುಮಾರು 5 ಲಕ್ಷಕ್ಕೂ ಅಧಿಕ ಮನೆಗಳಲ್ಲಿ ಪೂಜೆ ಸಲ್ಲಿಕೆಗೆ ಸಂಕಲ್ಪ ಮಾಡಲಾಗಿದೆ.
ರಾಷ್ಟ್ರಪ್ರೇಮ, ದೇಸಿಯತೆ, ಪರಂಪರೆ, ಸಂಸ್ಕೃತಿ, ಸಂಸ್ಕಾರ, ಸಾಂಸ್ಕೃತಿಕತೆಯ ಪ್ರೇರಣೆ-ಪೋಷಣೆ, ಯಾವುದೇ ವಿಪತ್ತು ಎದುರಾದರೂ ಪರಿಹಾರ ಕಾರ್ಯದಲ್ಲಿ ಮೊದಲ ಹೆಜ್ಜೆ ಇರಿಸುವ ಕಾಯಕದಲ್ಲಿ ತೊಡಗಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್ ಎಸ್‌ಎಸ್) ಆ.30ರಂದು ರಾಷ್ಟ್ರದಾದ್ಯಂತ ಪ್ರತಿ ಮನೆಗಳಲ್ಲೂ ಪ್ರಕೃತಿ ಮಾತೆಗೆ ವಂದನೆ ಸಲ್ಲಿಕೆಗೆ ಕರೆ ನೀಡಿದ್ದು, ಇದಕ್ಕೆ ದೇಶ-ರಾಜ್ಯದಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
ಕೋವಿಡ್-19 ಅನೇಕ ಸಾವು-ನೋವುಗಳಿಗೆ ಕಾರಣವಾಗಿದ್ದು, ಪರಿಸರ, ಜೀವನಶೈಲಿ, ಅನೇಕರ ಚಿಂತನೆಗಳಲ್ಲೂ ಬದಲಾವಣೆಗೆ ಕಾರಣವಾಗಿದೆ. ಪರಿಸರ, ಆರೋಗ್ಯ ಕಾಳಜಿಗೆ ಒತ್ತು ನೀಡುವ ಪಾಠವನ್ನು ಕಲಿಸಿದೆ. ಇದಕ್ಕೆ ಪೂರಕವಾಗಿ ಪರಿಸರ ರಕ್ಷಣೆ, ಪೋಷಣೆ ನಿಟ್ಟಿನಲ್ಲಿ ಹಿಂದೂ ಅಧ್ಯಾತ್ಮಿಕ ಸೇವಾ ಮೇಳ, ಆರ್ ಎಸ್‌ಎಸ್‌ನ ಪರ್ಯಾವರಣ ಸಂರಕ್ಷಣೆ ಗತಿ ವಿಧಿಯ ಸಹಭಾಗಿತ್ವದಲ್ಲಿ ಆ.30ರಂದು ಬೆಳಗ್ಗೆ 10ರಿಂದ 12ರವರೆಗೆ ರಾಷ್ಟ್ರದಾದ್ಯಂತ ಪ್ರಕೃತಿ ಮಾತೆಗೆ ವಂದನಾ ಅಭಿಯಾನ ನಡೆಯಲಿದೆ.
5 ಲಕ್ಷಕ್ಕೂ ಅಧಿಕ ಮನೆಗಳ ಗುರಿ: ಪ್ರಕೃತಿ ಮಾತೆಗೆ ವಂದನಾ ಕಾರ್ಯಕ್ರಮ ಪ್ರತಿ ಮನೆಗಳಲ್ಲೂ ನಡೆಯಬೇಕೆಂಬುದು ಸಂಘದ ಆಶಯ. ಇದಕ್ಕಾಗಿ ಈಗಾಗಲೇ ಅಗತ್ಯ ಮಾಹಿತಿ ರವಾನೆ ಹಾಗೂ ಪ್ರಚಾರ ಕಾರ್ಯ ಕೈಗೊಳ್ಳಲಾಗಿದ್ದು, ಕೋವಿಡ್-19 ಹಿನ್ನೆಲೆಯಲ್ಲಿ ಆನ್‌ಲೈನ್ ಮೂಲಕ ನೋಂದಣಿಗೆ ಸೂಚಿಸಲಾಗಿದೆ. ಸಂಘದ ಕರೆಗೆ ದೇಶಾದ್ಯಂತ ಉತ್ತಮ ಸ್ಪಂದನೆ ದೊರೆತಿದ್ದು, 1.30ಲಕ್ಷಕ್ಕೂ ಅಧಿಕ ಜನರು ತಮ್ಮ ಮನೆಗಳಲ್ಲಿ ಪ್ರಕೃತಿ ವಂದನಾ ಕಾರ್ಯಕ್ಕೆ ನೋಂದಣಿ ಮಾಡಿಸಿದ್ದಾರೆ. ಉತ್ತರ ಕರ್ನಾಟಕದಲ್ಲಿ 959 ಜನರು ನೋಂದಣಿ ಮಾಡಿಸಿದ್ದು, ಈ ಭಾಗದಲ್ಲಿ ಸುಮಾರು 10 ಸಾವಿರ ಮನೆಗಳು ಸೇರಿದಂತೆ ರಾಜ್ಯದಾದ್ಯಂತ ಸುಮಾರು 5 ಲಕ್ಷ ಮನೆಗಳು, ದೇಶಾದ್ಯಂತ ಸುಮಾರು 1 ಕೋಟಿಗೂ ಅಧಿಕ ಮನೆಗಳಲ್ಲಿ ಪ್ರಕೃತಿ ವಂದನಾ ಕಾರ್ಯಕ್ರಮ ನಡೆಯುವ ವಿಶ್ವಾಸವನ್ನು ಸಂಘ ಹೊಂದಿದೆ. ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಸದೆಯೇ ಅನೇಕ ಗ್ರಾಮೀಣರು ಇನ್ನಿತರರು ವಂದನಾ ಕಾರ್ಯದಲ್ಲಿ ತೊಡಗುವ ಸಾಧ್ಯತೆಯೂ ಇದೆ.
ಪೂಜೆ ವಿಧಾನ ಹೇಗೆ? : ಪ್ರಕೃತಿ ಮಾತೆಗೆ ವಂದನೆ ಸಲ್ಲಿಸುವ ಕಾರ್ಯವನ್ನು ಅವರವರ ಪದ್ಧತಿಯಲ್ಲಿ ಕೈಗೊಳ್ಳಬಹುದಾಗಿದೆ. ಸಂಘದ ಮಾರ್ಗಸೂಚಿಯಂತೆ ಸುಮಾರು 10-15 ನಿಮಿಷಗಳ ಕಾಲ ಪೂಜಾ ಕಾರ್ಯ ನಡೆಯಲಿದೆ. ಜನರು ತಮ್ಮ ಮನೆಯ ಇಲ್ಲವೆ ಸುತ್ತಮುತ್ತಲ ಪರಿಸರದಲ್ಲಿರುವ ಗಿಡಗಳಿಗೆ ಪೂಜೆ ಸಲ್ಲಿಸಬೇಕಾಗಿದೆ. ಮನೆಯ ಅಂಗಳವನ್ನು ಸ್ವತ್ಛಗೊಳಿಸಿ, ರಂಗೋಲಿ ಹಾಕಿ ಶೃಂಗಾರಗೊಳಿಸಬೇಕಿದೆ. ಪೂಜೆ ಸಲ್ಲಿಕೆಯಲ್ಲಿ ಐದು ನಿಮಿಷ ಪ್ರಕೃತಿ ಮಾತೆಯ ಮಹತ್ವದ ಕುರಿತು ವರ್ಣನೆ ನಡೆಯಲಿದೆ. ನಂತರ ಗಿಡಕ್ಕೆ ಅರಿಶಿಣ
ಹಚ್ಚಿದ ದಾರ(ಕಂಕಣ)ವನ್ನು ಕಟ್ಟಲಾಗುತ್ತಿದ್ದು, ಇದು ಪರಿಸರ ಸಂರಕ್ಷಣೆಯ ಸಂಕಲ್ಪವಾಗಿದೆ. ಪೂಜೆಯಲ್ಲಿ ತೊಡಗಿದವರು ಕಂಕಣವನ್ನು ಕಟ್ಟುವ ಮೂಲಕ ಪರಿಸರ ಸಂರಕ್ಷಣೆಗೆ ನಮ್ಮನ್ನು ತೊಡಗಿಸಿಕೊಳ್ಳುತ್ತೇವೆಂದು, ಜತೆಗೆ ಗಿಡಕ್ಕೆ ನೀರು ಹಾಕುವ ಮೂಲಕ ಗಿಡ-ಮರಗಳನ್ನು ಪೋಷಣೆ ಮಾಡುತ್ತೇವೆಂಬ ಸಂಕಲ್ಪ ಮಾಡುತ್ತಾರೆ. ಪೂಜೆ ಸಲ್ಲಿಸಿದ ಗಿಡಕ್ಕೆ ಆರತಿ ಬೆಳಗುತ್ತಾರೆ. ಬರಿ ಗಿಡ-ಮರಗಳಿಷ್ಟೇ ಅಲ್ಲ ನೀರು ಸಹ ಪ್ರಕೃತಿಯ ಭಾಗವಾಗಿದ್ದು, ಜನರು ತಮ್ಮ ತಮ್ಮ ಗ್ರಾಮಗಳಲ್ಲಿ ಕಲ್ಯಾಣಿ, ಕೆರೆಗಳಿಗೆ ಪೂಜೆ ಸಲ್ಲಿಸುವ ಮೂಲಕ ಕಲ್ಯಾಣಿ-ಕೆರೆಗಳ ಸಂರಕ್ಷಣೆ ಸಂಕಲ್ಪ ಮಾಡಬೇಕಾಗಿದೆ. ಪ್ರಕೃತಿ ಮಾತೆ ಬಗ್ಗೆ ಮುಂದಿನ ಪೀಳಿಗೆಗೆ ಮನನ ಮಾಡುವ, ಅವರಲ್ಲೂ ಪರಿಸರ ಪ್ರೀತಿ, ನಮ್ಮ ಪೂರ್ವಜರು ತೋರುತಿದ್ದ ಗೌರವ, ಭಕ್ತಿಯ ಭಾವನೆಯ ಪರಂಪರೆ, ಸಂಸ್ಕೃತಿಯ ಬೀಜ ಬಿತ್ತನೆ ಕಾರ್ಯಕ್ಕೆ ಆರ್‌ಎಸ್‌ಎಸ್ ಮಹತ್ವದ ಹೆಜ್ಜೆ ಇರಿಸಿದೆ.
ಕೋವಿಡ್ ನಂತರದಲ್ಲಿ ಪ್ರತಿಯೊಬ್ಬರು ಜೀವನಶೈಲಿ ಬಗ್ಗೆ ಆತ್ಮಾವಲೋಕನಕ್ಕಿಳಿಯಬೇಕಾಗಿದೆ. ಪ್ರಕೃತಿ ಮಾತೆಯ ಮಹತ್ವ ಹಾಗೂ ನಾವು ತೋರಬೇಕಾದ ಗೌರವ, ಪೋಷಣೆಯ ಜವಾಬ್ದಾರಿಯನ್ನು ಮುಂದಿನ ಪೀಳಿಗೆಗೆ ಮನವರಿಕೆ ಮಾಡಿಕೊಡಬೇಕಾಗಿದೆ. ಇದರ ಭಾಗವಾಗಿಯೇ ಸಂಘ ಪ್ರಕೃತಿ ವಂದನಾ ಕಾರ್ಯಕ್ರಮಕ್ಕೆ ಮುಂದಾಗಿದೆ. ಪರಿಸರ, ಕೃಷಿ, ಸಂಸ್ಕೃತಿ, ಸಂಸ್ಕಾರ, ಪರಂಪರೆ ಬಗ್ಗೆ ನಮ್ಮ ಪೂರ್ವಜರ ಭಾವನೆ, ಪರಿಕಲ್ಪನೆಯನ್ನು ನೆನಪಿಸುವ ಕಾರ್ಯವನ್ನು ಇದರ ಮೂಲಕ ಮಾಡಲಾಗುತ್ತಿದೆ.
– ಅಮರನಾಥ, ಪರ್ಯಾವರಣ ಸಂರಕ್ಷಣೆ ಗತಿ ವಿಧಿಯ ಉತ್ತರ ಪ್ರಾಂತ ಪ್ರಮುಖ
-ಅಮರೇಗೌಡ ಗೋನವಾರ