ಹೊಸದಿಲ್ಲಿ : ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಾನು ಸ್ಪರ್ಧಿಸುವುದಾಗಿ ಕೆಲ ದಿನಗಳ ಹಿಂದಷ್ಟೇ ಹೇಳಿದ್ದ ಬಹುಭಾಷಾ ಚಿತ್ರ ನಟ, ಪ್ರಗತಿಪರ ಚಿಂತಕ, ಕನ್ನಡಿಗ ಪ್ರಕಾಶ್ ರೈ (ರಾಜ್) ಅವರು ಇಂದಿಲ್ಲಿ ಆಮ್ ಆದ್ಮಿ ಪಕ್ಷದ ಮುಖ್ಯಸ್ಥರಾಗಿರುವ ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ರನ್ನು ಭೇಟಿಯಾಗಿ ಅನೇಕ ವಿಷಯಗಳ ಬಗ್ಗೆ ಚರ್ಚಿಸಿದರು.
ಕೇಂದ್ರದಲ್ಲಿ ಅಧಿಕಾರರೂಢವಾಗಿರುವ ಬಿಜೆಪಿ ಸರಕಾರದ ವಿರುದ್ಧ ಕಟು ಟೀಕಾಕಾರರಾಗಿ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಕಾಣಿಸಿಕೊಳ್ಳುತ್ತಿರುವ ಪ್ರಕಾಶ್ ರೈ ಅವರು ಕೇಜ್ರಿವಾಲ್ ಅವರನ್ನು ಇಲ್ಲಿನ ಸಿವಿಲ್ ಲೈನ್ಸ್‌ನಲ್ಲಿರುವ ಅವರ ನಿವಾಸದಲ್ಲಿ ಭೇಟಿಯಾದರು.
ಕಳೆದ ವಾರವಷ್ಟೇ ಪ್ರಕಾಶ್ ರೈ ಅವರು ತಾನು ಪಕ್ಷೇತರನಾಗಿ ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಹೇಳಿದ್ದರು.
ಪ್ರಕಾಶ್ ರೈ (ರಾಜ್) ಅವರು ತಮ್ಮ ಟ್ವೀಟ್‌ನಲ್ಲಿ ಹೀಗೆ ಬರೆದುಕೊಂಡಿದ್ದಾರೆ :
‘ಸಿಎಂ ಅರವಿಂದ ಕೇಜ್ರಿವಾಲರನ್ನು ಭೇಟಿಯಾದೆ. ನನ್ನ ರಾಜಕೀಯ ಪಯಣಕ್ಕೆ ಬೆಂಬಲ ನೀಡಿರುವ ಅವರಿಗೆ ಧನ್ಯವಾದಗಳು. ಅವರೊಂದಿಗೆ ಅನೇಕ ಸಮಸ್ಯಾತ್ಮಕ ವಿಷಯಗಳನ್ನು ಮತ್ತು ಅವುಗಳನ್ನು ಪರಿಹಸಿರುವ ಮಾರ್ಗೋಪಾಯಗಳನ್ನು ಚರ್ಚಿಸಿದೆ. ಈ ವಿಷಯದಲ್ಲಿ ಅವರ ತಂಡ ಮಾಡುತ್ತಿರುವ ಕೆಲಸ ಪ್ರಶಂಸಾರ್ಹವಾಗಿದೆ. ಸಂಸತ್ತಿನಲ್ಲಿ ಜನತಾ ಧ್ವನಿ ಇರಬೇಕೆಂದು ಕೇಳುತ್ತಿದ್ದೇನೆ’.
ಕನ್ನಡದ ಹಿರಿಯ ಪತ್ರಕರ್ತೆ, ಚಿಂತಕಿ ದಿವಂಗತ ಗೌರೀ ಲಂಕೇಶ್ ಹತ್ಯೆಗೆ ಸಂಬಂಧಿಸಿ ನ್ಯಾಯಕ್ಕಾಗಿ ಹೋರಾಡುತ್ತಿರುವವರಲ್ಲಿ ಪ್ರಕಾಶ್ ರೈ ಮುಂಚೂಣಿಯಲ್ಲಿದ್ದಾರೆ.