ರಾಣಿಬೆನ್ನೂರ: ಶೈಕ್ಷಣಿಕ ಪ್ರಗತಿ, ಆರೋಗ್ಯ ರಕ್ಷಣೆಯ ಜೊತೆಗೆ ತಾಲೂಕನ್ನು ನಿರುದ್ಯೋಗ ಮುಕ್ತ ಮಾಡುವ ಕನಸು ಕಂಡಿರುವ ಪಿಕೆಕೆ ಇನಿಷಿಯೇಟಿವ್ ಸಂಸ್ಥೆ ಅಧ್ಯಕ್ಷ ಹಾಗೂ ಕಾಂಗ್ರೆಸ್ ಯುವ ನಾಯಕ ಪ್ರಕಾಶ ಕೋಳಿವಾಡ ಅವರ ದೂರದೃಷ್ಟಿ ಇತರರಿಗೆ ಮಾದರಿಯಾಗಿದೆ ಎಂದು ಮಾಜಿ ಸಚಿವ ರುದ್ರಪ್ಪ ಲಮಾಣಿ ಹೇಳಿದರು.
ನಗರದ ಬಿ.ಕೆ. ಗುಪ್ತಾ ಹೈಸ್ಕೂಲ್ ಆವರಣದಲ್ಲಿ ಮಂಗಳವಾರ ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಬಿ. ಕೋಳಿವಾಡ ಅವರ 79ನೇ ಜನ್ಮದಿನದ ಅಂಗವಾಗಿ ಪಿಕೆಕೆ ಇನಿಷಿಯೇಟಿವ್ ಸಂಸ್ಥೆ ವತಿಯಿಂದ 79 ವಿವಿಧ ಸಂಸ್ಥೆಗಳಿಂದ ಏರ್ಪಡಿಸಿದ್ದ ಉದ್ಯೋಗ ಮೇಳ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಕೊರೊನಾ ಸಂಕಷ್ಟ ಸಮಯದಲ್ಲಿ ಪ್ರಾಣಾಪಾಯದಲ್ಲಿದ್ದ ರೋಗಿಗಳಿಗೆ ಆಕ್ಸಿಜನ್ ವಿತರಣೆ, ಗ್ರಾಮೀಣ ಭಾಗದ ಜನರ ಆರೋಗ್ಯ ರಕ್ಷಣೆಗೆ ಸಂಚಾರಿ ಆಸ್ಪತ್ರೆ, ನಿರುದ್ಯೋಗಿಗಳಿಗೆ ಕಳೆದ 10 ವರ್ಷಗಳಿಂದ ಉದ್ಯೋಗ ಮೇಳ, ಈ ಬಾರಿ ವಿಕಲಚೇತನರಿಗೂ ಅವಕಾಶ, ಪಶುಗಳ ಆರೋಗ್ಯ ರಕ್ಷಣೆಗಾಗಿ ವಿಜ್ಞಾನಿಗಳಿಂದ ಪಶು ವೈದ್ಯರಿಗೆ ತರಬೇತಿ, ಗ್ರಾಮೀಣ ಭಾಗದ ಕಲಾವಿದರನ್ನು ಗುರುತಿಸಲು ವೇದಿಕೆ ಸೃಷ್ಟಿಸಿ ತನ್ಮೂಲಕ ಚಲನಚಿತ್ರಗಳಲ್ಲಿ ಹಾಡುವ ಅವಕಾಶ ನೀಡಿದ ಹೆಗ್ಗಳಿಕೆ ಇವರದಾಗಿದೆ ಎಂದರು.
ಯುವ ನಾಯಕ ಪ್ರಕಾಶ ಕೋಳಿವಾಡ ಅವರು ಎಂದೂ ಸಹ ಸ್ವಾರ್ಥದ ರಾಜಕಾರಣ ಮಾಡಿಲ್ಲ. ಸಮಾಜದ ದೂರದೃಷ್ಟಿ ಇಟ್ಟುಕೊಂಡು ಬಡವರ, ನಿರ್ಗತಿಕರ, ಶ್ರೀಸಾಮಾನ್ಯರ, ರೈತರ ಹಾಗೂ ನಾಗರಿಕರ ಸೇವೆಯನ್ನು ವಿವಿಧ ಹಂತಗಳಲ್ಲಿ ಮಾಡುವುದರ ಮೂಲಕ ಸಾಮಾಜಿಕ ಕಳಕಳಿ ಹೊಂದಿದ್ದಾರೆ. ಅವರ ನಿಸ್ವಾರ್ಥ ಸೇವೆಯನ್ನು ತಾಲೂಕಿನ ಮಾಹಾಜನತೆ ಶ್ಲಾಘಿಸಿರುವುದು ಸ್ತುತ್ಯರ್ಹ ಎಂದರು. ಕಾಂಗ್ರೆಸ್ ನಾಯಕ ಸೋಮಣ್ಣ ಬೇವಿನಮರದ ಮಾತನಾಡಿ, ಪ್ರಧಾನಿ ಮೋದಿ 2014 ರಲ್ಲಿ ವರ್ಷಕ್ಕೆ 2 ಕೋಟಿ ಯುವಕರಿಗೆ ಉದ್ಯೋಗ ನೀಡಲಾಗುವುದು ಎಂದು ಸುಳ್ಳು ಹೇಳಿ ಅಧಿಕಾರಕ್ಕೆ ಬಂದವರು. ಆದರೆ, ಇಂದಿನವರೆಗೂ ಯಾವ ಯುವಕನಿಗೂ ಉದ್ಯೋಗ ನೀಡಿಲ್ಲ.
ಅವರ ಘೋಷಣೆಯಂತೆ ಇಲ್ಲಿಯವರೆಗೆ 16 ಕೋಟಿ ಉದ್ಯೋಗ ನೀಡಬೇಕಿತ್ತು. ಅದು ಆಯಿತೇ ಎಂದು ಪ್ರಶ್ನಿಸಿದರು. ಆದರೆ, ಪ್ರಕಾಶ ಕೋಳಿವಾಡ ಅವರು ಯಾರಿಗೂ ಮಾತು ಕೊಡದೆ ಸುಮಾರು 6 ಸಾವಿರಕ್ಕೂ ಅಧಿಕ ಯುವಕರಿಗೆ ಉದ್ಯೋಗ ಕೊಡಿಸುವಲ್ಲಿ ಸಫಲರಾಗಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ವಿಧಾನಸಭಾ ಮಾಜಿ ಅಧ್ಯಕ್ಷ ಕೆ.ಬಿ.ಕೋಳಿವಾಡ ಅವರು ಮಾತನಾಡಿ, ಕಳೆದ ದಶಕದಿಂದೀಚೆಗೆ ಯುವಪಡೆ ಕಟ್ಟಿಕೊಂಡು ಸಾಮಾಜಿಕ ಸೇವೆಯಲ್ಲಿ ತೊಡಗಿರುವ ಯುವ ನಾಯಕ ಪ್ರಕಾಶ ಕೋಳಿವಾಡ ಅವರು ಈ ಭಾಗದಲ್ಲಿ ಎಂದೂ ಸಹ ಬರಗಾಲ ಆವರಿಸದಂತೆ ಮೋಡ ಬಿತ್ತನೆಯ ಮೂಲಕ ಹಾವೇರಿ ಜಿಲ್ಲೆಯ ನಾಗರಿಕರಿಗೆ ಸಹಕಾರ ನೀಡಬೇಕು. ಮುಂದಿನ ದಿನಮಾನಗಳಲ್ಲೂ ಹೆಚ್ಚೆಚ್ಚು ಸಾಮಾಜಿಕ ಸೇವೆ ಮಾಡಲು ಪ್ರಕಾಶ ಅವರು ಮುಂದಾಗಬೇಕೆಂದರು.
ಮಾಜಿ ಶಾಸಕ ಅಜ್ಜಂಪೀರ ಖಾಜಿ, ಪಿಕೆಕೆ ಇನಿಷಿಯೇಟಿವ್ಸ್ ಅಧ್ಯಕ್ಷ ಪ್ರಕಾಶ ಕೋಳಿವಾಡ, ಗಂಗಾಧರ ಬಣಕಾರ ಮಾತನಾಡಿದರು. ಹಾವೇರಿ ನಗರಸಭಾ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಜಿಪಂ ಮಾಜಿ ಅಧ್ಯಕ್ಷರಾದ ಕೊಟ್ರೇಶಪ್ಪ ಬಸಗಣ್ಣಿ, ಏಕನಾಥ ಬಾನುವಳ್ಳಿ, ಎಂ.ಎಂ. ಹಿರೇಮಠ, ಎಚ್‌ಎಫ್ ಗಾಜಿಗೌಡ್ರ, ಶ್ರೀನಿವಾಸ ಸಾವುಕಾರ, ಇರ್ಫಾನ್ ದಿಂಡೂರ, ಸುಭಾಸ ಸಾವುಕಾರ, ಪುಟ್ಟಪ್ಪ ಮರಿಯಮ್ಮನವರ ಮತ್ತಿತರರು ಇದ್ದರು.ಇದೇ ಸಂದರ್ಭದಲ್ಲಿ ವಿವಿಧ ಕಂಪನಿಗಳ ಸಂದರ್ಶನದಲ್ಲಿ ಆಯ್ಕೆಯಾದ ಅಂಗವಿಕಲರು ಸೇರಿದಂತೆ ಅನೇಕ ಯುವಕರಿಗೆ ಆದೇಶ ಪತ್ರ ನೀಡಲಾಯಿತು.