ಬೆಂಗಳೂರು: ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ರೇವಣ್ಣ ಕೂಡ ವಿಧಾನಸಭೆ ಚುನಾವಣೆಗೆ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ ಎಂದು ಸ್ವತಃ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಭಾನುವಾರ ಬೆಂಗಳೂರಿನ ಮಲ್ಲೇಶ್ವರ, ದಾಸರಹಳ್ಳಿ, ಯಲಹಂಕ, ರಾಜರಾಜೇಶ್ವರಿ ನಗರ ಹಾಗೂ ಹೆಬ್ಟಾಳ ಐದು ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಸಭೆ ನಡೆಸಿ, ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಕ್ಕೆ ಪ್ರಜ್ವಲ್ ರೇವಣ್ಣ ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಈ ಬಗ್ಗೆ ಕಾರ್ಯಕರ್ತರ ಜತೆ ಮಾತುಕತೆ ನಡೆಸಿ ನಂತರ ಯಾರಿಗೆ ಟಿಕೆಟ್ ನೀಡಬೇಕೆನ್ನುವುದನ್ನು ನಿರ್ಧಾರ ಮಾಡುತ್ತೇವೆ ಎಂದು ಹೇಳಿದರು. ಡಿಸೆಂಬರ್ ಅಂತ್ಯದೊಳಗೆ ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡುತ್ತೇವೆ. ಆ ನಂತರ ಎರಡನೇ ಹಂತದ ಕುಮಾರಪರ್ವ ಯಾತ್ರೆ ಆರಂಭಿಸುವುದಾಗಿ ಹೇಳಿದರು.
ಮೈತ್ರಿ ಇಲ್ಲ: ನಾವು 224 ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳನ್ನು ಹಾಕುತ್ತೇವೆ. ನಾವು ಯಾವ ಪಕ್ಷದ ಜೊತೆಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ. ನಟ ಉಪೇಂದ್ರ ಅವರ ಕೆಪಿಜೆಪಿ ಪಕ್ಷದ ಸಿದ್ಧಾಂತಕ್ಕೂ ನಮ್ಮ ಸಿದ್ಧಾಂತಕ್ಕೂ ಹೊಂದಾಣಿಕೆ ಆಗುವುದಿಲ್ಲ ಎಂದರು. ಆಪರೇಷನ್ ಕಮಲದ ವಿಷಯದಲ್ಲಿ ನಾನು ಯಾರ ಹೆಸರನ್ನೂ ಹೇಳಿಲ್ಲ. ಜಾಫರ್ ಷರೀಫ್ ಹಾಗೂ ಡಿ.ಕೆ. ಶಿವಕುಮಾರ್ ಹೆಸರನ್ನೂ ಹೇಳಿಲ್ಲ ಎಂದರು. ಎಲ್ಲ ಪಕ್ಷಗಳಿಗೂ ಯಾತ್ರೆ ಮಾಡುವ ಸ್ವಾತಂತ್ರ್ಯ ಇದೆ. ಮುಖ್ಯಮಂತ್ರಿ ಯಾತ್ರೆಗೆ ಯಾರದೋ ದುಡ್ಡಿನಲ್ಲಿ ಎಲ್ಲಮ್ಮನ ಜಾತ್ರೆ ಮಾಡಲು ಹೊರಟಿದ್ದಾರೆ ಎಂದು ಟೀಕಿಸಿದರು. ಇದೇ ಸಂದರ್ಭದಲ್ಲಿ ಜೆಡಿಎಸ್‌ಗೆ ದಲಿತರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಿಸಲಿ ಎಂದು ಹೇಳಿರುವ ಬಂಡಾಯ ಶಾಸಕ ಜಮೀರ್ ನಮ್ಮ ಪಕ್ಷದ ಬಗ್ಗೆ ಮಾತನಾಡಲು ಅವರ್ಯಾರು ? ಜಮೀರ್ ತುಂಬಾ ಕಷ್ಟ ಪಟ್ಟು ಪಕ್ಷ ಕಟ್ಟಿದ್ದಾರೆ. ಅವರ ಯಾವುದೇ ಹೇಳಿಕೆಗಳಿಗೂ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ನೀವೂ ಕೇಳಬೇಡಿ ಎಂದು ಕುಮಾರಸ್ವಾಮಿ ತಿಳಿಸಿದರು.
ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ದಲಿತರಿಗೆ ಘೋಷಿಸಲಿ: ಜಮೀರ್
ಮಂಡ್ಯ: ಜೆಡಿಎಸ್ ಅಧಿಕಾರಕ್ಕೆ ಬಂದರೆ ದಲಿತರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವುದಾಗಿ ಘೋಷಿಸಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮೊದಲು ದಲಿತ ಅಥವಾ ಮುಸಲ್ಮಾನರೊಬ್ಬರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡಲಿ ಎಂದು ಜೆಡಿಎಸ್ ಭಿನ್ನಮತೀಯ ಶಾಸಕ ಜಮೀರ್ ಅಹಮದ್ ಸವಾಲು ಹಾಕಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಪ್ರಮುಖ ಹುದ್ದೆಗಳೆಲ್ಲ ಕುಟುಂಬದವರ ಕೈಯಲ್ಲೇ ಇವೆ. ಹೀಗಿರುವಾಗ ಅಧಿಕಾರ ವಿಕೇಂದ್ರೀಕರಣ ಮತ್ತು ಪಕ್ಷದ ಬೆಳವಣಿಗೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯ ಆಪರೇಷನ್ ಕಮಲಕ್ಕೆ ಬೆಂಬಲ ವ್ಯಕ್ತಪಡಿಸಿದ್ದನ್ನು ಕುಮಾರಸ್ವಾಮಿ ಈಗ ಹೇಳಲು ಹೊರಟಿದ್ದಾರೆ. ಹತ್ತು ವರ್ಷಗಳಿಂದ ಏಕೆ ಹೇಳಲಿಲ್ಲವೆಂದು ಪ್ರಶ್ನಿಸಿದ ಜಮೀರ್, ಕುಮಾರಸ್ವಾಮಿ ಅವರದ್ದು ಸಮಯಕ್ಕೊಂದು ಸುಳ್ಳಿನ ರಾಜಕಾರಣ ಎಂದು ವ್ಯಂಗ್ಯವಾಡಿದರು.
ಜೆಡಿಎಸ್ ಪಕ್ಷ ಕುಟುಂಬ ರಾಜಕಾರಣಕ್ಕೆ ಹೆಸರುವಾಸಿಯಾಗಿದೆ. ಪ್ರಮುಖ ಸ್ಥಾನಗಳನ್ನು ಕುಟುಂಬದವರಿಗೇ ಮೀಸಲಿಟ್ಟಿದೆ. ಜೆಡಿಎಸ್‌ನಿಂದ ಎಂದಿಗೂ ಸಾಮಾಜಿಕ ನ್ಯಾಯ ನೀಡಲು ಸಾಧ್ಯವಿಲ್ಲ. ಅದನ್ನು ಕೊಡಲು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ.
●ಚೆಲುವರಾಯಸ್ವಾಮಿ, ಜೆಡಿಎಸ್ ಭಿನ್ನಮತೀಯ ಶಾಸಕ