ಹೊಸದಿಲ್ಲಿ: ರಾಷ್ಟ್ರಪಿತ ಮಹಾತ್ಮಾ ಗಾಂಧಿ ಹಂತಕ ನಾಥೂರಾಂ ಗೋಡ್ಸೆಯನ್ನು ದೇಶಭಕ್ತ ಎಂದು ಕರೆದಿದ್ದ ಬಿಜೆಪಿ ಸಂಸದೆ ಪ್ರಜ್ಞಾ ಠಾಕೂರ್ ಕ್ಷಮೆ ಕೋರಿದ್ದಾರೆ.
ಇಂದು ಸದನದ ಕಲಾಪದ ಸಮಯದಲ್ಲಿ ಮಾತನಾಡಿದ ಪ್ರಜ್ಞಾ ಠಾಕೂರ್ , ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ನಾನು ಕ್ಷಮೆ ಕೇಳುತ್ತೇನೆ. ಆದರೆ ನನ್ನ ಹೇಳಿಕೆಯನ್ನು ತಿರುಚಿ ತಪ್ಪಾಗಿ ವಿಶ್ಲೇಷಿಸಿದ್ದಾರೆ. ಇದು ಖಂಡನೀಯ ಎಂದರು.
ಪ್ರಜ್ಞಾ ಸಿಂಗ್ ಅವರ ಈ ಹೇಳಿಕೆಯನ್ನು ಖಂಡಿಸಿ ಲೋಕಸಭೆಯಲ್ಲಿ ವಿಪಕ್ಷಗಳು ಭಾರಿ ಗದ್ದಲ ಉಂಟು ಮಾಡಿದ್ದವು. ಪ್ರಜ್ಞಾ ಅವರ ಹೇಳಿಕೆಯನ್ನು ಕೇಂದ್ರ ಸಚಿವರೂ ಖಂಡಿಸಿದ್ದು, ರಕ್ಷಣಾ ಸಮಿತಿಯಿಂದಲೂ ಕೋಕ್ ಕೊಡಲಾಗಿತ್ತು.
ಸಂಸದೆ ಪ್ರಜ್ಞಾ ಠಾಕೂರ್ ಅವರನ್ನು ಭಯೋತ್ಪಾದಕಿ ಎಂದು ಕರೆದಿದ್ದ ರಾಹುಲ್ ಗಾಂಧಿ, ಪ್ರಜ್ಞಾ ಹೇಳಿಕೆಯಲ್ಲಿ ಬಿಜೆಪಿ ಮತ್ತು ಆರ್ ಎಸ್ ಎಸ್ ನ ಆತ್ಮ ಮತ್ತು ಹೃದಯ ಅಡಗಿದೆ ಕಂಡು ಬರುತ್ತಿದೆ ಎಂದು ಟೀಕಿಸಿದ್ದರು. ಇದಕ್ಕೆ ಉತ್ತರಿಸಿದ ಪ್ರಜ್ಞಾ ಠಾಕೂರ್, ನನ್ನನ್ನು ಭಯೋತ್ಪಾದಕಿ ಎಂದು ಕೆಲವರು ಕರೆದರು. ಆದರೆ ಹಾಗೆ ಕರೆಯಲು ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ ಎಂದರು.