ವಿರಾಟ್ ಕೊಹ್ಲಿ ನೇತೃತ್ವದ ಭಾರತೀಯ ಕ್ರಿಕೆಟ್ ತಂಡ ಒಂದು ವಿಚಿತ್ರ ಸ್ಥಿತಿಯಲ್ಲಿದೆ. ಈ ತಂಡವನ್ನು ಬೈಯುವ ಟೀಕಾಕಾರರು ಪದೇ ಪದೇ ಬೇಸ್ತು ಬೀಳುತ್ತಿದ್ದಾರೆ. ಅಚ್ಚರಿಯೆಂದರೆ ಈ ಟೀಕಾಕಾರರೆಲ್ಲ ಗೆದ್ದಾಗ ವಿಪರೀತ ಎನ್ನುವಷ್ಟು ಹೊಗಳುತ್ತಾರೆ, ಸೋತಾಗ ವಿಪರೀತ ಎನ್ನುವಷ್ಟು ಬೈಯುತ್ತಾರೆ. ಇವರ ಬೈಗುಳದ ಬೆನ್ನಲ್ಲೇ ತಂಡ ಗೆಲ್ಲುತ್ತದೆ, ಅವರಿಂದ ಬೈಸಿಕೊಂಡ ಆಟಗಾರರು ಅದ್ಭುತ ಪ್ರದರ್ಶನ ನೀಡಿರುತ್ತಾರೆ. ಟೀಕಾಕಾರರು ತಬ್ಬಿಬ್ಟಾಗಿ ನಿಲ್ಲುತ್ತಾರೆ.
ಈ ಬಾರಿಯ ಇಂಗ್ಲೆಂಡ್ ಪ್ರವಾಸದಲ್ಲೂ ಹೀಗೆಯೇ ಆಯಿತು. ಸರಣಿಯ ಆರಂಭದಲ್ಲಿ ಭಾರತ 2-1ರಿಂದ ಟಿ20 ಸರಣಿಯನ್ನು ಗೆದ್ದಿತು. ನಂತರ ಏಕದಿನ ಸರಣಿಯನ್ನು 2-1ರಿಂದ ಸೋತು ಹೋಯಿತು. ಟಿ20 ಗೆದ್ದಾಗ ಹೊಗಳಿದ್ದವರು ಏಕದಿನ ಸೋತಾಗ ತಣ್ಣಗಿದ್ದರು. ಇನ್ನೇನು ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳನ್ನು ಭಾರತ ಹೀನಾಯವಾಗಿ ಸೋತಾಗ ಹರ್ಭಜನ್ ಸಿಂಗ್, ಸಂದೀಪ್ ಪಾಟೀಲ್, ವೆಸ್ಟ್ ಇಂಡೀಸ್‌ನ ಮೈಕೆಲ್ ಹೋಲ್ಡಿಂಗ್ ಎಲ್ಲರೂ ಮುಗಿಬಿದ್ದರು. ಭಾರತ ಇಂಗ್ಲೆಂಡ್‌ಗೆ ತೆರಳಿದ್ದು ಕಾಫಿ ಕುಡಿಯಲಿಕ್ಕೆ ಎಂದು ಸಂದೀಪ್ ಪಾಟೀಲ್ ಟೀಕಿಸಿದರು. ಇದು ನೇರವಾಗಿ ನಾಯಕ ವಿರಾಟ್ ಕೊಹ್ಲಿಯನ್ನೇ ಹಿಡಿದು ಹೇಳಿದ್ದಾಗಿತ್ತು. ಅದಕ್ಕೆ ಕೊಹ್ಲಿ ಯಾವ ಪ್ರತಿಕ್ರಿಯೆಯನ್ನೂ ನೀಡಲಿಲ್ಲ.
ಮತ್ತೂಂದು ಕಡೆ ಹಾರ್ದಿಕ್ ಪಾಂಡ್ಯರನ್ನು ಆಲ್‌ರೌಂಡರ್ ಅಂತ ಯಾಕೆ ಕರೀತೀರಿ? ಅವರ ಹೆಸರಿನಿಂದ ಅದನ್ನು ತೆಗೆದುಬಿಡಿ ಎಂದು ಹರ್ಭಜನ್ ತೆಗಳಿದ್ದರು. ಮೈಕೆಲ್ ಹೋಲ್ಡಿಂಗ್ ಕೂಡ ಹಾರ್ದಿಕ್ ಮರು ಆಯ್ಕೆ ಬಗ್ಗೆ ವ್ಯಂಗ್ಯ ಮಾಡಿದ್ದರು. ಭಾರತೀಯ ಕ್ರಿಕೆಟ್ ತಂಡ ತನ್ನ ಆಟದಿಂದಲೇ ಇದಕ್ಕೆ ಉತ್ತರ ನೀಡಿತು. 3ನೇ ಟೆಸ್ಟ್‌ನಲ್ಲಿ ಇಂಗ್ಲೆಂಡನ್ನು ಹೀನಾಯ 203 ರನ್‌ಗಳಿಂದ ಸೋಲಿಸಿತು. ಈ ಟೆಸ್ಟ್‌ನಲ್ಲಿ ಕೊಹ್ಲಿ 97 ಮತ್ತು 103 ರನ್ ಬಾರಿಸಿದರು. ಬೈಸಿಕೊಂಡಿದ್ದ ಹಾರ್ದಿಕ್ ಪಾಂಡ್ಯ ಮೊದಲ ಇನಿಂಗ್ಸ್‌ನಲ್ಲಿ ಶ್ರೇಷ್ಠ ಬೌಲಿಂಗ್ ಮಾಡಿ 5 ವಿಕೆಟ್ ಪಡೆದು ಇಂಗ್ಲೆಂಡ್ ಪತನಕ್ಕೆ ಕಾರಣವಾಗಿದ್ದರು. ನಂತರ ಅವರು 52 ರನ್ ಬಾರಿಸಿ ಬ್ಯಾಟಿಂಗ್‌ನಲ್ಲೂ ಮಿಂಚಿದರು. ಅಲ್ಲಿಗೆ ಅವರು ಆಲ್‌ರೌಂಡರ್ ಎನ್ನುವುದು ಸಾಬೀತಾಯಿತು. ಈಗ ಮತ್ತೆ ಹೊಗಳುಭಟರು ತಮ್ಮ ಕರ್ತವ್ಯ ಶುರು ಮಾಡಿಕೊಂಡಿದ್ದಾರೆ. ಬೈದವರೆಲ್ಲ ಮುಖಮುಚ್ಚಿಕೊಂಡು ಕೂತಿದ್ದಾರೆ. ಬೈಯಲಿಕ್ಕೆ ಇವರಿಗೆಲ್ಲ ಯಾಕಿಷ್ಟು ಆತುರ?
ಭಾರತ ಈ ವರ್ಷದ ಆರಂಭದಲ್ಲೇ ದ.ಆಫ್ರಿಕಾ ಪ್ರವಾಸ ಹೋಗಿದ್ದಾಗಲೂ ಇಂತಹದ್ದೇ ಪರಿಸ್ಥಿತಿ ಎದುರಿಸಿತ್ತು. ಆರಂಭದ ಎರಡು ಟೆಸ್ಟ್ ಪಂದ್ಯಗಳಲ್ಲಿ ತಂಡ ಸೋತಾಗ ಟೀಕಾಕಾರರು ಬೇಕಾಬಿಟ್ಟಿ ಟೀಕಿಸಿದ್ದರು. 3ನೇ ಪಂದ್ಯವನ್ನು ಭಾರತ ಗೆದ್ದು, ಮುಂದೆ 7 ಪಂದ್ಯಗಳ ಏಕದಿನ ಸರಣಿಯನ್ನು 5-1ರಿಂದ, 3 ಪಂದ್ಯಗಳ ಟಿ20 ಸರಣಿಯನ್ನು 2-1ರಿಂದ ಜೈಸಿದಾಗ ಟೀಕಾಕಾರರು ಗಪ್‌ಚುಪ್. ಮೊದಲು ಬೈದವರಿಗೆ ನಂತರ ಮಾತೇ ಇರಲಿಲ್ಲ. ಹೌದು. ಕೊಹ್ಲಿ ನೇತೃತ್ವದ ಭಾರತೀಯ ತಂಡ ವಿದೇಶಿ ಪ್ರವಾಸದ ಮಟ್ಟಿಗೆ ಅಂತಹ ಅನುಭವಿಯೇನಲ್ಲ. ಹಾಗಾಗಿ ಇದರ ಟೆಸ್ಟ್ ಗೆಲುವಿನ ಬಗ್ಗೆ ಖಾತ್ರಿ ಹೇಳಲಾಗದು. ಏಕದಿನ ಮತ್ತು ಟಿ20ಯಲ್ಲಂತೂ ಈ ತಂಡ ನಿರಾಸೆ ಮಾಡುವುದಿಲ್ಲ. ಕಾಲಕ್ರಮೇಣ ಟೆಸ್ಟ್‌ನಲ್ಲೂ ಕುದುರಿಕೊಳ್ಳುವ ಬಗ್ಗೆ ಯಾರಿಗೂ ಅನುಮಾನ ಬೇಡ. ಅದಕ್ಕೆ ದ.ಆಫ್ರಿಕಾ ಮತ್ತು ಇಂಗ್ಲೆಂಡ್‌ನಲ್ಲಿ 3ನೇ ಟೆಸ್ಟನ್ನು ಗೆದ್ದಿರುವ ರೀತಿಯೇ ಸಾಕ್ಷಿ. ಸ್ವಲ್ಪ ತಾಳ್ಮೆಯಿಟ್ಟುಕೊಂಡು ಕಾದರೆ ಭಾರತೀಯರು ನಿರೀಕ್ಷಿತ ಫಲಿತಾಂಶ ನೀಡುವುದರಲ್ಲಿ ಅನುಮಾನವಿಲ್ಲ. ಅದಕ್ಕೆಲ್ಲ ತಾಳ್ಮೆಯಿಲ್ಲವೆಂಬಂತೆ ಮಾಜಿ ಆಟಗಾರರು ಹೀಗ್ಯಾಕೆ ಟೀಕಿಸುತ್ತಾರೆ ಎಂಬುದು ಅರಿವಾಗುವುದಿಲ್ಲ. ಹಿಂದೆ ಇದೇ ಆಟಗಾರರು ಭಾರತ ತಂಡದ ಸದಸ್ಯರಾಗಿದ್ದಾಗ ವಿದೇಶ ಪ್ರವಾಸದಲ್ಲಿ ಏನೇನು ಅನುಭವಿಸಿದ್ದರು, ಆಗ ಹೇಗೆಲ್ಲ ಟೀಕೆಗಳು ಬಂದಿದ್ದವು ಎಂಬುದೆಲ್ಲ ಇವರಿಗೆ ಮರೆತೇ ಹೋದವೇ? ಆಗ ಅವರೂ ಕಳಪೆ ಪ್ರದರ್ಶನ ನೀಡಿದ್ದು ನೆನಪೇ ಇಲ್ಲವೇ? ಗೆದ್ದಾಗ ಯಾಕೆ ಹೊಗಳುತ್ತಾರೆ? ಸೋತಾಗ ಯಾಕೆ ಬೈಯುತ್ತಾರೆ?
ನಿರೂಪ