ಮಂಗಳೂರು: ‘ಹಿಂದೂಸ್ಥಾನದ ರಾಜಕೀಯಕ್ಕೆ ನರೇಂದ್ರ ಮೋದಿ ಒಬ್ಬನೇ ಸಾಕು. ಈ ದೇಶಕ್ಕೆ ಅವನೊಬ್ಬ ವಜ್ರವಿದ್ದಂತೆ !’ ದೇಶ ಕಂಡಿರುವ ಅತ್ಯಂತ ಪ್ರಭಾವಿ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ನರೇಂದ್ರ ಮೋದಿ ಅವರ ಬಗ್ಗೆ ಸ್ವತಃ ಅವರ ಸಹೋದರ ಪ್ರಹ್ಲಾದ್ ದಾಮೋದರ ದಾಸ್ ಮೋದಿ ಹೇಳಿದ ಹೆಮ್ಮೆಯ ಮಾತಿದು. ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಮಂಗಳೂರಿಗೆ ಆಗಮಿಸಿದ್ದ ಪ್ರಹ್ಲಾದ್ ಮೋದಿ
‘ಉದಯವಾಣಿ’ಗೆ ವಿಶೇಷ ಸಂದರ್ಶನ ನೀಡಿದ್ದಾರೆ. ಈ ವೇಳೆ ಅವರು ತನ್ನ ಸಹೋದರ, ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಖುಷಿಯ ವಿಚಾರಗಳನ್ನು ಹಂಚಿಧಿಕೊಂಡಿದ್ದಾರೆ. ಪ್ರಹ್ಲಾದ್ ಅವರು ಸಹೋದರ ನರೇಂದ್ರ ಮೋದಿ ಬಗ್ಗೆ ಹೇಳಿದ್ದು ಇಷ್ಟು…
ನರೇಂದ್ರನಂತೆ ರಾಜಕೀಯಕ್ಕೆ ಬರುವ ಆಸಕ್ತಿ ನನಗಿಲ್ಲ; ಅದರ ಆವಶ್ಯಕತೆಯೂ ಇಲ್ಲ. ಹಿಂದೂಸ್ಥಾನದ ರಾಜಕೀಯಕ್ಕೆ ತಾಯಿ ಹೀರಾಬೆನ್ ಮಕ್ಕಳಲ್ಲಿ ನರೇಂದ್ರ ಒಬ್ಬನೇ ಸಾಕು. ಅವನೇ ಈ ದೇಶ ಮುನ್ನಡೆಸುವ ಸಾಮರ್ಥ್ಯ ಹೊಂದಿದ್ದಾನೆ. ಹೀಗಿರುವಾಗ ಕುಟುಂಬದವರನ್ನೆಲ್ಲ ಅದಕ್ಕೆ ಸೇರಿಸುವ ಅಗತ್ಯವಿಲ್ಲ.
ನಾನೊಬ್ಬ ಈ ದೇಶದ ಪ್ರಧಾನಿಯ ಸಹೋದರ ಎಂಬ ಮಾತ್ರಕ್ಕೆ ನನಗೆ ಅದೇ ರೀತಿ ಸ್ಥಾನ-ಮಾನ ಅಥವಾ ಭದ್ರತೆ ನಿರೀಕ್ಷಿಸುವುದು ಸರಿಯಲ್ಲ. ನಾನು ಕೂಡ ಈ ದೇಶದ ಒಬ್ಬ ಸಾಮಾನ್ಯ ನಾಗರಿಕ. ಹೀಗಿರುವಾಗ ಪ್ರಧಾನಿಯ ಸಹೋದರ ಎಂಬ ಯೋಚನೆ ಅಥವಾ ದರ್ಪ ನನಗಿಲ್ಲ. ಎಲ್ಲೇ ಹೋದರೂ ಸಾಮಾನ್ಯ ಪ್ರಜೆಯಂತೆ ಹೋಗುತ್ತೇನೆ. ಕುಟುಂಬದವರೊಬ್ಬ ದೊಡ್ಡ ಸ್ಥಾನದಲ್ಲಿದ್ದಾಗ ಕುಟುಂಬದವರಿಗೂ ಅದೇ ರೀತಿಯ ಭದ್ರತೆ, ಸ್ವಾಗತ ಮಾಡಬೇಕು ಎಂಬ ಯೋಚನೆಯನ್ನೇ ನಾವು ಬಿಟ್ಟು ಬಿಡಬೇಕು. ಹೀಗಾಗಿ ಸಾಮಾನ್ಯನಂತೆ ನನ್ನ ಕುಟುಂಬಸ್ಥರ ಜತೆಗೆ ತೀರ್ಥಯಾತ್ರೆಗೆ ಮಂಗಳೂರಿಗೂ ಬಂದಿದ್ದೇನೆ.
ನಿಮ್ಮ ಸಹೋದರ (ವರದಿಗಾರರಿಗೆ) ಈ ದೇಶದ ಪ್ರಧಾನಿಯಾದರೆ ಎಷ್ಟು ಖುಷಿಧಿಯಾಗಬಹುದು ಹೇಳಿ? ಅದೇ ರೀತಿ ನರೇಂದ್ರ ಪ್ರಧಾನಿಯಾಗಿರುವುದಕ್ಕೆ ಅವನ ಸಹೋದರನಾಗಿ ನನಗೂ ಅಷ್ಟೇ ಖುಷಿಯಾಗಿದೆ. ಅವನೇನೂ ನನ್ನ ಶತ್ರುವಲ್ಲ ತಾನೇ? ಹೀಗಿರುವಾಗ ಅವನು ಈ ದೇಶದ ಪ್ರಧಾನಿ ಹುದ್ದೆ ಅಲಂಕರಿಸಿಕೊಂಡಾಗ ಆದ ಸಂತೋಷ ವಿವರಿಸುವುದಕ್ಕೆ ನಿಲುಕದು.
ಮಂಗಳೂರು ತುಂಬಾ ಚೆನ್ನಾಗಿದ್ದು ಇಷ್ಟೊಂದು ಸುಂದರ ನಗರಕ್ಕೆ ಬಂದಿರುವುದಕ್ಕೆ ತುಂಬಾ ಖುಷಿಯಾಗಿದೆ. ಮಂಗಳೂರಿಗೆ ಇದು ನನ್ನ ಮೊದಲ ಭೇಟಿಯೇನಲ್ಲ. ತುಂಬಾ ವರ್ಷಗಳ ಹಿಂದೆಯೂ ಇಲ್ಲಿಗೆ ಭೇಟಿ ನೀಡಿದ್ದೆ. ಸೋಮವಾರವಷ್ಟೇ ಕುಟುಂಬ ಸಹಿತವಾಗಿ ಇಲ್ಲಿಗೆ ಬಂದಿದ್ದು ಕದ್ರಿ, ಕುದ್ರೋಳಿ ಮುಂತಾದ ದೇವಸ್ಥಾನಗಳಿಗೆ ಹೋಗಿ ದೇವರ ದರ್ಶನ ಪಡೆದುಕೊಂಡೆವು. ಇಲ್ಲಿಂದ ನಾವು ಕರ್ನಾಟಕದ ಇತರ ತೀರ್ಥಕ್ಷೇತ್ರಗಳಿಗೆ ಹಾಗೂ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತೇವೆ.
ಪ್ರಹ್ಲಾದ್ ಮೋದಿ ಬಗ್ಗೆ
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಒಟ್ಟು ಮೂವರು ಸಹೋದರರಿದ್ದು, ಅವರಲ್ಲಿ ಆರೋಗ್ಯ ಇಲಾಖೆ ನಿವೃತ್ತ ಅಧಿಕಾರಿಯಾಗಿರುವ ಸೋಮಾ ಅತ್ಯಂತ ಹಿರಿಯರು. ಸದ್ಯ ಅವರು ಅಹ್ಮದಾಬಾದ್‌ನಲ್ಲಿ ಹಿರಿಯ ನಾಗರಿಕರ ಆಶ್ರಮ ನಡೆಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮಧ್ಯಮ ಸಹೋದರನೇ ಈ ಪ್ರಹ್ಲಾದ್ ದಾಮೋದರ ದಾಸ್ ಮೋದಿ. ಇವರು ಎಷ್ಟೊಂದು ಸರಳ ವ್ಯಕ್ತಿ ಅಂದರೆ, ಅಹ್ಮದಾಬಾದ್‌ನಲ್ಲಿ ಈಗಲೂ ನ್ಯಾಯ ಬೆಲೆ ಅಂಗಡಿಯಿಟ್ಟು ನಡೆಸುತ್ತಿದ್ದಾರೆ ಹಾಗೂ ನ್ಯಾಯಬೆಲೆ ಅಂಗಡಿ ಮಾಲಕರ ಸಂಘದ ಮುಖಂಡರಾಗಿದ್ದಾರೆ. ಇನ್ನು ಕೊನೆಯ ಸಹೋದರ ಪಂಕಜ್ ಮೋದಿ ಅವರು ಗಾಂಧಿನಗರ ವಾರ್ತಾ ಇಲಾಖೆ ಕೇಂದ್ರ ಕಚೇರಿಯಲ್ಲಿ ಗುಮಾಸ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ದೇವಸ್ಥಾನಗಳ ದರ್ಶನ
ವಿವಿಧ ರಾಜ್ಯಗಳ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಉದ್ದೇಶದೊಂದಿಗೆ ಕುಟುಂಬ ಸಮೇತರಾಗಿ ಪ್ರಹ್ಲಾದ್ ಮೋದಿ ಎ. 17ರಂದು ಮಂಗಳೂರಿಗೆ ಆಗಮಿಸಿದ್ದರು. ವಿಶ್ವ ಪ್ರಸಿದ್ಧ ಹಂಪಿಗೂ ಅವರು ಭೇಟಿ ನೀಡಿದ್ದರು. ಮುಂದೆ ಅವರು ಬೇಲೂರು-ಹಳೇಬೀಡು, ಶ್ರವಣ ಬೆಳಗೊಳ ಮುಂತಾದೆಡೆ ಪ್ರವಾಸ ಕೈಗೊಂಡಿದ್ದಾರೆ.
– ಭರತ್‌ರಾಜ್ ಕಲ್ಲಡ್ಕ