ಧಾರವಾಡ: ಮುಂಬರುವ ಚುನಾವಣೆ ನಂತರ ಉತ್ತರ ಕರ್ನಾಟಕ ಭಾಗದವರು ಸಿಎಂ ಆಗಬಹುದು ಎಂದು ಸಚಿವರಾದ ಉಮೇಶ ಕತ್ತಿ ಹೇಳಿರಬಹುದು. ಉತ್ತರ ಕರ್ನಾಟಕ ಭಾಗದವರು ಈ ಅವಧಿಯಲ್ಲೇ ಸಿಎಂ ಆಗುತ್ತಾರೆ ಎಂದು ಕತ್ತಿ ಹೇಳಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಉಮೇಶ ಕತ್ತಿ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಅವಧಿಯಲ್ಲೇ ಉತ್ತರ ಕರ್ನಾಟಕ ಭಾಗದವರು ಸಿಎಂ ಆಗುತ್ತಾರೆ ಎಂದು ಕತ್ತಿ ಅವರ ಹೇಳಿಕೆಯನ್ನು ಅರ್ಥೈಸಿಕೊಳ್ಳಬಾರದು ಎಂದರು.
ಸಿಎಂ ಕುಟುಂಬ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿದ ಜೋಶಿ, ಕಾಂಗ್ರೆಸ್ ಮತ್ತು ಭ್ರಷ್ಟಾಚಾರ ಎರಡೂ ಒಂದೇ ನಾಣ್ಯದ ಎರಡು ಮುಖಗಳು. ಕಾಂಗ್ರೆಸ್‌ನವರು ಭ್ರಷ್ಟಾಚಾರದ ರಕ್ತ ಬೀಜಾಸುರರಿದ್ದಂತೆ ಎಂದರು.
ಇದನ್ನೂ ಓದಿ : LPG ಸಬ್ಸಿಡಿ ಬರುತ್ತಿದೆಯೇ, ಇಲ್ಲವೇ..? ಹೇಗೆ ನೋಡುವುದು..? ಇಲ್ಲಿದೆ ಮಾಹಿತಿ
ಕಳೆದ 7 ವರ್ಷಗಳಿಂದ ನಾವು ಕೇಂದ್ರದಲ್ಲಿ ಆಡಳಿತ ನಡೆಸುತ್ತಿದ್ದೇವೆ. ಯಾವುದೇ ಒಬ್ಬ ಸಚಿವರ ಮೇಲೂ ಕಾಂಗ್ರೆಸ್‌ನವರಿಗೆ ಆರೋಪ ಮಾಡಲು ಭ್ರಷ್ಟಾಚಾರದ ಘಟನೆಗಳೇ ಸಿಕ್ಕಿಲ್ಲ. ಸದ್ಯ ಸಿಎಂ ಕುಟುಂಬದ ಮೇಲೆ ಆರೋಪ ಮಾಡುತ್ತಿರುವ ಕಾಂಗ್ರೆಸ್ ತನ್ನ ಬಳಿ ಏನಾದರೂ ದಾಖಲೆಗಳಿದ್ದರೆ ನೀಡಲಿ ಅದು ತನಿಖೆಯಾಗುತ್ತದೆ ಎಂದರು.