ನವದೆಹಲಿ: ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ ನಾಲ್ಕು ರಾಜ್ಯಗಳ ಚುನಾವಣೆಗೆ ಬಿಜೆಪಿ ಈಗಾಗಲೇ ಸಿದ್ಧತೆ ಶುರು ಮಾಡಿದೆ. ಮೊದಲ ಹಂತವಾಗಿ ಚುನಾವಣಾ ಉಸ್ತುವಾರಿಗಳನ್ನು ನೇಮಿಸಿದೆ. ರಾಜಸ್ಥಾನಕ್ಕೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿಯನ್ನು, ಮಧ್ಯಪ್ರದೇಶಕ್ಕೆ ಭೂಪೇಂದ್ರ ಯಾದವ್‌ರನ್ನು, ತೆಲಂಗಾಣಕ್ಕೆ ಕೇಂದ್ರದ ಮಾಜಿ ಸಚಿವ ಪ್ರಕಾಶ್ ಜಾವಡೇಕರ್, ಹಿರಿಯ ನಾಯಕ ಓಂ ಪ್ರಕಾಶ್ ಮಾಥುರ್‌ರನ್ನು ಛತ್ತೀಸಗಢಕ್ಕೆ ಉಸ್ತುವಾರಿಗಳನ್ನಾಗಿ ನೇಮಿಸಲಾಗಿದೆ.
ಗುಜರಾತ್ ಮಾಜಿ ಉಪಮುಖ್ಯಮಂತ್ರಿ ನಿತಿನ್ ಪಟೇಲ್, ಹರ್ಯಾಣ ನಾಯಕ ಕುಲದೀಪ್ ಬಿಷ್ಣೋಯಿ ರಾಜಸ್ಥಾನಕ್ಕೆ ಸಹ ಉಸ್ತುವಾರಿಗಳಾಗಿದ್ದಾರೆ. ಕೇಂದ್ರ ಸಚಿವರಾದ ಮನಸುಖ ಮಾಂಡವಿಯ ಛತ್ತೀಸಗಢಕ್ಕೆ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸುನೀಲ್ ಬನ್ಸಾಲ್ ತೆಲಂಗಾಣಕ್ಕೆ ಸಹ ಉಸ್ತುವಾರಿಯಾಗಿದ್ದಾರೆ. ಮಿಜೋರಾಮ್‌ಗೂ ಅಕ್ಟೋಬರ್-ನವೆಂಬರ್‌ನಲ್ಲೇ ಚುನಾವಣೆ ನಡೆಯುವ ಸಾಧ್ಯತೆಯಿದೆ. ಅದಕ್ಕಿನ್ನೂ ಬಿಜೆಪಿ ಉಸ್ತುವಾರಿಯನ್ನು ಘೋಷಿಸಿಲ್ಲ.
ಜೋಷಿಗೆ ದೊಡ್ಡ ಜವಾಬ್ದಾರಿ: ಧಾರವಾಡ ಸಂಸದ, ಕೇಂದ್ರದ ಸಂಸದೀಯ ವ್ಯವಹಾರ ಮತ್ತು ಕಲ್ಲಿದ್ದಲು-ಗಣಿಗಾರಿಕೆ ಸಚಿವ ಪ್ರಹ್ಲಾದ್ ಜೋಷಿಗೆ ಅತ್ಯಂತ ಮಹತ್ವದ ಜವಾಬ್ದಾರಿ ನೀಡಲಾಗಿದೆ. ಚುನಾವಣೆ ನಡೆಯಲಿರುವ ನಾಲ್ಕು ರಾಜ್ಯಗಳ ಪೈಕಿ ಮಧ್ಯಪ್ರದೇಶದಲ್ಲೊಂದೇ ಬಿಜೆಪಿ ಅಧಿಕಾರದಲ್ಲಿರುವುದು. ತೆಲಂಗಾಣದಲ್ಲಿ ಒಂದಷ್ಟು ಸ್ಥಾನ ಗೆದ್ದರೆ ಅದೇ ದೊಡ್ಡ ಸಾಧನೆ. ಉಳಿದಂತೆ ಛತ್ತೀಸಗಢ ಮತ್ತು ರಾಜಸ್ಥಾನದಲ್ಲಿ ಬಿಜೆಪಿ ಅಧಿಕಾರದಲ್ಲಿಲ್ಲದಿದ್ದರೂ ಪ್ರಬಲವಾಗಿದೆ. ಈ ಪೈಕಿ ರಾಜಸ್ಥಾನ ಅತ್ಯಂತ ಮಹತ್ವದ ಕಣವಾಗಿದೆ. ಈ ರಾಜ್ಯವನ್ನು ಗೆಲ್ಲುವುದು ಬಿಜೆಪಿಗೆ ಪ್ರತಿಷ್ಠೆಯ ಪ್ರಶ್ನೆಯೂ ಹೌದು. ಸದ್ಯ ಅಲ್ಲಿ ಅಶೋಕ್ ಗೆಹಲೋತ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ.
ಕಾಂಗ್ರೆಸ್‌ನೊಳಗೆ ಗೆಹಲೋತ್ ಮತ್ತು ಸಚಿನ್ ಪೈಲಟ್ ನಡುವೆ ಒಳಜಗಳವಿದೆ. ಇದನ್ನು ಬಳಸಿಕೊಂಡು ಕಾಂಗ್ರೆಸ್ ಅನ್ನು ಮಣಿಸುವುದು ಬಿಜೆಪಿಗೆ ದೊಡ್ಡ ಸವಾಲು. ಈ ಸವಾಲಿನ ನೇತೃತ್ವ ಜೋಷಿಗೆ ಸಿಕ್ಕಿದೆ. ಅವರಿಗೆ ಇಬ್ಬರು ಸಹಾಯಕರೂ ಸಿಕ್ಕಿದ್ದಾರೆ. ಇವರೊಂದಿಗೆ ಬಿಜೆಪಿ ರಾಜಸ್ಥಾನ ನಾಯಕತ್ವವನ್ನು ಜೋಷಿ ಒಗ್ಗೂಡಿಸಬೇಕಾಗಿದೆ. ಯಾವುದೇ ಸ್ಥಳೀಯ ಚುನಾವಣೆಯಲ್ಲಿ ಸ್ಥಳೀಯ ನಾಯಕತ್ವದ್ದೇ ಮಹತ್ವದ ಪಾತ್ರವಾಗಿರುತ್ತದೆ. ಆದರೆ ಕೇಂದ್ರದಿಂದ ಸಿಗುವ ಉಸ್ತುವಾರಿಗಳು ತಂತ್ರಗಾರಿಕೆಗೆ ನೆರವಾಗುತ್ತಾರೆ. ಹಾಗೆಯೇ ರಾಷ್ಟ್ರ ನಾಯಕತ್ವದಿಂದ ಮಾಡಿಸಬಹುದಾದ ಪ್ರಚಾರಕ್ಕೆ ಅಗತ್ಯ ಸಹಕಾರ ಸಿಗುವಂತೆ ಮಾಡುತ್ತಾರೆ.
ಕೇಂದ್ರ ಸಚಿವರಾಗಿ ಉತ್ತಮ ಹೆಸರು ಮಾಡಿರುವ ಪ್ರಹ್ಲಾದ್ ಜೋಷಿಗೆ ಹಿಂದಿ ಭಾಷೆಯ ಮೇಲೆ ಹಿಡಿತವಿದೆ. ರಾಜಸ್ಥಾನದ ನಾಯಕರು, ಸ್ಥಳೀಯ ಘಟಕಗಳೊಂದಿಗೆ ನೇರ ಸಂವಹನ ಸಾಧಿಸಲು ಇದರಿಂದ ನೆರವಾಗಲಿದೆ. ಇದು ಜೋಷಿಯವರ ಸಾಮರ್ಥ್ಯ ಸಾಬೀತು ಮಾಡಲು ಒಂದು ಅತ್ಯುತ್ತಮ ಅವಕಾಶವೆಂದು ಬಣ್ಣಿಸಲಾಗಿದೆ.