ಗೋರಖಪುರ: ಕೇಂದ್ರ ಸರಕಾರದ ಬಹು ನಿರೀಕ್ಷಿತ ಯೋಜನೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ರವಿವಾರ ಮಧ್ಯಾಹ್ನ ಉತ್ತರಪ್ರದೇಶದ ಗೋರಖಪುರದಲ್ಲಿ ಉದ್ಘಾಟಿಸಿದರು.
ದೇಶದ ರೈತರಿಗೆ ವಾರ್ಷಿಕ ಆರು ಸಾವಿರ ರೂಪಾಯಿ ನೀಡುವ ಈ ಯೊಜನೆ ಕೇಂದ್ರ ಸರಕಾರದ ಮಹತ್ವದ ಯೊಜನೆಯಾಗಿದ್ದು, ದೇಶದ ಸುಮಾರು 12 ಕೋಟಿ ರೈತರು ಇದರ ಪ್ರಯೋಜನ ಪಡೆಯಲಿದ್ದಾರೆ.
ಈ ಸಮಯದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಇಂದಿನ ದಿನ ರೈತರ ಆಕಾಂಕ್ಷೆಗಳಿಗೆ ರೆಕ್ಕೆ ಮೂಡುತ್ತಿರುವ ಐತಿಹಾಸಿಕ ದಿನ. ಕೇಂದ್ರ ಸರಕಾರ ರೈತರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ. ಈ ಯೋಜನೆ ಸ್ವಾತಂತ್ರ್ಯ ನಂತರದ ರೈತರಿಗೆ ನೀಡಿದ ಅತೀ ದೊಡ್ಡ ಕೊಡುಗೆಯಾಗಿದೆ ಎಂದು ಬಣ್ಣಿಸಿದರು.
ಈಗಾಗಲೇ 2021 ಕೊಟಿ ಹಣ ವರ್ಗಾವಣೆ ಆಗಿದೆ. ಕೆಲವೇ ವಾರಗಳಲ್ಲಿ ಬಾಕಿ ಹಣ ವರ್ಗಾವಣೆ ಮಾಡುತ್ತೇವೆ. ರೈತರಿಗೆ ಜಮೀನಿನ ಯಾವುದೇ ಸಮಸ್ಯೆ ಆಗಬಾರದು. 2022ರ ವೇಳೆಗೆ ರೈತರ ಆದಾಯ ದ್ವಿಗುಣಗೊಳ್ಳಲಿದೆ. ಎಂದರು. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೊಜನೆ ರೈತರ ಹಕ್ಕು. ಅದನ್ನು ಕಸಿದುಕೊಳ್ಳಲು ಯಾರಿಗೂ ಅವಕಾಶವಿಲ್ಲ ಗೋರಖಪುರದ ಭಾಷಣದಲ್ಲಿ ಹೇಳಿದರು.
ತಮ್ಮ ಭಾಷಣದಲ್ಲಿ ವಿರೋಧ ಪಕ್ಷದವರನ್ನು ಛೇಡಿಸಿದ ಮೋದಿ, ಈ ಯೊಜನೆಯನ್ನು ನೋಡಿ ಮಹಾಮೈತ್ರಿ ನಾಯಕರು ಮುಖ ತಿರುಚಿಕೊಳ್ಳುತ್ತಿದ್ದಾರೆ. ಸುಳ್ಳು ಹೇಳುವುದು, ಭಯ ಹುಟ್ಟಿಸುವುದು ಅವರ ಸ್ವಭಾವ. ಕಾಂಗ್ರೆಸ್ ಗೆ ಹತ್ತು ವರ್ಷದ ನಂತರ ರೈತರ ನೆನಪಾಗುತ್ತಿದೆ ಎಂದು ವಿರೋಧ ಪಕ್ಷದವರ ಕಾಲೆಳೆದರು.