Advertisement

ಜನೌಷಧ ಮಳಿಗೆಯಲ್ಲಿ ಸಿಗುತ್ತಿಲ್ಲ ಜನ ಸಾಮಾನ್ಯರ ಔಷಧ

06:25 AM Jun 09, 2018 | |

ಶಿವಮೊಗ್ಗ: ಜನ ಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಜೀವನಾವಶ್ಯಕ ಔಷಧ ಪೂರೈಸುವ ನಿಟ್ಟಿನಲ್ಲಿ ಆರಂಭಗೊಂಡ ಪ್ರಧಾನಮಂತ್ರಿ ಜನೌಷಧಾಲಯಗಳಲ್ಲಿ ಈಗ ಔಷಧಗಳ ಕೊರತೆ ಎದುರಾಗಿದೆ. ಜೆನರಿಕ್‌ ಮಳಿಗೆಗಳಲ್ಲಿ ದಿನದಿಂದ ದಿನಕ್ಕೆ ಔಷಧದ ಕೊರತೆ ಹೆಚ್ಚುತ್ತಲೇ ಇದ್ದು ಯೋಜನೆಯ ಸದುದ್ದೇಶವೇ ದಾರಿ ತಪ್ಪುವಂತೆ ಕಾಣುತ್ತಿದೆ.

Advertisement

ಜನೌಷಧಾಲಯಗಳು ಆರಂಭಗೊಂಡು ವರ್ಷವಾಗುತ್ತಾ ಬಂದರೂ ಇಂದಿಗೂ ಅಗತ್ಯ ಪ್ರಮಾಣದಲ್ಲಿ ಔಷಧ ಪೂರೈಸುವಲ್ಲಿ ಸರ್ಕಾರ ವಿಫಲವಾಗಿರುವುದರಿಂದ ಜನ ಸಾಮಾನ್ಯರು ಪರಿತಪಿಸುವಂತಾಗಿದೆ. ಕಳೆದೆರಡು ತಿಂಗಳಿನಿಂದ ಪರಿಸ್ಥಿತಿ ಹದಗೆಟ್ಟಿದ್ದು, ತೀರಾ ಅಗತ್ಯ ಎನಿಸಿಕೊಂಡ ಗುಳಿಗೆಗಳೂ ಸಹ ಈ ಔಷಧಾಲಯಗಳಲ್ಲಿ ಸಿಗದೆ ಪರದಾಡುವಂತಾಗಿದೆ. ಅನಿವಾರ್ಯವಾಗಿ ಹೆಚ್ಚಿನ ಹಣ ತೆತ್ತು ಖಾಸಗಿ ಮೆಡಿಕಲ್‌ ಶಾಪ್‌ಗ್ಳಿಗೆ ಹೋಗುವಂತಾಗಿದೆ.

ರಾಜ್ಯದಲ್ಲಿ ಒಟ್ಟು 315 ಜೆನೆರಿಕ್‌ ಮಳಿಗೆಗಳಿದ್ದು, ಎಲ್ಲೆಡೆಯೂ ಬಹುತೇಕ ಇದೇ ಪರಿಸ್ಥಿತಿ. ಇಲ್ಲಿ ರಕ್ತದೊತ್ತಡ, ಸಕ್ಕರೆ ಕಾಯಿಲೆಗೆ ಸಂಬಂಧಿಸಿದ ಔಷಧಗಳೇ ಹೆಚ್ಚು ಖರ್ಚಾಗುತ್ತಿದ್ದವು. ಆದರೆ ಈಗ ಔಷಧಗಳ ಕೊರತೆಯಿಂದಾಗಿ ಸರ್ಕಾರದ ಮೂಲ ಉದ್ದೇಶಕ್ಕೇ ಹೊಡೆತ ಬೀಳುವಂತಾಗಿದೆ.

2008ರಲ್ಲಿಯೇ ಈ ಯೋಜನೆ ಪ್ರಸ್ತಾವನೆಯಲ್ಲಿ ಇತ್ತಾದರೂ, ಈಗಿನ ಕೇಂದ್ರ ಸರ್ಕಾರ ಇದನ್ನು ಆರಂಭಿಸಿತು. ಆರಂಭದಲ್ಲಿ ಕೇಂದ್ರ ಸರ್ಕಾರ ಉತ್ಸಾಹದಿಂದ ಯೋಜನೆ ಜಾರಿಗೊಳಿಸಿತಲ್ಲದೆ, ಇದಕ್ಕೆ ಔಷಧಗಳನ್ನು ಪೂರೈಸುವಂತೆ ಸಂಬಂಧಿಸಿದ ಕಂಪನಿಗಳಿಗೂ ಸೂಚಿಸಿತ್ತು. ಆದರೆ ನಿಧಾನವಾಗಿ ಕಂಪನಿಗಳು ಔಷದ ಪೂರೈಕೆಯಲ್ಲಿ ನಿರ್ಲಕ್ಷ್ಯ ತೋರುತ್ತಿದೆ.

ಖಾಸಗಿ ಲಾಬಿ?: ಯೋಜನೆ ಪ್ರಕಾರ ಕೇಂದ್ರ ಸರ್ಕಾರ 600ಕ್ಕೂ ಹೆಚ್ಚು ಜೀವನಾವಶ್ಯಕ ಔಷಧ ಹಾಗೂ 154ಕ್ಕೂ ಹೆಚ್ಚು ಸರ್ಜಿಕಲ್‌ ವಸ್ತುಗಳನ್ನು ಅತ್ಯಂತ ಕಡಿಮೆ ದರದಲ್ಲಿ ಪೂರೈಸಬೇಕಿದೆ. ಆರಂಭದಲ್ಲಿ ಇದಕ್ಕೆ ಕ್ರಮ ಕೈಗೊಳ್ಳಲಾಗಿತ್ತಾದರೂ, ಕ್ರಮೇಣ ಇದು ಸಾಮಾನ್ಯ ಔಷಧ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತಿರುವುದರಿಂದ ಖಾಸಗಿ ಕಂಪನಿಗಳು ಲಾಬಿ ಆರಂಭಿಸಿವೆ ಎನ್ನಲಾಗುತ್ತಿದೆ. ಜನೌಷಧ ಮಳಿಗೆಗಳು ಆರಂಭಗೊಂಡ ಬಳಿಕ ಖಾಸಗಿ ಔಷಧ ಅಂಗಡಿಗಳಲ್ಲಿ ಕೆಲವು ನಿರ್ದಿಷ್ಟ ಔಷಧಗಳ ಮಾರಾಟ ಕಡಿಮೆಯಾಗಿದೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿಯೇ ಖಾಸಗಿ ಲಾಬಿ ಇಲ್ಲಿ ಕೆಲಸ ಮಾಡುತ್ತಿದೆ ಎಂಬ ಮಾತು ಕೇಳಿಬರುತ್ತಿದೆ.

Advertisement

ಬಹಳಷ್ಟು ಔಷಧ ಪೂರೈಕೆ ಕಂಪನಿಗಳು ಸೂಕ್ತ  ಪ್ರಮಾಣದಲ್ಲಿ ಅಗತ್ಯಕ್ಕನುಗುಣವಾಗಿ ಔಷಧ ಪೂರೈಸದಿರುವುದೇ ಸಮಸ್ಯೆಗೆ ಕಾರಣ. ಈ ಪರಿಸ್ಥಿತಿ ಇನ್ನೂ 3-4 ತಿಂಗಳು ಮುಂದುವರಿಯುವ ಲಕ್ಷಣಗಳಿವೆ ಎಂದು ಮೂಲಗಳು ಹೇಳುತ್ತವೆ. ಜೆನರಿಕ್‌ ಮಳಿಗೆಗಳಲ್ಲಿ ಸರಿಯಾಗಿ ಔಷಧ ಸಿಗುವುದಿಲ್ಲವೆಂಬ ಮಾತು ಜನಜನಿತವಾದರೆ, ನಿಧಾನವಾಗಿ ಜನ ಈ ಮಳಿಗೆಗಳತ್ತ ಮುಖ ಹಾಕುವುದನ್ನೇ ಬಿಡುತ್ತಾರೆ. ಹೀಗಾಗಿ ಈ ಕುರಿತು ಸರ್ಕಾರ ತಕ್ಷಣ ಎಚ್ಚೆತ್ತುಕೊಳ್ಳಬೇಕು ಎಂಬುದು ಸಾರ್ವಜನಿಕ ವಲಯದಲ್ಲಿನ ಮಾತು.

ಈ ಹಿಂದೆ ನಾನು ತೆಗೆದುಕೊಳ್ಳುತ್ತಿದ್ದ ಸಕ್ಕರೆ ಕಾಯಿಲೆಯ ಮಾತ್ರೆಯ ತಿಂಗಳ ಖರ್ಚು ಸುಮಾರು 1 ಸಾವಿರ ರೂ.ತನಕ ಇರುತ್ತಿತ್ತು. ಜನೌಷಧಾಲಯ ಆರಂಭವಾದ ಮೇಲೆ ಅದು 200 ರಿಂದ 220ರೂ.ಗೆ ಇಳಿದಿತ್ತು. ಆದರೆ ಮೂರ್ನಾಲ್ಕು ತಿಂಗಳಿನಿಂದ ಸರಿಯಾಗಿ ಔಷಧ ಸಿಗದ ಕಾರಣ ತೊಂದರೆಯಾಗುತ್ತಿದೆ.
– ಕೃಷ್ಣಮೂರ್ತಿ, ಸಾರ್ವಜನಿಕರು

ರಾಜ್ಯದಲ್ಲಿ ಔಷಧ ಪೂರೈಕೆ ಕೊರತೆ ಎದ್ದು ಕಾಣುತ್ತಿದ್ದು, ಜನೌಷಧಾಲಯಗಳ ಬೇಡಿಕೆಯನ್ನು ಪೂರೈಸಲಾಗುತ್ತಿಲ್ಲ. ಬರುವ ದಾಸ್ತಾನಿನಲ್ಲೇ ಎಲ್ಲಾ ಕೇಂದ್ರಕ್ಕೆ ಹಂಚ ಬೇಕಾದ ಪರಿಸ್ಥಿತಿ ಇದೆ. ಪರಿಸ್ಥಿತಿ ಸುಧಾರಿಸಬಹುದೆಂದು ನಿರೀಕ್ಷಿಸಲಾಗಿದೆ.
– ಪರಶುರಾಮ್‌, ಮಾರುಕಟ್ಟೆ ಅಧಿಕಾರಿ

– ಗೋಪಾಲ್‌ ಯಡಗೆರೆ

Advertisement

Udayavani is now on Telegram. Click here to join our channel and stay updated with the latest news.

Next