ಚಿಕ್ಕಬಳ್ಳಾಪುರ: ”ರಾಜಕಾರಣದಲ್ಲಿ ತುಂಬಾ ಜನರನ್ನು ನಾನು ಡ್ಯಾನ್ಸ್ ಮಾಡಿಸಿದ್ದೇನೆ. ಸಿನಿಮಾದಲ್ಲೂ ನನಗೆ ಡ್ಯಾನ್ಸ್ ಮಾಡುವ ಆಸೆ ಇದೆ” ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದಾರೆ.
ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ”ತೆಲುಗು ಸಿನಿಮಾ ಕ್ಷೇತ್ರ ನನ್ನನ್ನು ಕರೆಯುತ್ತಿರುವುದು ನಿಜ” ಎನ್ನುವ ಮೂಲಕ ಶಾಸಕ ಪ್ರದೀಪ್ ಈಶ್ವರ್ ಸಿನಿಮಾದಲ್ಲಿ ಬಣ್ಣ ಹಚ್ಚುವ ಆಸೆ ವ್ಯಕ್ತಪಡಿಸಿದರು.
”ನಾನು ಮೆಗಾಸ್ಟರ್ ಚಿರಂಜೀವಿ ರವರ ದೊಡ್ಡ ಅಭಿಮಾನಿ, ಅವರ ಸಮುದಾಯದ ಹುಡುಗ ನಾನು, ಅವರ ಸಮುದಾಯದಲ್ಲಿ ಗೆದ್ದಿರುವ ಏಕೈಕ ಶಾಸಕ ನಾನು. ನನ್ನ ಮೇಲೆ ಚಿರಂಜೀವಿ ಅವರಿಗೆ ವಿಶೇಷ ಪ್ರೀತಿ ಇದೆ. ಕಳೆದ ಬಾರಿ ನಾನು ಶಾಸಕನಾಗಿ ಗೆದ್ದಾಗ ಮನೆಗೆ ಕರೆಸಿದ್ದರು” ಎಂದರು.
”ಪವಣ್ ಕಲ್ಯಾಣ್ ಗೆದ್ದಾಗಲೂ ನಾನು ಪೋನ್ ಮಾಡಿ ವಿಷ್ ಮಾಡಿದ್ದೆ. ಅವರ ವಲಯದ ಸ್ನೇಹಿತರೊಂದಿಗೆ ನಾನು ಸಂಪರ್ಕ ಹೊಂದಿದ್ದೇನೆ. ಸಿನಿಮಾ ವಿಚಾರದಲ್ಲಿ ಚರ್ಚೆ ಆಗಿರುವುದು ನಿಜ. ಆದರೆ ಮುಂದಿನ ಸಿನಿಮಾಗಳಲ್ಲಿ ನಟಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಅದರ ಬಗ್ಗೆ ಅವರೇ ಹೇಳುತ್ತಾರೆ” ಎಂದರು. ಸಿನಿಮಾದಲ್ಲಿ ನಿಮ್ಮದು ಯಾವ ಪಾತ್ರ ಅಂತ ಕೇಳಿದಾಗ ”ರಾಜಕಾರಣದಲ್ಲಿ ತುಂಬಾ ಜನರನ್ನು ನಾನು ಡ್ಯಾನ್ಸ್ ಮಾಡಿಸಿದ್ದೇನೆ. ಸಿನಿಮಾದಲ್ಲಿ ನಾನು ಡ್ಯಾನ್ ಮಾಡಬೇಕು” ಎಂದು ಹೇಳಿದ್ದಾರೆ.