Advertisement

ಹೊಸ ಪ್ರಯೋಗಕ್ಕೆ ಅಭಯ ಹಸ್ತ

11:06 AM Jan 12, 2018 | Team Udayavani |

“ಒಳ್ಳೆಯದು ಮತ್ತು ಕೆಟ್ಟದ್ದು ಏನೇ ಮಾಡಿದ್ದರೂ, ಇದೇ ಜನ್ಮದಲ್ಲಿ ಅನುಭವಿಸಬೇಕು…’
ಹೀಗೆ ಹೇಳಿ ಸುಮ್ಮನಾದರು ಹಿರಿಯ ಪತ್ರಕರ್ತ, ಕಲಾವಿದ ಸುರೇಶ್ಚಂದ್ರ. ಅವರು ಹೇಳಿದ್ದು, “ಜವ’ ಚಿತ್ರದ ಒನ್‌ಲೈನ್‌ ಬಗ್ಗೆ. ಈ ಚಿತ್ರದ ಒನ್‌ಲೈನ್‌ ಕುರಿತು ಸುರೇಶ್ಚಂದ್ರ ಹೇಳಿದ ಮಾತಿದು. “ನಾವೇನು ಮಾಡ್ತೀವೋ ಅದನ್ನೆಲ್ಲಾ ಇದೇ ಜನ್ಮದಲ್ಲಿ ಅನುಭವಿಸಬೇಕು. ಇನ್ನೊಂದರ್ಥದಲ್ಲಿ ಹೇಳುವುದಾದರೆ, ಮಾಡಿದುಣ್ಣೋ ಮಹರಾಯ. ಈ ಕಾನ್ಸೆಪ್ಟ್ನೊಂದಿಗೆ ಚಿತ್ರ ಮೂಡಿಬಂದಿದೆ. ಮಗ ಅಭಯ್‌ಚಂದ್ರ ನಿರ್ದೇಶನದ ಮೊದಲ ಚಿತ್ರವಿದು. ಅವನ ಮೇಲೆ ನಂಬಿಕೆ ಇಟ್ಟು, ವಚನ್‌ಶೆಟ್ಟಿ, ವೀರೇಂದ್ರ ಅವರು ಹಣ ಹಾಕಿದ್ದಾರೆ. ಇನ್ನೊಬ್ಬ ಪುತ್ರ ವಿನಯ್‌ ಚಂದ್ರ ಸಂಗೀತ ನೀಡಿದ್ದಾನೆ. ನಿರ್ದೇಶಕ, ಸಂಗೀತ ನಿರ್ದೇಶಕರಿಬ್ಬರೂ ನನ್ನ ಎರಡು ಕಣ್ಣುಗಳಿದ್ದಂತೆ. ಒಳ್ಳೆಯ ತಂಡ ಕಟ್ಟಿಕೊಂಡಿದ್ದಾರೆ. ಮಕ್ಕಳ ಆಸೆಯಂತೆ ಸಹಕಾರ ಕೊಟ್ಟಿದ್ದೇನೆ. ಒಳ್ಳೇ ಮನಸುಗಳು ಕೈ ಜೋಡಿಸಿವೆ. ನಿಮ್ಮೆಲ್ಲರ ಸಹಕಾರ ಇರಲಿ’ ಅಂದರು ಸುರೇಶ್ಚಂದ್ರ.

Advertisement

ನಿರ್ದೇಶಕ ಅಭಯ್‌ ಚಂದ್ರ ಅವರಿಗೆ ಟ್ರೇಲರ್‌ ಬಿಡುಗಡೆ ಮಾಡಿದ ಖುಷಿ ಇತ್ತು. ಸಿನಿಮಾ ಬಗ್ಗೆ ಏನನ್ನೂ ಹೇಳುವುದಿಲ್ಲ. ಇದು ಐದು ಪಾತ್ರಗಳ ಸುತ್ತ ನಡೆಯೋ ಕಥೆ. ಮಿಸ್ಟ್ರಿ ಥ್ರಿಲ್ಲರ್‌ ಇಲ್ಲಿದೆ. ಸಾಯಿಕುಮಾರ್‌, ಭವಾನಿ ಪ್ರಕಾಶ್‌, ದಿಲೀಪ್‌ರಾಜ್‌ ಮುಖ್ಯ ಪಾತ್ರ ನಿರ್ವಹಿಸಿದ್ದಾರೆ. ಕನ್ನಡದಲ್ಲಿ ಇದು ಹೊಸಬಗೆಯ ಚಿತ್ರವಾಗುತ್ತೆ. “ಜವ’ ಅಂದರೆ ಸಾವು, ಅದರ ಕುರಿತಾದ ಇಂಟ್ರೆಸ್ಟಿಂಗ್‌ ಸ್ಟೋರಿ ಇಲ್ಲಿದೆ.  ಜ.19 ಕ್ಕೆ ತೆರೆಕಾಣಬೇಕಿತ್ತು. ಕಾರಣಾಂತರದಿಂದ ಮುಂದೆ ಹೋಗಿ, ಫೆಬ್ರವರಿ 2 ರಂದು ತೆರೆಕಾಣುತ್ತಿದೆ ಅಂದರು ನಿರ್ದೇಶಕರು.

ಸಾಯಿಕುಮಾರ್‌ ಅವರಿಲ್ಲಿ ಪೊಲೀಸ್‌ ಅಧಿಕಾರಿ ಪಾತ್ರ ನಿರ್ವಹಿಸಿದ್ದಾರಂತೆ. “ಇಲ್ಲೊಂದು ಹೊಸ ತಂಡ ಸೇರಿದೆ. ಸಹೋದರರಿಬ್ಬರ ಕಾಂಬಿನೇಷನ್‌ನಲ್ಲಿ “ಜವ’ ಹೊಸ ಅನುಭವ ಕಟ್ಟಿಕೊಡುತ್ತೆ. ಇಲ್ಲಿ ಎಲ್ಲವೂ ಹೊಸ ಶೈಲಿಯಲ್ಲಿ ಮೂಡಿಬಂದಿರುವುದರಿಂದ ಕನ್ನಡಕ್ಕೆ ಹೊಸ ರೀತಿಯ ಚಿತ್ರ ಇದಾಗಲಿದೆ’ ಎಂಬ ನಂಬಿಕೆ ನನ್ನದು ಅಂದರು ಸಾಯಿಕುಮಾರ್‌.

ಸಂಗೀತ ನಿರ್ದೇಶಕ ವಿನಯ್‌ ಚಂದ್ರ ಅವರ ಪ್ರಕಾರ ಇಲ್ಲಿ ಎಲ್ಲರ ಪಾತ್ರ ಅಚ್ಚುಕಟ್ಟಾಗಿ ಮೂಡಿಬಂದಿರುವುದರಿಂದ “ಜವ’ಕ್ಕೊಂದು ಅರ್ಥ ಸಿಕ್ಕಿದೆಯಂತೆ. “ಇಂತಹ ಚಿತ್ರಗಳಿಗೆ ಹಿನ್ನೆಲೆ ಸಂಗೀತ ಮುಖ್ಯ ಪಾತ್ರವಹಿಸುತ್ತದೆ. ಇಲ್ಲಿ ಹೊಸ ಪ್ರಯತ್ನ ಮಾಡಲಾಗಿದೆ. ಇಡೀ ಚಿತ್ರವೇ ಹೊಸ ಪ್ರಯೋಗದಲ್ಲಿರುವುದರಿಂದ, ಚಾಲೆಂಜಿಂಗ್‌ ಕೆಲಸ ನಿರ್ವಹಿಸಿದ್ದೇನೆ’ ಎಂದರು ವಿನಯ್‌ಚಂದ್ರ.

ನಿರ್ಮಾಪಕ ವಚನ್‌ ಶೆಟ್ಟಿ ಅವರಿಗೆ ಒಳ್ಳೆಯ ಚಿತ್ರ ಮಾಡಿರುವ ಖುಷಿ ಇದೆಯಂತೆ. ಭವಾನಿ ಪ್ರಕಾಶ್‌ಗೆ ಇದು ಹೊಸಬರ ಪ್ರಯತ್ನ ಅಂತ ಅನಿಸಿಲ್ಲವಂತೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next