ಚಾಮರಾಜನಗರ: ರಥ ಸಪ್ತಮಿ ಅಂಗವಾಗಿ ನಗರದ ಹೃದಯ ಭಾಗದಲ್ಲಿರುವ ಶ್ರೀಚಾಮರಾಜೇಶ್ವರ ಸ್ವಾಮಿ ದೇವಸ್ಥಾನದ ಮುಭಾಂಗ 1200ಕ್ಕೂ ಹೆಚ್ಚು ಮಂದಿಯಿಂದ ಸಾಮೂಹಿಕವಾಗಿ ಸೂರ್ಯ ನಮಸ್ಕಾರ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ನಗರದ ಪತಂಜಲಿ ಯೋಗ ಶಿಕ್ಷಣ ಸಮಿತಿ, ಸೇವಾ ಭಾರತಿ ಶಿಕ್ಷಣ ಸಂಸ್ಥೆಯ ಸಹಯೋಗದೊಂದಿಗೆ 10ನೇ ವರ್ಷದ ಸಾಮೂಹಿಕ 108 ಸೂರ್ಯ ನಮಸ್ಕಾರ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ಯೋಗದಿಂದ ಮಾನಸಿಕ ಒತ್ತಡ ಕಡಿಮೆ: ಕಾರ್ಯಕ್ರಮವನ್ನು ಉದ್ಘಾಟಿಸಿದ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಧೀಶ ವಿನಯ್ ಮಾತನಾಡಿ, ಪ್ರತಿನಿತ್ಯ ವಾಕಿಂಗ್ ಮಾಡುವುದಕ್ಕಿಂತ ಯೋಗಾಭ್ಯಾಸ ಮಾಡಿದರೆ ಉತ್ತಮ ಆರೋಗ್ಯವಂತ ಜೀವನ ನಡೆಸಲು ಸಾಧ್ಯವಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಾನಸಿಕ ಒತ್ತಡ ಹೆಚ್ಚಾಗುತ್ತಿದೆ. ಇದನ್ನು ಕಡಿಮೆ ಮಾಡಿಕೊಳ್ಳಲು ಯೋಗಾಭ್ಯಾಸ ಅತ್ಯಂತ ಪರಿಣಾಮಕಾರಿಯಾಗಿದೆ. 108 ಸಾಮೂಹಿಕ ಸೂರ್ಯ ನಮಸ್ಕಾರದಂತಹ ಕಾರ್ಯಕ್ರಮದಲ್ಲಿ ಕಳೆದ 3 ವರ್ಷದಿಂದ ನಾನು ಭಾಗಿಯಾಗುತ್ತಿರುವುದು ಸಂತಸ ತಂದಿದೆ ಎಂದು ಮೆಚ್ಚುಗೆಗೆ ವ್ಯಕ್ತ ಪಡಿಸಿದರು.
ಸಂಸ್ಕಾರಯುತ ಕಾರ್ಯಕ್ರಮ: ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಆನಂದ್‌ಕುಮಾರ್ ಮಾತನಾಡಿ, 108 ಸೂರ್ಯ ನಮಸ್ಕಾರದಂತಹ ಸಂಸ್ಕಾರಯುತ ಕಾರ್ಯಕ್ರಮ ಬಹಳ ಅರ್ಥಪೂರ್ಣವಾಗಿದೆ. ಒತ್ತಡ ಮುಕ್ತ ಜೀವನಕ್ಕೆ ಯೋಗ ಸಹಕಾರಿಯಾಗಲಿದೆ. ಪ್ರತಿ ನಿತ್ಯ ಯೋಗ, ಧ್ಯಾನ, ಆಧ್ಯಾತ್ಮವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಆರೋಗ್ಯವಂತ ಜೀವನ ನಡೆಸಲು ಸಾಧ್ಯವಿದೆ ಎಂದರು.
ಸೂರ್ಯ ಕಿರಣದಲ್ಲಿದೆ ವಿಟಮಿನ್ ಡಿ: ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾನಿಲಯದ ರಾಜಯೋಗಿನಿ ದಾನೇಶ್ವರಿಜೀ ಮಾತನಾಡಿ, ಸೂರ್ಯ ನಮಸ್ಕಾರ ಭಗವಂತನಿಗೆ ಪ್ರಿಯ. ಆತನಿಗೆ ತಾವುಗಳೆಲ್ಲರೂ ಸೇರಿ 108 ಸೂರ್ಯ ನಮಸ್ಕಾರ ಮಾಡುತ್ತಿರುವುದರಿಂದ ಆ ಸೂರ್ಯ ಭಗವಂತನ ಕೃಪೆ ಸದಾ ನಿಮ್ಮೆಲ್ಲರಿಗೂ ಲಭಿಸಲಿದೆ. ಸೂರ್ಯ ನಮಸ್ಕಾರ ಮಾಡುವುದರಿಂದ ದೇಹಕ್ಕೆ ಸೂರ್ಯ ಕಿರಣಗಳು ಸ್ಪರ್ಶಿಸಿದಾಗ ವಿಟಮಿನ್ ಡಿ ದೊರೆಯುತ್ತಿದೆ ಎಂದು ಹೇಳಿದರು.
ಸಾವಯವ ಆಹಾರ ಪದ್ಧತಿ ಅಳವಡಿಸಿಕೊಳ್ಳಿ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಕುಮಾರಸ್ವಾಮಿ ಮಾತನಾಡಿ, ನಾವು ಪ್ರತಿ ನಿತ್ಯ ಸೇವಿಸುವ ಆಹಾರವು ಕಲುಷಿತವಾಗಿದೆ. ಸಾವಯವ ಆಹಾರ ಪದ್ಧತಿ ಹಾಗೂ ಪ್ರತಿ ನಿತ್ಯ ಯೋಗಾಭ್ಯಾಸವನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ರೋಗಮುಕ್ತ ಜೀವನ ನಡೆಸಲು ಸಾಧ್ಯ ಎಂದು ತಿಳಿಸಿದರು.
ಆರೋಗ್ಯವಂತ ಸಮಾಜಕ್ಕೆ ಶ್ರಮ: ಯೋಗ ಶಿಕ್ಷಣ ಸಮಿತಿಯ ಜಿಲ್ಲಾ ಸಂಚಾಲಕ ಯೋಗಪ್ರಕಾಶ್ ಮಾತನಾಡಿ, ಪತಂಜಲಿ ಯೋಗ ಶಿಕ್ಷಣ ಸಮಿತಿಯು ಸಂಸ್ಕಾರ, ಸಂಘಟನೆ ಮತ್ತು ಸೇವೆ ಎಂಬ 3 ಧ್ಯೇಯಗಳನ್ನಿಟ್ಟುಕೊಂಡು ಆರೋಗ್ಯವಂತ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸುತ್ತಿದೆ. ಈ ಸಮಿತಿಯು 40 ವರ್ಷಗಳಿಂದ ಉಚಿತವಾಗಿ ಯೋಗ ಶಿಕ್ಷಣ ನೀಡುತ್ತಿದೆ.
ಎಲ್ಲರು ಪ್ರತಿ ನಿತ್ಯ ಯೋಗಭ್ಯಾಸವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಏನೆಲ್ಲಾ ಲಾಭಗಳು ಮನುಷ್ಯನಿಗೆ ದೊರಕುತ್ತವೆ ಎಂಬುದನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಂ.ಸಿ.ರವಿ, ಜಿಲ್ಲಾ ಲಸಿಕಾ ಅಧಿಕಾರಿ ಡಾ.ವಿಶ್ವೇಶ್ವರಯ್ಯ, ಭಾರತ್ ವಿಕಾಸ್ ಪರಿಷತ್‌ನ ಅಧ್ಯಕ್ಷ ಬಿ.ವಿ.ವೆಂಕಟನಾಗಪ್ಪ ಶೆಟ್ಟಿ ಉಪಸ್ಥಿತರಿದ್ದರು.