Advertisement

ಕಠಿಣ ಅಭ್ಯಾಸದಿಂದ ಭವಿಷ್ಯ ರೂಪಿಸಿಕೊಳ್ಳಿ

12:34 PM May 27, 2022 | Team Udayavani |

ನರಗುಂದ: ಇಂದಿನ ಆಧುನಿಕ ಜಗತ್ತಿನಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣವೇ ನಿಜವಾದ ಆಸ್ತಿಯಾಗಿದೆ. ಆದ್ದರಿಂದ, ಮಕ್ಕಳು ಕೂಡ ಪರಿಶ್ರಮದಿಂದ ಕಠಿಣ ಅಭ್ಯಾಸ ಮಾಡಿ ಶಿಕ್ಷಣದಿಂದಲೇ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಹೇಳಿದರು.

Advertisement

ಗುರುವಾರ ಪಟ್ಟಣದಲ್ಲಿ ತಮ್ಮ ಗೃಹ ಕಚೇರಿಯಲ್ಲಿ ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಕೀರ್ತಿ ತಂದ ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಸತ್ಕರಿಸಿ ಸಚಿವರು ಮಾತನಾಡಿದರು.

ನಾನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವನಾಗಿದ್ದಾಗ ತಾಲೂಕಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ತಂದು, ಅದಕ್ಕೆ ಸುಸಜ್ಜಿತ ಕಟ್ಟಡ ಕೂಡ ಮಂಜೂರು ಮಾಡಿಸಿದ್ದೆ. ಆ ಶಾಲೆಯ 6 ವಿದ್ಯಾರ್ಥಿಗಳು ಇಂದು ಜಿಲ್ಲೆಯಲ್ಲೇ ಅತೀ ಹೆಚ್ಚು ಅಂಕ ಗಳಿಸುವ ಮೂಲಕ ಸಾರ್ಥಕಗೊಳಿಸಿದ್ದಾರೆ ಎಂದು ಸಚಿವ ಸಿ.ಸಿ.ಪಾಟೀಲ ಮೆಚ್ಚುಗೆ ವ್ಯಕ್ತಪಡಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಗದಗ ಜಿಲ್ಲಾ ಉಪನಿರ್ದೇಶಕ ಜಿ.ಎಂ.ಬಸಲಿಂಗಪ್ಪ ಅವರು ಮಾತನಾಡಿ, ಗದಗ ಜಿಲ್ಲೆಗೆ ಈ ಬಾರಿ 88.13ರಷ್ಟು ಫಲಿತಾಂಶ ದೊರೆತಿದೆ. ಇದರಲ್ಲಿ ಅತೀ ಹೆಚ್ಚು ಸಾಧನೆ ಮಾಡಿದ ನರಗುಂದ ತಾಲೂಕು ಜಿಲ್ಲೆಗೆ ಪ್ರಥಮವಾಗಿದೆ. ಜಿಲ್ಲೆಯ 13 ಜನ ಟಾಪರ್‌ಗಳಲ್ಲಿ ಅತ್ಯಧಿ ಕ 8 ವಿದ್ಯಾರ್ಥಿಗಳು ನರಗುಂದ ತಾಲೂಕಿನವರಾಗಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ರಾಜ್ಯದ ಮೊರಾರ್ಜಿ ಶಾಲೆಗಳ ಫಲಿತಾಂಶದಲ್ಲಿ ಎರಡನೇ ಸ್ಥಾನದಲ್ಲಿರುವ ತಾಲೂಕಿನ ಬೆನಕನಕೊಪ್ಪ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಿಂದ ಜಿಲ್ಲೆಗೆ ಕೀರ್ತಿ ತಂದ ನವೀನಗೌಡ ಮಲ್ಲನಗೌಡ್ರ, ವಾಣಿಶ್ರೀ ಕುಲಕರ್ಣಿ,ಬಸವರಾಜ ಬಾರಕೇರ, ನವೀನ ಸಾಸಳ್ಳಿ, ನಿವೇದಿತಾ ಚಕ್ರಸಾಲಿ, ಲಿಂಗರಾಜ ತಳ್ಳಳ್ಳಿ ಅವರನ್ನು ಸಚಿವ ಸಿ.ಸಿ.ಪಾಟೀಲ ಸತ್ಕರಿಸಿ ಪ್ರೋತ್ಸಾಹಿಸಿದರು.

Advertisement

ಮೊರಾರ್ಜಿ ಶಾಲೆ ಪ್ರಾಚಾರ್ಯೆ ರೂಪಾ ನಾಯ್ಡು, ಶಿಕ್ಷಕರಾದ ಎಂ.ಕೆ.ಅಲ್ಲಿಭಾಯಿ, ನಿತಿನ್‌ ಕೇಸರಕರ, ಅಶ್ವಿ‌ನಿ ಹೂಲಿ, ಶೋಬಾ ಗದಗಿನ, ಮಂಜುನಾಥ ತಳವಾರ, ಶ್ರೀಶೈಲ ಮಾದರ ಅವರನ್ನು ಕೂಡ ಸಚಿವರು ಸತ್ಕರಿಸಿ, ಅವರ ಸೇವೆ ಸ್ಮರಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಯುವ ನಾಯಕ ಉಮೇಶಗೌಡ ಪಾಟೀಲ, ಮಂಜು ಮೆಣಸಗಿ, ಗುರಪ್ಪ ಆದೆಪ್ಪನವರ, ರಾಜುಗೌಡ ಪಾಟೀಲ, ಅನಿಲ ಧರಿಯಣ್ಣವರ, ಡಾ|ಸಿ.ಕೆ.ರಾಚನಗೌಡ್ರ, ಸಿದ್ದೇಶ ಹೂಗಾರ ಮುಂತಾದವರಿದ್ದರು.

ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮೊರಾರ್ಜಿ ಶಾಲೆಯ ಸಾಧನೆ ಬಹಳ ಖುಷಿ ತಂದಿದೆ. ಜಿಲ್ಲೆಯ ಫಲಿತಾಂಶ ಉತ್ತಮ ಸಾಧನೆಯ ಮೂಲಕ ರಾಜ್ಯಕ್ಕೆ ಜಿಲ್ಲೆ 14ನೇ ಸ್ಥಾನ ಪಡೆದುಕೊಂಡಿದ್ದು ಹೆಮ್ಮೆಯ ಸಂಗತಿ. ಇದು ಬೆಳಗಾವಿ ವಿಭಾಗದಲ್ಲಿ ಗದಗ ಜಿಲ್ಲೆ ಟಾಪ್‌ ಎನಿಸಿಕೊಂಡಿದ್ದು, ಜಿಲ್ಲೆಯ ಶಿಕ್ಷಣ ಇಲಾಖೆಯ ಎಲ್ಲ ಅಧಿಕಾರಿ ವರ್ಗ, ಶಿಕ್ಷಕರು, ಶಿಕ್ಷಕಿಯರು ಮತ್ತು ಶಿಕ್ಷಕೇತರ ಸಿಬ್ಬಂದಿಯನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಸಿ.ಸಿ.ಪಾಟೀಲ, ಲೋಕೋಪಯೋಗಿ ಸಚಿವರು

 

Advertisement

Udayavani is now on Telegram. Click here to join our channel and stay updated with the latest news.

Next