ಚೇತನ್ ಚಂದ್ರ ನಾಯಕರಾಗಿರುವ “ಪ್ರಭುತ್ವ’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಮೊದಲ ಹಂತವಾಗಿ ಚಿತ್ರತಂಡ ಚಿತ್ರದ ಮೆಲೋಡಿ ಹಾಡೊಂದನ್ನು ಬಿಡುಗಡೆ ಮಾಡಿದೆ. ನೀನೇನಾ ನೀನೇನಾ.. ಎಂಬ ಹಾಡನ್ನು ರಿಲೀಸ್ ಮಾಡಿದೆ. ರವಿರಾಜ್ ಎಸ್ ಕುಮಾರ್ ನಿರ್ಮಾಣದ ಈ ಚಿತ್ರವನ್ನು ಆರ್.ರಂಗನಾಥ್ ನಿರ್ದೇಶಿಸಿದ್ದಾರೆ.
ಚಿತ್ರದ ಬಗ್ಗೆ ಮಾತನಾಡುವ ನಾಯಕ ಚೇತನ್ ಚಂದ್ರ, “ಪ್ರಭುತ್ವ ಚಿತ್ರ ನನ್ನ ಸಿನಿಪಯಣದಲ್ಲೇ ಬಿಗ್ ಬಜೆಟ್ ಚಿತ್ರ ಎನ್ನಬಹುದು. ಇದಕ್ಕೆ ಕಾರಣ ನಿರ್ಮಾಪಕರು. ಯಾವುದಕ್ಕೂ ಕೊರತೆ ಇಲ್ಲದೆ ನಿರ್ಮಾಣ ಮಾಡಿದ್ದಾರೆ. ಇನ್ನು, ನಿರ್ದೇಶಕ ರಂಗನಾಥ್ ಚಿತ್ರವನ್ನು ಅದ್ಭುತವಾಗಿ ನಿರ್ದೇಶಿಸಿದ್ದಾರೆ. ನನ್ನ ಪಾತ್ರ ಕೂಡ ಚೆನ್ನಾಗಿದೆ. ಹಾಡು ಬಿಡುಗಡೆ ಸಮಾರಂಭ ಆಗಿರುವುದರಿಂದ, ಹಾಡಿನ ಬಗ್ಗೆ ಹೇಳುತ್ತೇನೆ. ನಿರ್ದೇಶಕ ಹರಿ ಸಂತೋಷ್ ಈ ಹಾಡನ್ನು ಬರೆದಿದ್ದು, ಕಾರ್ತಿಕ್ ಹಾಗೂ ಸುಪ್ರಿಯಾ ರಾಮ್ ಸೊಗಸಾಗಿ ಹಾಡಿದ್ದಾರೆ. ಎಮಿಲ್ ಅಷ್ಟೇ ಚೆನ್ನಾಗಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಛಾಯಾಗ್ರಾಹಕ ಕೆ.ಎಸ್ ಚಂದ್ರಶೇಖರ್ ಅವರ ಛಾಯಾಗ್ರಹಣ ಕೂಡ ಸುಂದರವಾಗಿದೆ. ಸದ್ಯದಲ್ಲೇ ಟ್ರೇಲರ್ ಬಿಡುಗಡೆಯಾಗಲಿದೆ. ನನ್ನ ಜೊತೆ ನಟಿಸಿರುವ ಎಲ್ಲಾ ಕಲಾವಿದರು ಉತ್ತಮವಾಗಿ ನಟಿಸಿದ್ದಾರೆ’ ಎಂದರು.
ನಿರ್ದೇಶಕ ರಂಗನಾಥ್ ಮಾತನಾಡಿ, “ನಾನು ಈ ಹಿಂದೆ ಅರಿವು ಹಾಗೂ ಕೂಗು ಎಂಬ ಚಿತ್ರಗಳನ್ನು ನಿರ್ದೇಶಿಸಿದ್ದೇನೆ. ಇದು ನನ್ನ ಮೂರನೇ ಚಿತ್ರ. ನಿರ್ಮಾಪಕ ರವಿರಾಜ್ ಅವರ ತಂದೆ ಮೇಘಡಹಳ್ಳಿ ಡಾ. ಶಿವಕುಮಾರ್ ಅವರೇ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಸಂಭಾಷಣೆ ವಿನಯ್ ಅವರದು. ಎಮಿಲ್ ಸಂಗೀತ ಸಂಯೋಜಿಸಿರುವ ನಾಲ್ಕು ಹಾಡುಗಳು ಚಿತ್ರದಲ್ಲಿದೆ. ಇಂದು ಮೊದಲ ಹಾಡು ಬಿಡುಗಡೆಯಾಗಿದೆ. ಮತದಾನದ ಮಹತ್ವ ಸಾರುವ ಚಿತ್ರ ಅಂತ ಹೇಳಬಹುದು. ಚೇತನ್ ಚಂದ್ರ, ಪಾವನಾ, ಶರತ್ ಲೋಹಿತಾಶ್ವ, ವಿಜಯ್ ಚೆಂಡೂರ್, ಡ್ಯಾನಿ ಎಲ್ಲಾ ಕಲಾವಿದರ ಅಭಿನಯ ಹಾಗೂ ತಂತ್ರಜ್ಞರ ಉತ್ತಮ ಕಾರ್ಯವೈಖರಿಯಿಂದ ಚಿತ್ರ ಚೆನ್ನಾಗಿ ಬಂದಿದೆ. ಮುಂದಿನ ದಿನಗಳಲ್ಲಿ ಇನ್ನೂ ಎರಡು ಹಾಡುಗಳು ಹಾಗೂ ಟ್ರೇಲರ್ ಬಿಡುಗಡೆಯಾಗಲಿದೆ’ ಎಂದು ಮಾಹಿತಿ ನೀಡಿದರು.
ನಾಯಕಿ ಪಾವನಾ ಈ ಚಿತ್ರದಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರಂತೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದೆ. ಮೊದಲು ಮೊಲೋಡಿ ಸಾಂಗ್ ಬಿಡುಗಡೆಯಾಗಿದೆ. ಕಾರ್ತಿಕ್ ಹಾಗೂ ಸುಪ್ರಿಯಾರಾಮ್ ಈ ಹಾಡನ್ನು ಹಾಡಿದ್ದಾರೆ ಎಂದು ಸಂಗೀತ ನಿರ್ದೇಶಕ ಎಮಿಲ್ ಮಾಹಿತಿ ನೀಡಿದರು.
ನಟರಾದ ಶರತ್ ಲೋಹಿತಾಶ್ವ, ವಿಜಯ್ ಚೆಂಡೂರ್, ಡ್ಯಾನಿ ತಮ್ಮ ಪಾತ್ರಗಳ ಬಗ್ಗೆ ಮಾತನಾಡಿದರು. ನಿರ್ಮಾಪಕ ರವಿರಾಜ್ ಎಸ್ ಕುಮಾರ್ ಸಿನಿಮಾ ಬಗ್ಗೆ ಮಾತನಾಡಿದರು.