Advertisement

ಗೋವುಗಳ ಸಂತತಿ ರಕ್ಷಣೆಗಾಗಿ ಗೋಮಾತಾ ಸಹಕಾರ ಸಂಘ ಸ್ಥಾಪನೆ: ಪ್ರಭು ಚವ್ಹಾಣ್

05:34 PM Jul 12, 2022 | Team Udayavani |

ಬೆಂಗಳೂರು: ಗೋಶಾಲೆಗಳ ಅಭಿವೃದ್ಧಿ ಮತ್ತು ಗೋವುಗಳ ಸಂತತಿ ರಕ್ಷಣೆಗಾಗಿ ಸರ್ಕಾರ ಗೋಮಾತಾ ಸಹಕಾರ ಸಂಘ ಸ್ಥಾಪನೆ ಮಾಡಿದೆ ಎಂದು ಪಶುಸಂಗೋಪನೆ ಸಚಿವ ಪ್ರಭು ಬಿ.ಚವ್ಹಾಣ್ ಸ್ವಷ್ಟಪಡಿಸಿದರು.

Advertisement

ಹೆಬ್ಬಾಳದಲ್ಲಿರುವ ಕರ್ನಾಟಕ ಪಶುವೈದ್ಯಕೀಯ ಪರಿಷತ್ತು ಸಭಾಂಗಣದಲ್ಲಿ ಗೋಮಾತಾ ಸಹಕಾರ ಸಂಘ ಸ್ಥಾಪನೆ ಹಾಗೂ ಪುಣ್ಯಕೋಟಿ ದತ್ತು ಯೋಜನೆ ಕುರಿತ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಗೋವುಗಳ ಸಾಕಾಣಿಕೆಯಲ್ಲಿ ರಾಜ್ಯದ ಖಾಸಗಿ ಗೋಶಾಲೆಗಳು ಪ್ರಮುಖ ಪಾತ್ರ ವಹಿಸಿವೆ. ಗೋವುಗಳ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಗೋಶಾಲೆಗಳೊಂದಿಗೆ ಸರ್ಕಾರ ಸದಾ ಜತೆಗಿರಲಿದೆ ಎಂದು ಪ್ರಭು ಚವ್ಹಾಣ್ ಹೇಳಿದರು.

ಗೋಶಾಲೆಗಳಿಗೆ ಅಗತ್ಯವಾಗಿ ಬೇಕಾಗಿರುವ ಕ್ಯಾಟಲ್ ಟ್ರೇವಿಸ್, ಗೋವು ಲಿಫ್ಟಿಂಗ್ ಮೆಷಿನ್, ಔಷಧಗಳು, ಗೋವುಗಳ ಆರೈಕೆ, ಪಾಲನೆ ಮತ್ತು ಪೋಷಣೆಗಾಗಿ ಪಶು ವೈದ್ಯರ ಸೇವೆ ಒದಗಿಸುವುದು, ಪಶು ಸಂಜೀವಿನಿ ಆ್ಯಂಬುಲೆನ್ಯ್ ಸೇವೆ ಒದಗಿಸುವುದು ಮತ್ತು ಗೋ ಉತ್ಪನ್ನಗಳ ತಯಾರಿಕಾ ತರಬೇತಿ ನೀಡಲು ಸರ್ಕಾರ ಸಿದ್ಧವಿದೆ ಎಂದು ಪ್ರಭು ಚವ್ಹಾಣ್ ಖಾಸಗಿ ಗೋಶಾಲೆಗಳಿಗೆ ಅಭಯ ನೀಡಿದರು.

ಇದನ್ನೂ ಓದಿ : ಬಕ್ರೀದ್ ಸಂದರ್ಭದ ರಾಜ್ಯಾದ್ಯಂತ 707 ಜಾನುವಾರುಗಳ ರಕ್ಷಣೆ, 67 ಜನರ ಬಂಧನ : ಪ್ರಭು ಚವ್ಹಾಣ್

Advertisement

ಗೋವುಗಳಿಂದ ಉತ್ಪತ್ತಿಯಾಗುವ ಗಂಜಲ ಮತ್ತು ಸಗಣಿಯಿಂದ ತಯಾರಿಕೆ ಮಾಡಲಾಗುತ್ತಿರುವ ಗಣಪತಿ, ಗೌರಿ, ದೀಪ, ಗೋಡೆ ಗಡಿಯಾರ, ಸುಗಂಧಭರಿತ ಗವ್ಯ ಉತ್ಪನ್ನಗಳು, ಸೋಪು, ಶ್ಯಾಂಪು ಮನೆ ಆಲಂಕಾರಿಕ ವಸ್ತುಗಳು, ಸ್ಮರಣಿಕೆಗಳು, ಗಂಧದಕಡ್ಡಿ ಸೇರಿದಂತೆ ನೂರಾರು ಉತ್ಪನ್ನಗಳನ್ನು ಉತ್ಪತ್ತಿ‌ ಮಾಡಲು ಸಾಧ್ಯವಿದೆ ಎನ್ನುವುದಕ್ಕೆ ನಮ್ಮ ಗೋಶಾಲೆಗಳು ಸಾಕ್ಷಿಯಾಗಿವೆ ಎಂದು ಸಚಿವ ಪ್ರಭು ಚವ್ಹಾಣ್ ಹೇಳಿದರು.

ಗೋವುಗಳನ್ನು ರಕ್ಷಣೆ ಮಾಡುವ ಉದ್ದೇಶದಿಂದ ಸರ್ಕಾರ ಜಿಲ್ಲೆಗೊಂದರಂತೆ ಗೋಶಾಲೆಗಳನ್ನು ಸ್ಥಾಪಿಸಲಾಗಿದೆ. ಗೋಶಾಲೆಗಳಲ್ಲಿ ಉತ್ಪತ್ತಿಯಾಗುವ ಸಗಣಿ ಮತ್ತು ಗಂಜಲವನ್ನು ಮರುಬಳಕೆ ಮಾಡಿಕೊಂಡು ಉಪ ಉತ್ಪನ್ನಗಳನ್ನು ತಯಾರಿಕೆ ಮಾಡಲು ಕ್ರಮ ವಹಿಸಲಾಗುವುದು ಎಂದು ಪ್ರಭು ಚವ್ಹಾಣ್ ತಿಳಿಸಿದರು‌.

ಖಾಸಗಿ ಗೋಶಾಲೆಗಳಲ್ಲಿ ಗೋವುಗಳನ್ನು ಸಾಕಾಣಿಕೆ ಮಾಡುವುದರ ಜತೆಗೆ ಹಾಲು ಮತ್ತು ಹಾಲಿನ ಉತ್ಪನ್ನಗಳ ಉತ್ಪಾದನೆ, ಉಪ ಉತ್ಪನ್ನಗಳನ್ನು ತಯಾರಿಕೆ ಮಾಡಲಾಗುತ್ತಿದೆ. ಇವುಗಳನ್ನು ಮಾರಾಟ ಮಾಡಲು ಸೂಕ್ತ ವೇದಿಕೆ ನಿರ್ಮಾಣ ಮಾಡಿರುವುದೇ ಗೋಮಾತಾ ಸಹಕಾರ ಸಂಘ ಎಂದು ಪ್ರಭು ಚವ್ಹಾಣ್ ತಿಳಿಸಿದರು.

ಕೆಎಂಎಫ್ ಮಾದರಿಯಲ್ಲಿ ಗೋಮಾತಾ ಸಹಕಾರ ಸಂಘ ಸ್ಥಾಪನೆ ಮಾಡುತ್ತಿರುವುದು ಎಲ್ಲಾ ಉತ್ಪನ್ನಗಳನ್ನು ಒಂದೆಡೆ ಮಾರಾಟ ಮಾಡಲು ಹಾಗೂ ಕೊಂಡುಕೊಳ್ಳಲು ವೇದಿಕೆ ಸಿಕ್ಕಂತಾಗಿದೆ. ಇದನ್ನು ಎಲ್ಲರೂ ಬಳಕೆ ಮಾಡಿಕೊಳ್ಳಬೇಕೆಂದು ಸಚಿವರು ಕರೆ ನೀಡಿದರು.

ಇದನ್ನೂ ಓದಿ : ಸಿದ್ದರಾಮೋತ್ಸವ ಆಚರಣೆ ಕುರಿತು ಸಿದ್ದರಾಮಯ್ಯ ಅವರು ಹೇಳಿದ್ದೇನು?

ಗೋಮಾತಾ ಸಹಕಾರ ಸಂಘವು ಮುಂದಿನ ದಿನಗಳಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಲಿ ಎಂದು ಶುಭ ಹಾರೈಸಿದ ಸಚಿವ ಪ್ರಭು ಚವ್ಹಾಣ್, ಜಾನುವಾರು ಸಂರಕ್ಷಣೆಯೇ ಗೋಮಾತಾ ಸಹಕಾರ ಸಂಘ ಸ್ಥಾಪನೆ ಮತ್ತು ಪುಣ್ಯಕೋಟಿ ದತ್ತು ಯೋಜನೆ ಜಾರಿಯ ಮೂಲ ಉದ್ದೇಶ ಎಂದು ಸ್ಪಷ್ಟಪಡಿಸಿದರು.

ಪುಣ್ಯಕೋಟಿ ದತ್ತು ಯೋಜನೆಗೆ ಈಗಾಗಲೇ ರಾಜ್ಯಾದ್ಯಂತ 17000 ಗೋವುಗಳನ್ನು ನೋಂದಣಿ ಮಾಡಲಾಗಿದೆ. 25000 ಗೋವುಗಳನ್ನು ನೋಂದಣಿ ಮಾಡುವ ಗುರಿ ಹೊಂದಲಾಗಿದೆ. ಪುಣ್ಯಕೋಟಿ ದತ್ತು ಯೋಜನೆಯನ್ನು ಅತಿ ಶೀಘ್ರದಲ್ಲೇ ಲೋಕಾರ್ಪಣೆಗೊಳಿಸಲಾಗುವುದು ಎಂದು ಪ್ರಭು ಚವ್ಹಾಣ್ ಹೇಳಿದರು.

ಕರ್ನಾಟಕ ಪಶುವೈದ್ಯಕೀಯ ಪರಿಷತ್ತು ಅಧ್ಯಕ್ಷ ಡಾ.ಸತ್ಯನಾರಾಯಣ, ಇಲಾಖೆ ನಿರ್ದೇಶಕ ಡಾ.ಮಂಜುನಾಥ್ ಪಾಳೇಗಾರ್, ಅಪರ ನಿರ್ದೇಶಕ ಶ್ರೀನಿವಾಸ್ ಸೇರಿದಂತೆ ಖಾಸಗಿ ಗೋಶಾಲೆಗಳ ಪ್ರಮುಖರು, ಸಾರ್ವಜನಿಕರು ಹಾಜರಿದ್ದು, ಸೂಕ್ತ ಸಲಹೆಗಳನ್ನು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next