ಬೀದರ: ಅನಿರೀಕ್ಷಿತ ಭಾರೀ ಮಳೆಯಿಂದ ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದ ಬೆಳೆ, ಆಸ್ತಿ ಹಾನಿಯಾಗಿದೆ. ಸರ್ಕಾರವು ರೈತರ ಪರವಾಗಿದ್ದು, ಯಾವುದೇ ಕಾರಣಕ್ಕೂ ಅನ್ನದಾತರಿಗೆಅನ್ಯಾಯವಾಗಲು ಬಿಡುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಭರವಸೆ ನೀಡಿದರು.
ಔರಾದ ತಾಲೂಕಿನ ಕೌಠಾ ಸೇತುವೆಗೆ ಶುಕ್ರವಾರ ಭೇಟಿ ನೀಡಿದ ವೇಳೆ ರೈತರೊಂದಿಗೆ ಮಾತನಾಡಿದ ಸಚಿವರು, ಎಲ್ಲರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಲಿದ್ದು, ಸಾರ್ವಜನಿಕರು ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗಬಾರದು. ಸಮಗ್ರ ವರದಿಯನ್ನು ಸಂಗ್ರಹಿಸಿ ಶೀಘ್ರದಲ್ಲಿ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.
ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿದ ಮಳೆಯಿಂದ ಹಾನಿ ಸಂಭವಿಸಿರುವ ಬಗ್ಗೆ ಮುಖ್ಯಮಂತ್ರಿಗಳು ಮತ್ತು ಕೃಷಿ ಸಚಿವರಿಗೆ ಮನವರಿಕೆ ಮಾಡಿದ್ದೇನೆ. ಅದರಂತೆಈಗಾಗಲೇ ಬೀದರ ಜಿಲ್ಲೆಯ ಎಲ್ಲ ತಾಲೂಕುಗಳನ್ನುಅತಿವೃಷ್ಟಿ ಪೀಡಿತ ಪ್ರದೇಶಗಳೆಂದು ಘೋಷಿಸಲಾಗಿದೆಎಂದು ತಿಳಿಸಿದ ಸಚಿವರು, ಕೃಷಿ, ತೋಟಗಾರಿಕೆ ಹಾಗೂಕಂದಾಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಹಾನಿ ಬಗ್ಗೆ ಸಮೀಕ್ಷೆ ನಡೆಸುವಂತೆ ಸೂಚಿಸಲಾಗಿದೆ. ಸರ್ವೇ ಕಾರ್ಯ ಚುರುಕುಗೊಳಿಸುವಂತೆಯೂ ನಿರ್ದೇಶನ ನೀಡಲಾಗಿದೆ. ಅಧಿಕಾರಿಗಳು ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು. ಸಮೀಕ್ಷಾ ಕಾರ್ಯದಲ್ಲಿ ಲೋಪಗಳು ಜರುಗಿದಲ್ಲಿ ಸಂಬಂಧಿ ಸಿದವರ ವಿರುದ್ಧ ಸೂಕ್ತ ಕ್ರಮ ಜರುಗಿಸುವ ಎಚ್ಚರಿಕೆ ನೀಡಿದ್ದೇನೆ ಎಂದರು.
ಮಳೆಯಿಂದಾಗಿ ನೀರಿನ ಮಟ್ಟ ಏರಿಕೆಯಾಗಿದ್ದು,ಸೇತುವೆ ಸುತ್ತಮುತ್ತಲಿನ ಹೊಲಗಳಲ್ಲಿ ನೀರು ನುಗ್ಗಿ ಸಾಕಷ್ಟುಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ. ನೀರಿನ ರಭಸಕ್ಕೆ ಕಟಾವಿಗೆ ಬಂದಿದ್ದ ಸೋಯಾಬಿನ್ ನೀರು ಪಾಲಾಗಿದ್ದು, ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿದೆ. ದಯವಿಟ್ಟು ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ರೈತರು ಸಚಿವರಲ್ಲಿ ಮನವಿಮಾಡಿದರು. ಬಳಿಕ ಜಿಲ್ಲೆಯ ಆಣದೂರ ಗ್ರಾಮದಲ್ಲಿ ರೈತರ ಕೃಷಿ ಜಮೀನುಗಳಿಗೆ ಭೇಟಿ ನೀಡಿ, ಬೆಳೆ ಹಾನಿ ಬಗ್ಗೆ ಖುದ್ದುಪರಿವೀಕ್ಷಣೆ ನಡೆಸಿದರು. ತೀವ್ರ ಮಳೆಯಿಂದಾಗಿ ರೈತರೊಬ್ಬರಜಮೀನಿನಲ್ಲಿ ಕಬ್ಬು ಸಂಪೂರ್ಣ ನೆಲಕ್ಕೆ ಉರುಳಿರುವುದನ್ನುಗಮನಿಸಿದರು. ಈ ಸಂದರ್ಭದಲ್ಲಿ ರೈತರು, ಮುಖಂಡರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.
ಸಂತ್ರಸ್ತರ ನೆರವಿಗೆ ತಕ್ಷಣ ಧಾವಿಸಿ : ಜಿಲ್ಲೆಯ ಕಾರಂಜಾ ಜಲಾಶಯಕ್ಕೆ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅವರು ಭೇಟಿ ನೀಡಿ, ನೀರಿನ ಮಟ್ಟ ಹಾಗೂ ಒಳಹರಿವಿನ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಂದ ವಿವರಣೆ ಪಡೆದರು. ಈ ವೇಳೆ ಮಾತನಾಡಿದ ಸಚಿವರು, ನೆರೆಯ ಮಹಾರಾಷ್ಟ್ರದಲ್ಲಿ ವಿಪರೀತ ಮಳೆಯಾಗಿರುವುದರಿಂದ ಜಲಾಶಯಕ್ಕೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಬರುವ ಸಾಧ್ಯತೆಗಳಿವೆ. ಹಾಗಾಗಿ ನದಿ ಪಾತ್ರದ ಗ್ರಾಮಗಳಲ್ಲಿ
ಅಗತ್ಯ ಮುಂಜಾಗ್ರತೆ ಕೈಗೊಳ್ಳಬೇಕು. ಮುಳುಗಡೆ ಭೀತಿ ಇರುವ ಗ್ರಾಮಗಳಲ್ಲಿನ ಜನ-ಜಾನುವಾರುಗಳನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರ ಮಾಡಲು ಕ್ರಮ ವಹಿಸುವಂತೆ ಅಧಿ ಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು. ಮನೆಗೆ ನೀರು ನುಗ್ಗಿ ಸಂಕಷ್ಟ ಎದುರಿಸುತ್ತಿರುವುದು ಕಂಡುಬಂದಲ್ಲಿ ತಕ್ಷಣ ಅಂಥವರ ನೆರವಿಗೆ ಧಾವಿಸಬೇಕು. ನೀರು ಮನೆಗಳಲ್ಲಿ ನುಗ್ಗಿ ಆಹಾರಧಾನ್ಯಗಳೆಲ್ಲವೂ ನಾಶವಾಗುತ್ತವೆ. ಅಂಥಹ ಕುಟುಂಬಸ್ಥರಿಗೆ ನೆರವು ಕಲ್ಪಿಸಬೇಕು ಯಾರೊಬ್ಬರೂ ಸಹ ಸಂಕಷ್ಟ ಎದುರಿಸದ ಹಾಗೆ ನೋಡಿಕೊಳ್ಳಬೇಕು. ಕಂದಾಯ ಇಲಾಖೆ ಹಾಗೂ ಗ್ರಾಪಂ ಅಧಿಕಾರಿಗಳಿಗೆ ಈ ಬಗ್ಗೆ ಗಮನ ಹರಿಸುವಂತೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು. ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿರುವುದರಿಂದ ಜಿಲ್ಲೆಯ ಹಲವೆಡೆ ಮನೆಗಳು ಹಾನಿಯಾಗಿರುವ ಘಟನೆಗಳು ನಡೆದಿವೆ. ಕೂಡಲೇ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿ, ಪರಿಹಾರ ಬಿಡುಗಡೆಗೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಸಾರ್ವಜನಿಕರಲ್ಲಿ ಮನವಿ: ವ್ಯಾಪಕ ಮಳೆಯಿಂದಾಗಿ ಜಿಲ್ಲೆಯಲ್ಲಿರುವ ನದಿ, ಹಳ್ಳಗಳು, ಕೆರೆ, ಬಾವಿಗಳೆಲ್ಲಾ ಭರ್ತಿಯಾಗಿವೆ. ಈಸಂದರ್ಭದಲ್ಲಿ ಯಾರೊಬ್ಬರೂ ಕೂಡ ನದಿ, ಹಳ್ಳ ಕೊಳ್ಳ, ಸೇತುವೆಗಳನ್ನು ದಾಟಲು ಪ್ರಯತ್ನಿಸಬಾರದು. ನೀರು ಹರಿಯುವ ಸ್ಥಳಗಳಲ್ಲಿ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸಬಾರದು ಎಂದು ಸಚಿವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.